ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ವವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ: ಕೆ.ಎಸ್.ಈಶ್ವರಪ್ಪ

Update: 2021-08-05 14:22 GMT

ಶಿವಮೊಗ್ಗ(ಆ.5):ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಸ್ಪಷ್ಟ ಬಹುಮತದೊಂದಿಗೆ ಸ್ವತಂತ್ರವಾಗಿ ಅಧಿಕಾರಕ್ಕೆ ತರಬೇಕೆನ್ನುವ ಗುರಿ ನಮ್ಮದಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ನೂತನ ಸಚಿವರ ಸ್ವಾಗತ ಮತ್ತು ಅಭಿನಂದನಾ ಸಮಾರಂಭದಲ್ಲಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು. 'ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಇಡೀ ಜಿಲ್ಲೆಗೆ ಬಿಜೆಪಿಯನ್ನು ವಿಸ್ತರಿಸಲು ಅಡ್ಡಿಯಾಗಿರುವ ಭದ್ರಾವತಿಯನ್ನೂ ಜಯಗಳಿಸುವ ಮೂಲಕ ರಾಜ್ಯ ಬಿಜೆಪಿಗೆ 7 ಸ್ಥಾನಗಳ ಕೊಡುಗೆ ನೀಡಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ' ಎಂದರು. 

ಜ್ಞಾನೇಂದ್ರ ಅವರು ಬಹಳ ಹಿಂದೆಯೆ ಸಚಿವರಾಗಬೇಕಿತ್ತು. ಈಗ ಮಂತ್ರಿಯಾಗಿರುವುದಕ್ಕೆ ಹೊರಗಿನಿಂದ ಹಲವರು ಬಂದು ನಮ್ಮ ಜತೆ ಕೈಜೋಡಿಸಿದ ಕಾರಣದಿಂದಾಗಿ ನಾವೆಲ್ಲ ಮತ್ತೆ ಮಂತ್ರಿಯಾಗಲು ಸಾಧ್ಯವಾಗಿದೆ. ಹೀಗಾಗಿ ನಾವೀಗ ಗೆದ್ದಿರುವ ಸ್ಥಾನಗಳನ್ನು ಉಳಿಸಿಕೊಂಡು ಭದ್ರಾವತಿಯನ್ನೂ ಗೆಲ್ಲಬೇಕಾದ ಜವಾವ್ದಾರಿ ಇದೆ. ಈ ನಿಟ್ಟಿನಲ್ಲಿ ಜಿಲ್ಲಾಧ್ಯಕ್ಷ ಮೇಘರಾಜ ಅವರ ಮೇಲೆ ದೊಡ್ಡ ಹೊಣೆಗಾರಿಕೆ ಇದೆ ಎಂದರು.

ಮೊದಲ ಬಾರಿ ಸಚಿವರಾಗಿ ಶಿವಮೊಗ್ಗಕ್ಕೆ ಬಂದ ಆರಗ ಜ್ಞಾನೇಂದ್ರ ಅವರು ಅಭಿನಂದನೆ ಸ್ವೀಕರಿಸಿ, ಸರಕಾರಕ್ಕೆ ಈಗ ಉಳಿದಿರುವುದು ಎರಡು ವರ್ಷ ಮಾತ್ರ. ಈಗ ನಮ್ಮ ಮುಂದೆ ಜಿಪಂ, ತಾಪಂ ಸೇರಿ ಹಲವು ಚುನಾವಣೆಗಳು ಇವೆ. ಚುನಾವಣೆಗಳನ್ನು ನಡೆಸುವುದರಲ್ಲಿಯೇ ಸಮಯ ಕಳೆದುಹೋಗುವ ಭಯವಿದೆ. ಇದರ ನಡುವೆಯೂ ನಾವು ಜನರ ನಿರೀಕ್ಷೆಗೆ ಅನುಗುಣವಾಗಿ ಕೆಲಸ ಮಾಡಬೇಕಿದೆ. ಅದಕ್ಕೆ ಪಕ್ಷದ ಕಾರ್ಯಕರ್ತರು ಕೈ ಜೋಡಿಸಬೇಕು ಎಂದು ತಿಳಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ ಅಧ್ಯಕ್ಷತೆ ವಹಿಸಿದ್ದರು. ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಮೇಯರ್ ಸುನೀತಾ ಅಣ್ಣಪ್ಪ, ಎಂಎಡಿಬಿ ಮಾಜಿ ಅಧ್ಯಕ್ಷ ಪದ್ಮನಾಭ ಭಟ್, ಮುಖಂಡ ಗಿರೀಶ್ ಪಟೇಲ್ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News