ಬಿಜೆಪಿ ಹೈಕಮಾಂಡ್ ಒಪ್ಪಿಗೆ ಪಡೆದು ಅಣ್ಣಾಮಲೈ ಉಪವಾಸ: ಬಡಗಲಪುರ ನಾಗೇಂದ್ರ ಆಕ್ರೋಶ

Update: 2021-08-05 14:35 GMT

ಮೈಸೂರು,ಆ.5: ಮೇಕೆದಾಟು ಯೋಜನೆ ವಿರೋಧಿಸಿ ಉಪವಾಸ ಕೈಗೊಂಡಿರುವ ಮಾಜಿ ಐಪಿಎಸ್ ಅಣ್ಣಾಮಲೈ ರಾಜಕೀಯ ದುರುದ್ದೇಶದಿಂದ ಮತ್ತು ಬಿಜೆಪಿ ಹೈಕಮಾಂಡ್ ಒಪ್ಪಿಗೆ ಪಡೆದೇ ಹೋರಾಟಕ್ಕೆ ಮುಂದಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ವಿರೋಧಿಸವು ಮೂಲಕ ಅಣ್ಣಾಮಲೈ ತಮಿಳುನಾಡಿನ ಹೀರೋ ಆಗಲು ಹೊರಟಿದ್ದಾರೆ. ಇವರ ಹೋರಾಟದ ಹಿಂದ ರಾಜಕೀಯ ದುರುದ್ದೇಶವಿರುವುದು ಕಂಡು ಬರುತ್ತಿದೆ. ಬಿಜೆಪಿ ಹೈಕಮಾಂಡ್ ಅನುಮತಿ ಪಡೆದೇ ಇವರು ಹೋರಾಟಕ್ಕೆ ಇಳಿದಿದ್ದಾರೆ ಎಂದು ಕಿಡಿಕಾರಿದರು.

ಈ ಹಿಂದೆಯೇ ಸುಪ್ರೀಂ ಕೋರ್ಟ್  ಮೇಕೆ ದಾಟು ಯೋಜನೆಗೆ ಅನುಮತಿ ನೀಡಿದೆ. ಈ ಯೋಜೆನಯಿಂದ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದಿಯೇ ಹೊರತು ಕರ್ನಾಟಕಕ್ಕಲ್ಲ ಎಂದು ಹೇಳಿದರು.

ಕರ್ನಾಟಕದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದರು, ಮೇಕೆದಾಟು ಯೋಜನೆ ಸಂಬಂದ ಸಂಸತ್‍ನಲ್ಲಿ ಮಾತನಾಡಿ ಯೋಜನೆ ಜಾರಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರಕ್ಕೆ ಉಳಿಗಾಲವಿಲ್ಲ: ರೈತರ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಮೀಟರ್ ಅಳವಡಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ನಡೆ ಅತ್ಯಂತ ಖಂಡನೀಯ, ರೈತರ ತಂಟೆಗೆ ಬಂದರೆ ನಿಮಗೆ ಉಳಿಗಾಲವಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.

ಕೇಂದ್ರ ಸರ್ಕಾರ ವಿದ್ಯುತ್ ಖಾಸಗೀಕರಣ ಮಾಡಲು ಮುಂದಾಗಿದೆ. ಅದರ ಭಾಗವಾಗಿ ರೈತರ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಮೀಟರ್ ಅಳವಡಿಸುವ ಪ್ರಯತ್ನಕ್ಕೆ ಕೈ ಹಾಕಲಾಗುತ್ತಿದೆ. ಇಂತಹ ಯೋಜನೆ ಜಾರಿಗೆ ಬರಲು ರೈತರು ಬಿಡುವುದಿಲ್ಲ, ಸರ್ಕಾರ ಕೈಗೊಳ್ಳುವ ಮೀಟರ್‍ಗಳನ್ನು ಕಿತ್ತೆಸೆದು ನಮ್ಮ ಹೋರಾಟ ಏನು ಎಂದು ತೋರಿಸಬೇಕಾಗುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರುಗಳಾದ ಹೊಸಕೋಟೆ ಬಸವರಾಜು, ಬೊಕ್ಕಳ್ಳಿ ನಂಜುಂಡಸ್ವಾಮಿ, ಅರಸ್, ದಸಂಸ ಮುಖಂಡ ಕಲ್ಲಹಳ್ಳಿ ಕುಮಾರ್, ಪಿ.ಮರಂಕಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News