370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರದ ಕ್ರಮವು ಕೇವಲ ಜ-ಕಾ ವಿವಾದವನ್ನು ಇನ್ನಷ್ಟು ಜಟಿಲಗೊಳಿಸಿದೆ: ಹುರಿಯತ್

Update: 2021-08-05 15:14 GMT

ಶ್ರೀನಗರ,ಆ.5: ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ ಗುರುವಾರಕ್ಕೆ ಎರಡು ವರ್ಷಗಳು ಪೂರ್ಣಗೊಂಡಿದ್ದು,ಇದೇ ವೇಳೆ ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್,ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಳ್ಳುವ ಸರಕಾರದ ‘ಏಕಪಕ್ಷೀಯ’ ಮತ್ತು ‘ನಿರಂಕುಶ’ ನಿರ್ಧಾರವು ಅಂದು ರಾಜ್ಯದಲ್ಲಿದ್ದ ವಿವಾದವನ್ನು ಇನ್ನಷ್ಟು ಜಟಿಲಗೊಳಿಸಿದೆ ಮತ್ತು ಈ ಬಗ್ಗೆ ಭಾರತದ ಪ್ರಜೆಗಳು ಹಾಗೂ ವಿಶ್ವದ ಗಮನವನ್ನು ಸೆಳೆಯಲು ತಾನು ಬಯಸಿದ್ದೇನೆ ಎಂದು ಹೇಳಿದೆ.

   ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡಿದ್ದ ಕ್ರಮವು ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಉದ್ವಿಗ್ನತೆ ಸೃಷ್ಟಿಸಿದ್ದು ವಿವಾದ ಇನ್ನಷ್ಟು ಜಟಿಲಗೊಂಡಿದೆ ಎನ್ನುವುದನ್ನು ಸೂಚಿಸಿತ್ತು ಮತ್ತು ಎಲ್‌ಎಸಿಯಲ್ಲಿ ಕೆಲವು ಶಾಂತಿ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗಿನ ಬಿಕ್ಕಟ್ಟನ್ನು ಬೆಟ್ಟು ಮಾಡಿ ಹೇಳಿರುವ ಹುರಿಯತ್,370 ಮತ್ತು 35-ಎ ವಿಧಿಗಳಿಗೆ ಸಂಬಂಧಿಸಿದಂತೆ ತನ್ನ ತೀವ್ರ ಅಸಮಾಧಾನ ಮತ್ತು ವಿರೋಧವನ್ನು ಪುನರುಚ್ಚರಿಸಿದೆ.

2019,ಆಗಸ್ಟ್‌ಗೆ ಮುನ್ನ ಕಾಶ್ಮೀರವು ರಾಜ್ಯದಲ್ಲಿಯ ಮುಖ್ಯ ಸಮಸ್ಯಾ ಕೇಂದ್ರವಾಗಿತ್ತು ಎಂದು ಕೇಂದ್ರವು ವಾದಿಸುತ್ತದೆ. ಆದರೆ ಅದು ಇಂದು ಲೇಹ್,ಕಾರ್ಗಿಲ್ ಮತ್ತು ಜಮ್ಮು ಸೇರಿದಂತೆ ನಾಲ್ಕು ಸಮಸ್ಯಾ ಕೇಂದ್ರಗಳನ್ನು ಎದುರಿಸುತ್ತಿದೆ,ಈ ಪ್ರದೇಶಗಳಲ್ಲಿಯೂ ಅಸಮಾಧಾನ ಮಡುವುಗಟ್ಟಿದೆ ಎಂದು ಹೇಳಿರುವ ಅದು,ರಾಜಕೀಯ ನಾಯಕರು ಮತ್ತು ಯುವಜನರಿಗೆ ಬಂಧನಗಳ ಬೆದರಿಕೆ ಹಾಗೂ ನಿರಂಕುಶ ಮತ್ತು ಜನವಿರೋಧಿ ಕಾನೂನುಗಳ ಮೂಲಕ ಸ್ಥಳೀಯರ ಮೇಲಿನ ದಾಳಿಯನ್ನು ಸರಕಾರವು ಮುಂದುವರಿಸಿದೆ ಎಂದಿದೆ.

ಕಾಶ್ಮೀರ ವಿವಾದವನ್ನು ಬಗೆಹರಿಸುವ ಅಗತ್ಯವನ್ನು ಭಾರತ ಸರಕಾರವು ಒಪ್ಪಿಕೊಳ್ಳಬೇಕು,ಜನತೆಯ ರಾಜಕೀಯ ಇಚ್ಛೆ ಮತ್ತು ಆಕಾಂಕ್ಷೆಗಳನ್ನು ನಿಜವಾಗಿ ಪ್ರತಿನಿಧಿಸುವವರ ಜೊತೆ ಮಾತುಕತೆಗಳಲ್ಲಿ ತೊಡಗಿಕೊಳ್ಳಬೇಕು ಮತ್ತು ಪ್ರದೇಶದ ಉತ್ತರ ಮತ್ತು ಪಶ್ಚಿಮ ಗಡಿಗಳಲ್ಲಿ ಭೂರಾಜಕೀಯ ಒತ್ತಡಗಳನ್ನು ತಗ್ಗಿಸಬೇಕು ಎಂದು ಹೇಳಿರುವ ಹುರಿಯತ್,ಪಾಕಿಸ್ತಾನದೊಂದಿಗೆ ಮಾತುಕತೆಗಳನ್ನು ಪುನರಾರಂಭಿಸುವಂತೆಯೂ ಸರಕಾರವನ್ನು ಆಗ್ರಹಿಸಿದೆ. ಮಿಲಿಟರಿ ಸಂಘರ್ಷದ ಬದಲಾಗಿ ತಳಮಟ್ಟದಲ್ಲಿ ವಾಸ್ತವ ಸ್ಥಿತಿಯನ್ನು ಅವಲೋಕಿಸುವ ಮತ್ತು ಸಂವಾದವನ್ನು ಪ್ರೋತ್ಸಾಹಿಸುವ,ಎಲ್ಲ ಪಾಲುದಾರರನ್ನು ಅರ್ಥಪೂರ್ಣ ಮಾತುಕತೆಗಳಲ್ಲಿ ತೊಡಗಿಸಿಕೊಳ್ಳುವ ದೀರ್ಘಕಾಲೀನ ನೀತಿಯನ್ನು ತಾನು ಹೊಂದಿದ್ದೇನೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News