ತನ್ನ ವಿವಾದಾತ್ಮಕ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವ ಕೆ.ಎಸ್ ಈಶ್ವರಪ್ಪ

Update: 2021-08-09 13:07 GMT

ಶಿವಮೊಗ್ಗ, ಆ.9:  'ಬಿಜೆಪಿ ಕಾರ್ಯಕರ್ತರನ್ನು ಮುಟ್ಟಿದರೆ ಸುಮ್ಮನಿರೆವು' ಎಂದು ರವಿವಾರ ಹೇಳಿಕೆ ನೀಡಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸೋಮವಾರ ತಮ್ಮ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, 'ನಾನು ತುಂಬಾ ಸ್ಪಷ್ಟವಾಗಿ ಕಾರ್ಯಕರ್ತರಿಗೆ ಈಗಲೂ ಹೇಳುತ್ತಿದ್ದೇನೆ. ಒಂದು ಕಾಲದಲ್ಲಿ ಬಿಜೆಪಿಗೆ ಶಕ್ತಿ ಇರಲಿಲ್ಲ. ಉದಾಹರಣೆಗೆ ಕೇರಳದ ಬಗ್ಗೆ ಹೇಳಿದ್ದೆ. ರಾಷ್ಟ್ರೀಯ ಜನಸಂಘದ ಅಧ್ಯಕ್ಷ ದೀನದಯಾಳ್ ಉಪಾಧ್ಯಾಯ ಅವರನ್ನು ಕೊಲೆ ಮಾಡಿ, ಬಿಸಾಕಿ ಹೋಗಿದ್ದರು. ಅದರ ಬಗ್ಗೆ ನಮಗೆ ನೋವಿದೆ. ಅವಾಗ ನಮಗೆ ಶಕ್ತಿ ಇರಲಿಲ್ಲ. ಯಾರು ಹೊಡೆದರೂ ಯಾಕೆ ಕೊಲೆ ಮಾಡಿದರು ಎಂದು ತಿಳಿದುಕೊಳ್ಳುವ ಶಕ್ತಿಯೇ ಇರಲಿಲ್ಲ. ಕೇರಳದಲ್ಲಿ ಆರೆಸೆಸ್ ಶಾಖೆ ಮಾಡುತ್ತಿದ್ದರೆ ಯುವಕರನ್ನು ಕೊಂದು ಹಾಕುತ್ತಿದ್ದರು. ಯಾರು ಹೇಳೋರು ಕೇಳೋರು ಇರಲಿಲ್ಲ. ಅದರೆ ಈಗ ಆ ಪರಿಸ್ಥಿತಿ ಇಲ್ಲ' ಎಂದು  ಹೇಳಿದ್ದಾರೆ.

'ನಾವಾಗಿಯೇ ನಾವೇ ಯಾರನ್ನು ಮುಟ್ಟಲು ಹೋಗಲ್ಲ. ಯಾರ ಸುದ್ದಿಗೂ ಹೋಗಲ್ಲ. ಎಂತಹ ಸ್ಥಿತಿ ಬಂದರೂ ಶಾಂತವಾಗಿರಿ ಎಂದು ಹಿರಿಯರು ಹೇಳಿದ್ದರು. ಶಕ್ತಿ ಬಂದಮೇಲೆ ಹಿರಿಯರು ‘ಫೇಸ್ ವಿತ್ ದಿ ಸೇಮ್ ಸ್ಟಿಕ್’ ಎಂದು ಹೇಳಿದ್ದಾರೆ. ಇದು ನಾನು ಹೇಳಿದ್ದಲ್ಲ. ಹಿರಿಯರು ಹೇಳಿದ್ದನ್ನು ಮತ್ತೆ ಹೇಳಿದ್ದೆನೆ. ಹೊಡೆದರೆ ವಾಪಸ್ ಅದರಲ್ಲಿ ಹೊಡಿರಿ ಎಂದಿದ್ದು ತಪ್ಪಾ?' ಎಂದು ಸಚಿವ ಈಶ್ವರಪ್ಪ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News