ದೇವಾಲಯಗಳ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ: ಸಚಿವೆ ಶಶಿಕಲಾ ಜೊಲ್ಲೆ

Update: 2021-08-09 12:19 GMT
ಶಶಿಕಲಾ ಜೊಲ್ಲೆ

ವಿಜಯಪುರರ, ಆ. 9: `ರಾಜ್ಯದ ಎಲ್ಲ ದೇವಾಲಯಗಳಲ್ಲಿ ಭಕ್ತರಿಗೆ ಅಗತ್ಯ ಮೂಲಸೌಕರ್ಯ ದೊರೆಯುವಂತೆ ಮಾಡುವುದು ನನ್ನ ಮೊದಲ ಆದ್ಯತೆಯಾಗಿದೆ. ಭಕ್ತರಿಗೆ ದೇವಸ್ಥಾನಗಳ ಆವರಣದಲ್ಲಿ ಕುಡಿಯುವ ನೀರು, ಶೌಚಾಲಯ, ಅಗತ್ಯ ವಸತಿ ವ್ಯವಸ್ಥೆ ಕಲ್ಪಿಸಲು ಶ್ರಮವಹಿಸುತ್ತೇನೆ' ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಸೋಮವಾರ ವಿಜಯಪುರ ನಗರದ ಐತಿಹಾಸಿಕ ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ನಾಡಿನ ಜನತೆ ಕೊರೊನ ಶೋಂಕಿನ ಮಹಾಮಾರಿ ಹಾಗೂ ಪ್ರವಾಹ ಸಂಕಷ್ಟದಿಂದ ಹೊರ ಬರಲಿ ಎಂದು ವಿಶೇಷ ಪೂಜೆ ಸಲ್ಲಿಸಿದರು. ಶ್ರಾವಣ ಮಾಸದ ಮೊದಲ ಸೋಮವಾರ ಅತ್ಯಂತ ಪುಣ್ಯದ ದಿನವಾಗಿದ್ದು ಈ ದಿನ ಶಿವನ ಪೂಜೆ ಮಾಡುವ ಮೂಲಕ ಮುಜರಾಯಿ, ಹಜ್ ಮತ್ತು ವಕ್ಫ್ ಇಲಾಖೆಯ ಅಧಿಕೃತ ಜವಾಬ್ದಾರಿಯನ್ನು ಸಚಿವೆ ಶಶಿಕಲಾ ಜೊಲ್ಲೆಯವರು ವಹಿಸಿಕೊಂಡರು.

ಆ ಬಳಿಕ ಮಾತನಾಡಿದ ಅವರು, `ನನಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಮುಜರಾಯಿ, ಹಜ್ ಮತ್ತು ವಕ್ಪ್ ಖಾತೆಯ ಜವಾಬ್ದಾರಿ ನೀಡಿದ್ದಾರೆ. 

ಹಿಂದುಗಳಿಗೆ ಅತ್ಯಂತ ಪವಿತ್ರ ದಿನವಾದ ಶ್ರಾವಣ ಮಾಸದ ಮೊದಲ ದಿನವೇ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ನಾಡಿನ ಜನತೆಯ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದೇನೆ. ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನ ಸೋಂಕು ಮಾಯವಾಗಿ ಎಲ್ಲರೂ ಆರೋಗ್ಯವಂತ ಜೀವನ ನಡೆಸಲು ಶಕ್ತಿ ನೀಡುವಂತೆ ಭಗವಂತನಲ್ಲಿ ಪ್ರಾರ್ಥಿಸಿಕೊಂಡಿದ್ದೇನೆ' ಎಂದರು.

`ಅಲ್ಲದೆ ರಾಜ್ಯದಲ್ಲಿ ನಿರಂತರವಾಗಿ ಕಾಡುತ್ತಿರುವ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಜನರ ಜೀವನವನ್ನೇ ಕಸಿದುಕೊಳ್ಳುತ್ತಿರುವ ಪ್ರವಾಹದಿಂದ ಮುಕ್ತಿ ನೀಡುವಂತೆ ಆ ಭಗವಂತನಲ್ಲಿ ಪ್ರಾರ್ಥಿಸಿದ್ದೇನೆ. ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾಗಿ ವಿಶೇಷವಾಗಿ ನಮ್ಮ ಅಕ್ಕ-ಪಕ್ಕದ ರಾಜ್ಯಗಳಲ್ಲಿರುವ ದೇವಸ್ಥಾನಗಳಲ್ಲಿ ರಾಜ್ಯದ ಭಕ್ತರಿಗೆ ಅನುಕೂಲವಾಗಲು ವಸತಿ ನಿಲಯಗಳನ್ನು ನಿರ್ಮಾಣ ಮಾಡಲು ಅಗತ್ಯ ಕ್ರಮ ವಹಿಸುತ್ತೇನೆ' ಎಂದು ತಿಳಿಸಿದರು. 

`ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ನಮ್ಮ ರಾಜ್ಯದ ಭಕ್ತರು ಹೆಚ್ಚಾಗಿ ಹೋಗುವ ದೇವಸ್ಥಾನಗಳಲ್ಲಿ ಅಗತ್ಯ ವಸತಿ ನಿಲಯಗಳನ್ನು ನಿರ್ಮಿಸಿ, ದೇವರ ದರ್ಶನಕ್ಕೆ ಅಗತ್ಯ ಅನುಕೂಲ ಕಲ್ಪಿಸಲಾಗುವುದು ಎಂದ ಅವರು, ಕೊರೋನ 3ನೆ ಅಲೆ ಹರಡುತ್ತಿರುವುದರಿಂದ ಗಡಿಭಾಗ ಜಿಲ್ಲೆಯಾದ ವಿಜಯಪುರದಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ ತೀವ್ರ ನಿಗಾ ಇಡಲಾಗಿದ್ದು, ಇನ್ನೂ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳು ಹಾಗೂ ವೈದ್ಯಾಧಿಕಾರಿಗಳನ್ನು ನಿಯೋಜಿಸಲಾಗುವುದು' ಎಂದು ತಿಳಿಸಿದರು. ಈ ವೇಳೆ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಶ್ರೀಶೈಲ ಪಾಟೀಲ, ಉಪವಿಭಾಗಾಧಿಕಾರಿ ಬಲರಾಮ್ ಲಮಾಣಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News