ಆ.15ರ ಬಳಿಕ ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಮತ್ತಷ್ಟು ಬಿಗಿ ಕ್ರಮ: ಸಚಿವ ಆರ್.ಅಶೋಕ್

Update: 2021-08-09 11:41 GMT
ಫೈಲ್ ಚಿತ್ರ

ಬೆಂಗಳೂರು, ಆ. 9: `ಬೆಂಗಳೂರು ನಗರದಲ್ಲಿ ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 15ರ ನಂತರ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು' ಎಂದು ಕಂದಾಯ ಸಚಿವ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಬೊಮ್ಮನಹಳ್ಳಿ, ಮಹದೇವಪುರ ವಾರ್ಡ್‍ಗಳ ವ್ಯಾಪ್ತಿಯಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ. ಹೀಗಾಗಿ ನಗರದಲ್ಲಿ ಕೊರೋನ ನಿಯಂತ್ರಣಕ್ಕಾಗಿ 108 ವೈದ್ಯರ ತಂಡವನ್ನು ರಚಿಸಲಿದ್ದೇವೆ. ಪ್ರತಿ ಮನೆ ಮನೆಗೂ ಭೇಟಿ ನೀಡೋದಕ್ಕೆ ಆರೋಗ್ಯ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ' ಎಂದು ತಿಳಿಸಿದರು.

`ವೈದ್ಯರು ಸೋಂಕಿತರ ಚಿಕಿತ್ಸೆ, ಮಾಹಿತಿಗಾಗಿ 24/7 ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಮೂಲಕ ನಗರದಲ್ಲಿ ಕೊರೋನ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೋವಿಡ್ ಮೂರನೇ ಅಲೆ ಪತ್ತೆಯಾದರೆ ಪೂರ್ತಿ ಬಡಾವಣೆಯ ಜನರನ್ನು ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಪ್ರತಿ ಮನೆ-ಮನೆಗೆ ತೆರಳಿ ಆರೋಗ್ಯ ಸಿಬ್ಬಂದಿಗಳು ಪರೀಕ್ಷೆ ಮಾಡಲಿದ್ದಾರೆ' ಎಂದು ಅವರು ಹೇಳಿದರು.

ಪಾಲಿಕೆ ವೈದ್ಯಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಲಿದ್ದಾರೆ. ಈ ಮೂಲಕ ಅವರಿಗೆ ಆತ್ಮಸ್ಥೈರ್ಯವನ್ನು ತುಂಬಲಿದ್ದಾರೆ. ಅವರಿಗೆ ವೈದ್ಯಕೀಯ ಸೇವೆ ಅಗತ್ಯವಿದ್ದರೇ ನೆರವಾಗಲಿದ್ದಾರೆ. 159 ಕ್ಲಸ್ಟರ್ ಗುರುತು ಮಾಡಿದ್ದು, ಕೋವಿಡ್ ಪಾಸಿಟಿವ್ ಆದವರಿಗೆ ಟ್ರಾಕಿಂಗ್ ಮಾಡೋ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿದಿನ ಅಂಗನವಾಡಿ, ಆಶಾ ಕಾರ್ಯಕರ್ತರು ಕೋವಿಡ್ ಪಾಸಿಟಿವ್ ಬಂದವರ ಮನೆಗೆ ಭೇಟಿ ಮಾಡುತ್ತಿದ್ದಾರೆ' ಎಂದು ಅವರು ಮಾಹಿತಿ ನೀಡಿದರು.

`ಇದೀಗ ವೈದ್ಯರನ್ನು ಇಬ್ಬರನ್ನು ಕೊರೋನ ಸೋಂಕಿನ ಹೆಚ್ಚಿನ ಪ್ರಕರಣಗಳಿರುವಂತ ಕಂಟೈನ್ಮೆಂಟ್ ಝೋನ್‍ಗಳಲ್ಲಿ ನೇಮಿಸಲಾಗುತ್ತದೆ. ಈಗಾಗಲೇ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ಸೋಂಕು ತಡೆಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಬೆಂಗಳೂರು ನಗರದಲ್ಲಿ ಶೇ.60ರಷ್ಟು ಜನರಿಗೆ ಕೊರೋನ ಮೊದಲ ಲಸಿಕೆ ನೀಡಲಾಗಿದೆ' ಎಂದು ಸಚಿವ ಅಶೋಕ್ ಇದೇ ವೇಳೆ ವಿವರ ನೀಡಿದರು. 

`ಕೋವಿಡ್ ಸೋಂಕು ನಿಯಂತ್ರಣ ದೃಷ್ಟಿಯಿಂದ ಶ್ರಾವಣ ಮಾಸ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಹೀಗಾಗಿ ದೇವಸ್ಥಾನದ ಮೇಲೆ ನಿರ್ಬಂಧ ಹೇರುವ ಚರ್ಚೆ ಆಗಿದೆ. ಆ.15ರ ನಂತರ ಈ ಬಗ್ಗೆ ತೀರ್ಮಾನ ಪ್ರಕಟ ಆಗಲಿದೆ. ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಾದರೆ ಮಾತ್ರ ವಾರಂತ್ಯದ ಕರ್ಫ್ಯೂ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ಅದುವರೆಗೆ ನಗರದಲ್ಲಿ ವೀಕೆಂಡ್ ಕರ್ಫ್ಯೂ ಇಲ್ಲ'

-ಆರ್.ಅಶೋಕ್ ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News