ಕೋವಿಡ್ ನಿಯಂತ್ರಣದಲ್ಲಿ ಮಾಧ್ಯಮದ ಪಾತ್ರ ಮುಖ್ಯ: ಬಿಬಿಎಂಪಿ ಮುಖ್ಯಆಯುಕ್ತ ಗೌರವ್‍ ಗುಪ್ತಾ

Update: 2021-08-05 14:20 GMT

ಬೆಂಗಳೂರು, 5: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಿಬಿಎಂಪಿ, ಪೊಲೀಸ್ ಇಲಾಖೆ ಅಗತ್ಯ ಕ್ರಮಕೈಗೊಂಡಿದ್ದು, ಇದರ ಜೊತೆಗೆ ಮಾಧ್ಯಮದವರ ಪಾತ್ರ ಪ್ರಮುಖವಾದದ್ದೆಂದು ಬಿಬಿಎಂಪಿ ಮುಖ್ಯಆಯುಕ್ತ ಗೌರವ್‍ಗುಪ್ತ ತಿಳಿಸಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತಹ ಮಹತ್ತರವಾದ ಕಾರ್ಯದಲ್ಲಿ ಮಾಧ್ಯಮ ಕ್ಷೇತ್ರ ತೊಡಗಿದ್ದು, ಮತ್ತಷ್ಟು ಪರಿಣಾಮಕಾರಿ ರೀತಿಯಲ್ಲಿ ಕಾರ್ಯೋನ್ಮುಖವಾಗಬೇಕಾದ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ.
ಪೋಷಕರ ಪಾತ್ರ: ಕೋವಿಡ್‍ನಿಂದ ಮಕ್ಕಳನ್ನು ರಕ್ಷಿಸಲು ಪೋಷಕರು ಹೆಚ್ಚು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಪ್ರಥಮವಾಗಿ ಪೋಷಕರು ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹಾಗೂ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ. 

ಕೋವಿಡ್ ಮೂರನೇ ಅಲೆಯ ನಿಯಂತ್ರಣಕ್ಕೆ ತಜ್ಞ ಸಮಿತಿ ಸೂಚಿಸುವ ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಬಿಬಿಎಂಪಿ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಸದ್ಯ, ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಹೊರರಾಜ್ಯದ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ, ಕ್ವಾರಂಟೈನ್ ಮಾಡಲು 11ಕ್ಕೂ ಹೆಚ್ಚು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News