ಕಳಸ: ವಿದ್ಯುತ್ ತಂತಿ ಸ್ಪರ್ಶಿಸಿ ಲಾರಿ ಕ್ಲೀನರ್ ಮೃತ್ಯು

Update: 2021-08-08 17:31 GMT
ಅವಘಡ ನಡೆದ ಸ್ಥಳದಲ್ಲಿ ವಿದ್ಯುತ್ ತಂತಿ ಎಷ್ಟು ಎತ್ತರದಲ್ಲಿ ಹಾದು ಹೋಗಿದೆ ಎಂದು ಪರಿಶೀಲನೆ ನಡೆಸುತ್ತಿರುವ ಪೊಲೀಸರು 

ಕಳಸ, ಆ.8: ರಸ್ತೆ ಮಧ್ಯೆ ಹಾದು ಹೋಗಿದ್ದ ವಿದ್ಯುತ್ ತಂತಿ ಲಾರಿಗೆ ಆಕಸ್ಮಿಕವಾಗಿ ತಗುಲಿದ ಪರಿಣಾಮ ಲಾರಿ ಮೂಲಕ ವಿದ್ಯುತ್ ಪ್ರವಹಿಸಿ ಲಾರಿ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟ ಘಟನೆ ಪಟ್ಟಣ ಸಮೀಪದ ಬಾಳೆಹೊಳೆ ಗ್ರಾಮದ ಪಡೀಲ್ ಎಂಬಲ್ಲಿ ಶನಿವಾರ ಮಧ್ಯರಾತ್ರಿ ವರದಿಯಾಗಿದೆ.

ಮೃತಪಟ್ಟ ಲಾರಿ ಕ್ಲೀನರ್ ನನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಾವರೆಕೆರೆ ಗ್ರಾಮದ ನಿವಾಸಿ ಅಮ್ಜದ್ ಭಾಷಾ(31)ಎಂದು ಗುರುತಿಸಲಾಗಿದೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಟದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಳೆಹೊಳೆಯ ಪಡೀಲ್ ಎಂಬಲ್ಲಿ ಮಧ್ಯರಾತ್ರಿ ಸುಮಾರು 2ರ ಹೊತ್ತಿನಲ್ಲಿ ಅವಘಡ ಸಂಭವಿಸಿದ್ದು, ಮಂಗಳೂರಿನಿಂದ ಹಿಟಾಚಿಯೊಂದನ್ನು ರಿಪೇರಿಗೆಂದು  ಶಿವಮೊಗ್ಗಕ್ಕೆ 10 ಚಕ್ರದ ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಪಡೀಲ್ ಎಂಬಲ್ಲಿ ರಸ್ತೆ ಮಧ್ಯೆ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಲಾರಿಯಲ್ಲಿದ್ದ ಹಿಟಾಚಿಯ ಬಕೆಟ್‍ಗೆ ತಾಕಿದೆ ಎಂದು ತಿಳಿದು ಬಂದಿದೆ.

ಈ ವೇಳೆ ಲಾರಿ ಓಡಿಸುತ್ತಿದ್ದ ಶರೀಫ್ ಎಂಬವರಿಗೆ ವಿದ್ಯುತ್ ತಂತಿ ಲಾರಿಗೆ ಸಿಲುಕಿರುವುದು ಅರಿವಿಗೆ ಬಂದಿದೆ. ಇದನ್ನು ಅರಿತ ಚಾಲಕ ತಕ್ಷಣ ಲಾರಿಯಿಂದ ಹೊರಗೆ ಹಾರಿ ಪಾರಾಗಿದ್ದಾರೆ. ಚಾಲಕ ಶೂ ಧರಿಸಿದ್ದರಿಂದ ಅವರು ವಿದ್ಯುತ್ ಶಾಕ್‍ಗೆ ಒಳಗಾಗಿಲ್ಲ ಆದರೆ ಕ್ಲೀನರ್ ಲಾರಿಯಿಂದ ಕೆಳಗಿಳಿಯುವ ಕಾಲಿಗೆ ಚಪ್ಪಲಿಯನ್ನೂ ಹಾಕಿಕೊಳ್ಳದೇ ಅವಸರದಲ್ಲಿ ಇಳಿಯಲು ಮುಂದಾಗಿದ್ದು, ಈ ವೇಳೆ ಲಾರಿಯಲ್ಲಿ ಕಬ್ಬಿಣದ ಭಾಗವನ್ನು ಸ್ಪರ್ಶಿಸಿದ್ದರಿಂದ ವಿದ್ಯುತ್ ಅಘಾತಕ್ಕೆ ಒಳಗಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಸುದ್ದಿ ತಿಳಿದ ಕೂಡ ಕಳಸ ಠಾಣೆಯ ಪಿಎಸೈ ಹರ್ಷವಧನ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಮೃತದೇಹವನ್ನು ಕಳಸ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ವಾರಿಸುದಾರರಿಗೆ ಬಿಟ್ಟುಕೊಡಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News