ತ್ರಿಪುರಾ ಮುಖ್ಯಮಂತ್ರಿಯ ʼಕೊಲೆಯತ್ನʼ: ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಿದ ಪೊಲೀಸರು

Update: 2021-08-07 08:29 GMT

ಅಗರ್ತಲಾ: ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರನ್ನು ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.

ಮುಖ್ಯಮಂತ್ರಿಯವರು ಗುರುವಾರ ಸಂಜೆ ಶ್ಯಾಮಪ್ರಸಾದ್ ಮುಖರ್ಜಿ ಲೇನ್‌ನಲ್ಲಿರುವ ಅವರ ಅಧಿಕೃತ ನಿವಾಸದ ಬಳಿ ವಾಕಿಂಗ್ ಹೊರಟಿದ್ದಾಗ ಈ ಮೂವರು ಕಾರನ್ನು ಭದ್ರತಾ ವಲಯದ ಮೂಲಕ ಚಲಾಯಿಸಿದರು ಎಂದು ಅವರು ಸುದ್ದಿ ಸಂಸ್ಥೆ PTI ಗೆ ತಿಳಿಸಿದ್ದಾಗಿ ವರದಿಯಾಗಿದೆ.

" ವಾಹನವು ಹಿಂದೆ ಸರಿದಂತೆ ಪಕ್ಕಕ್ಕೆ ಸರಿಯುವಲ್ಲಿ ದೇಬ್‌ ಯಶಸ್ವಿಯಾದರು. ಆದರೆ ಅವರ ಭದ್ರತಾ ಸಿಬ್ಬಂದಿಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ" ಎಂದು ಪೊಲೀಸರು ತಿಳಿಸಿದ್ದಾರೆ. "ಮುಖ್ಯಮಂತ್ರಿಯ ಭದ್ರತಾ ಪಡೆಗಳು ಕಾರನ್ನು ಅಡ್ಡಗಟ್ಟಲು ಯತ್ನಿಸಿತು ಆದರೆ ಸಾಧ್ಯವಾಗಲಿಲ್ಲ" ಎಂದು ಪೊಲೀಸರು ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಗುರುವಾರ ತಡರಾತ್ರಿ ಕೆರ್ಚೌಮುಹಾನಿ ಪ್ರದೇಶದಿಂದ ಬಂಧಿಸಲಾಗಿದೆ ಮತ್ತು ವಾಹನವನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ವಿರುದ್ಧ'ಕೊಲೆ ಯತ್ನ' ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಮೂವರನ್ನು ಶುಕ್ರವಾರ ಮುಖ್ಯ ನ್ಯಾಯಾಧೀಶ ಪಿಪಿ ಪೌಲ್ ಸಮ್ಮುಖದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆದರೆ ಇವರ ಉದ್ದೇಶ ಏನಾಗಿತ್ತು ಎನ್ನುವುದರ ಕುರಿತು ಇನ್ನೂ ತಿಳಿದು ಬಂದಿಲ್ಲ ಎಂದು ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಬಿದ್ಯುತ್ ಸೂತ್ರಧರ್ ಹೇಳಿಕೆ ನೀಡಿದ್ದಾರೆ.

"ನಾವು ವಿಚಾರಣೆಗೆ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಬೇಡಿಕೆ ಸಲ್ಲಿಸಿದ್ದೆವು, ಆದರೆ ನ್ಯಾಯಾಲಯವು ಅವರನ್ನು ಆಗಸ್ಟ್ 19 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮುಖ್ಯಮಂತ್ರಿಗಳ ಭದ್ರತಾ ವಲಯದ ಮೂಲಕ ಕಾರು ಚಾಲನೆ ಮಾಡಿರುವುದರ ಹಿಂದಿನ ಉದ್ದೇಶವನ್ನು ತಿಳಿಯಲು ಪೊಲೀಸರು ಅವರನ್ನು ಜೈಲಿನಲ್ಲಿ ವಿಚಾರಣೆ ನಡೆಸುತ್ತಾರೆ" ಎಂದು ಸೂತ್ರಧರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News