ಖಾತೆ ಹಂಚಿಕೆ ಬೆನ್ನಲ್ಲೆ ಅಸಮಾಧಾನ ಹೊರ ಹಾಕಿದ ಎಂಟಿಬಿ ನಾಗರಾಜ್

Update: 2021-08-07 16:43 GMT

ಬೆಂಗಳೂರು, ಆ. 7: `ನೂತನ ಸಚಿವರಿಗೆ ಖಾತೆ ಹಂಚಿಕೆ ಬೆನ್ನಲ್ಲೆ ಅಸಮಾಧಾನ ಸ್ಫೋಟ'ಗೊಂಡಿದ್ದು, ಸಚಿವ ಎಂಟಿಬಿ ನಾಗರಾಜ್ ಬಹಿರಂಗ ಅಸಂತೃಪ್ತಿ ಹೊರಹಾಕಿದ್ದಾರೆ.

ಈ ಬಗ್ಗೆ ಟ್ ಮಾಡಿರುವ ಸಚಿವ ಎಂಟಿಬಿ ನಾಗರಾಜ್, `ಈ ಹಿಂದಿನ ಮುಖ್ಯಮಂತ್ರಿ ಮತ್ತು ಈಗಿನ ಮುಖ್ಯಮಂತ್ರಿ ನನಗೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಖಾತೆ ಹಂಚಿಕೆಯಲ್ಲಿ ನನಗೆ ಅಸಮಾಧಾನವಿದೆ. ಮುಂದಿನ 2 ಅಥವಾ 3 ದಿನಗಳಲ್ಲಿ ನನ್ನ ನಿರ್ಧಾರ ತಿಳಿಸುವೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಚ್ಚರಿಯ ರೀತಿಯಲ್ಲಿ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ, ಪ್ರವಾಹ ಮತ್ತು ಕೋವಿಡ್ ಮೂರನೇ ಅಲೆಯ ಆತಂಕದ ನಡುವೆಯೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವರಿಷ್ಟರ ಸಮ್ಮತಿಯೊಂದಿಗೆ ಖಾತೆ ಹಂಚಿಕೆ ಮಾಡಿದ್ದರೂ, ಆನಂದ್ ಸಿಂಗ್, ಎಂಟಿಬಿ ನಾಗರಾಜ್ ಸೇರಿದಂತೆ ಕೆಲ ಸಚಿವರ ಅಸಮಾಧಾನ ತೀವ್ರ ತಲೆನೋವಾಗಿ ಪರಿಣಮಿಸಿದೆ.

`ಜನಸೇವೆ ಮಾಡುವಂತಹ ಖಾತೆ ನಿರೀಕ್ಷೆಯಲ್ಲಿ ಇದ್ದೆ' ಎಂದು ತಿಳಿಸಿದ್ದ ಎಂಟಿಬಿ ನಾಗರಾಜು ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೌರಾಡಳಿತ, ಸಣ್ಣ ಕೈಗಾರಿಕೆ, ಸಾರ್ವಜನಿಕ ವಲಯ ಕೈಗಾರಿಕೆ ಇಲಾಖೆ ನೀಡಿದ್ದಾರೆ. ಆದರೆ, `ಇದು ತಾವು ಬಯಸಿದ ಖಾತೆ ಅಲ್ಲ. ಒಂದೆರಡು ದಿನಗಳಲ್ಲಿ ಖಾತೆ ಬದಲಾವಣೆ ಮಾಡದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ' ಎಂದು ಎಚ್ಚರಿಕೆ ನೀಡಿದ್ದಾರೆಂದು ಗೊತ್ತಾಗಿದೆ.

ಈ ಮಧ್ಯೆ ಉಪಮುಖ್ಯಮಂತ್ರಿ ಹುದ್ದೆ ಪ್ರಬಲ ಆಕಾಂಕ್ಷಿಯಾಗಿದ್ದ ಪರಿಶಿಷ್ಟ ಪಂಗಡ(ಎಸ್ಟಿ), ನಾಯಕ ಸಮುದಾಯ ಮುಖಂಡ ಬಿ.ಶ್ರೀರಾಮುಲು ಅವರಿಗೆ ಸಾರಿಗೆ ಮತ್ತು ಪರಿಶಿಷ್ಟ ಪಂಗಡ(ಎಸ್ಟಿ) ಕಲ್ಯಾಣ ಖಾತೆ ನೀಡಿದ್ದು, ತಮ್ಮ ಖಾತೆಯ ಬಗ್ಗೆ ರಾಮುಲು ತಮ್ಮ ಆಪ್ತರ ಬಳಿಕ ಪರೋಕ್ಷವಾಗಿ ಅಸಮಾಧಾನ ವ್ಯಕ್ತಡಿಸಿದ್ದಾರೆಂದು ಹೇಳಲಾಗಿದೆ. ಆದರೆ, `ಸಿಎಂ ನೇತೃತ್ವದಲ್ಲಿ ಬಿಎಸ್‍ವೈ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಯತ್ತ ನಮ್ಮ ಹೆಜ್ಜೆ. ಅಸಮಾಧಾನ ಮತ್ತಿತರೆ ಸುದ್ದಿಗಳು ಸತ್ಯಕ್ಕೆ ದೂರವಾದದ್ದು' ಎಂದು ಟ್ವಿಟ್ಟರ್ ಮೂಲಕ ಶ್ರೀರಾಮುಲು ಸ್ಪಷ್ಟಣೆ ನೀಡಿದ್ದಾರೆ.


`ಈ ಹಿಂದಿನ ಮುಖ್ಯಮಂತ್ರಿಗಳು ಮತ್ತು ಈಗಿನ ಮುಖ್ಯಮಂತ್ರಿಗಳು ನನಗೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಖಾತೆ ಹಂಚಿಕೆಯಲ್ಲಿ ನನಗೆ ಅಸಮಾಧಾನವಿದೆ. ಮುಂದಿನ 2 ಅಥವಾ 3 ದಿನಗಳಲ್ಲಿ ನನ್ನ ನಿರ್ಧಾರ ತಿಳಿಸುವೆ'

-ಎಂಟಿಬಿ ನಾಗರಾಜ್ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News