ನನ್ನ ರಾಜಕೀಯ ಏಳಿಗೆ ಸಹಿಸದವರಿಂದ ಈಡಿಗೆ ದೂರು: ಜೆಡಿಎಸ್ ನಾಯಕರ ವಿರುದ್ಧ ಝಮೀರ್ ಅಹ್ಮದ್ ಆರೋಪ

Update: 2021-08-09 13:04 GMT

ಬೆಂಗಳೂರು, ಆ. 9: `ನನ್ನ ರಾಜಕೀಯ ಏಳಿಗೆಯನ್ನು ಸಹಿಸಿದೆ ನಾನು ಈ ಹಿಂದೆ ಇದ್ದ ಪಕ್ಷ(ಜೆಡಿಎಸ್)ದ ಮುಖಂಡರೇ ಜಾರಿ ನಿರ್ದೇಶನಾಲಯ(ಈಡಿ)ಕ್ಕೆ ದೂರು ನೀಡಿ ದಾಳಿ ಮಾಡಿಸಿದ್ದಾರೆ' ಎಂದು ಮಾಜಿ ಸಚಿವ ಹಾಗೂ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಬಿ.ಝಡ್.ಝಮೀರ್ ಅಹ್ಮದ್ ಖಾನ್ ಗಂಭೀರ ಆರೋಪ ಮಾಡಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ನಾನು ಈ ಸಂದರ್ಭದಲ್ಲಿ ಯಾರ ಹೆಸರನ್ನೂ ಹೇಳುವುದಿಲ್ಲ. ನಾನು ರಾಜಕೀಯವಾಗಿ ಇಷ್ಟು ಎತ್ತರಕ್ಕೆ ಬೆಳೆಯುತ್ತೇನೆ ಎಂದು ಅವರು ಭಾವಿಸಿರಲಿಲ್ಲ. ಹೀಗಾಗಿ ನನ್ನ ಏಳ್ಗೆ ನೋಡಿ ಅವರಿಗೆ ಹೊಟ್ಟೆಯುರಿ. ಹೀಗಾಗಿ ಈಡಿ ದಾಳಿ ಮಾಡಿದ್ದಾರೆ. ನಾನೊಂದು ಒಳ್ಳೆಯ ಮನೆ ನಿರ್ಮಿಸಿರುವುದು ಅವರಿಗೆ ಇಷ್ಟವಿರಲಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಈ ರಾಜ್ಯದಲ್ಲಿ ಅವರನ್ನು ಬಿಟ್ಟು ಬೇರೆ ಯಾರೂ ಮನೆ ಕಟ್ಟಬಾರದು ಎಂಬುದು ಅವರ ಉದ್ದೇಶ. ಹೀಗಾಗಿ ನಾನು ಮನೆ ನಿರ್ಮಿಸಿದ ಮಾಹಿತಿಯನ್ನೇ ಇಟ್ಟುಕೊಂಡು ಈಡಿಗೆ ದೂರು ನೀಡಿದರು. ಆದರೆ, ಇಂತಹ ದಾಳಿಗಳಿಂದ ನನ್ನನ್ನು ಹೆದರಿಸಲು ಅಥವಾ ದುರ್ಬಲಗೊಳಿಸಲು ಸಾಧ್ಯವಿಲ್ಲ, ನನ್ನ ರಾಜಕೀಯ ಭವಿಷ್ಯವನ್ನೂ ಯಾವುದೇ ಸಂದರ್ಭದಲ್ಲಿಯೂ ಮುಗಿಸಲು ಸಾಧ್ಯವಿಲ್ಲ' ಎಂದು ಝಮೀರ್ ಅಹ್ಮದ್ ಖಾನ್ ಗುಡುಗಿದರು.

`ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಯಾವುದೇ ಸಂದರ್ಭದಲ್ಲಿಯೂ ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ನನ್ನ ಮನೆಯ ಮೇಲಿನ ದಾಳಿಗೂ ಐಎಂಎ ಹಗರಣಕ್ಕೂ ಸಂಬಂಧವಿಲ್ಲ. ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿವಾಸ ಮೇಲೆಯೂ ದಾಳಿ ನಡೆದಿತ್ತು. ಅದಕ್ಕೂ ಐಎಂಎ ಹಗರಣಕ್ಕೂ ಸಂಬಂಧ ಕಲ್ಪಿಸಲು ಆಗುವುದಿಲ್ಲ' ಎಂದು ಝಮೀರ್ ಅಹ್ಮದ್ ಖಾನ್ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News