ಪರಿಶಿಷ್ಟ ಜಾತಿಯವರಿಗೆ ಮನೆ ನಿರ್ಮಾಣಕ್ಕೆ 5ಲಕ್ಷ ರೂ.ಗಳಿಗೆ ಹೆಚ್ಚಳ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2021-08-09 13:12 GMT

ಬೆಂಗಳೂರು, ಆ. 9: `ರಾಜ್ಯದಲ್ಲಿ ಪರಿಶಿಷ್ಟ ಜಾತಿ(ಎಸ್ಸಿ)ಯವರಿಗೆ ಮನೆ ನಿರ್ಮಾಣಕ್ಕೆ ಸರಕಾರದಿಂದ ನೀಡುತ್ತಿರುವ ಅನುದಾನ 1.75ಲಕ್ಷ ರೂ.ಗಳಾಗಿದ್ದು, ಈ ಮೊತ್ತದಿಂದ ಮನೆ ನಿರ್ಮಾಣ ಕಷ್ಟಸಾಧ್ಯ. ಹೀಗಾಗಿ ಈ ಮೊತ್ತವನ್ನು 5ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು' ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದಿಲ್ಲಿ ತಿಳಿಸಿದ್ದಾರೆ. 

ಸೋಮವಾರ ವಿಕಾಸಸೌಧದಲ್ಲಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಪರಿಶಿಷ್ಟ ಜಾತಿ(ಎಸ್ಸಿ)ಯವರಿಗೆ ಮನೆ ನಿರ್ಮಾಣಕ್ಕೆ ಪ್ರತಿ ಫಲಾನುಭವಿಗೆ 5ಲಕ್ಷ ರೂ.ನೆರವು ನೀಡಬೇಕು ಎಂದು ಕೋರಿ ಶೀಘ್ರದಲ್ಲೆ ಮುಖ್ಯಮಂತ್ರಿ ಹಾಗೂ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು' ಎಂದು ಇದೇ ವೇಳೆ ಹೇಳಿದರು.

`ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಒಂದು ವರ್ಷಗಳ ಕಾಲ ಸಮಾಜ ಇಲಾಖೆಯಲ್ಲಿ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲಾಗುವುದು. ಅನಿವಾರ್ಯವಲ್ಲದ ಯೋಜನೆಗಳನ್ನು ತಡೆ ಹಿಡಿಯಲಾಗುವುದು. ಪರಿಶಿಷ್ಟ ಜಾತಿ(ಎಸ್ಸಿ)ಯ ಕುಟುಂಬಗಳಿಗೆ ಉತ್ತಮವಾದ ಮನೆ, ಶೌಚಾಲಯ, ಶುದ್ಧ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಉತ್ತಮ ಆರೋಗ್ಯ ಸೌಲಭ್ಯ ಮತ್ತು ಅವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಆದ್ಯತೆ ನೀಡಲಾಗುವುದು' ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

`ತುರ್ತು ಅನಿವಾರ್ಯಗಳಲ್ಲದೆ ಯಾವುದೇ ಸಂದರ್ಭದಲ್ಲಿ ಅನಗತ್ಯ ವೆಚ್ಚ ಮಾಡುವುದಿಲ್ಲ. ಅಲ್ಲದೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಂಪೂರ್ಣವಾಗಿ ಪಾರದರ್ಶಕತೆ ತರಲಾಗುವುದು. ಪಾರದರ್ಶಕತೆ ಇಲ್ಲದೆ ಯಾವುದೇ ಅನುದಾನ ಬಳಕೆಗೂ ಅವಕಾಶ ನೀಡುವುದಿಲ್ಲ. ಎಸ್ಸಿ-ಎಸ್ಟಿ ವರ್ಗಗಳ ಕಲ್ಯಾಣಕ್ಕೆ ಎಸ್ಸಿಪಿ ಮತ್ತು ಟಿಎಸ್ಪಿ ಕಾಯ್ದೆ ಜಾರಿಗೆ ತರಲಾಗಿದ್ದು, ಮೀಸಲಿಟ್ಟ ಅನುದಾನವನ್ನು ಪರಿಶಿಷ್ಟರ ಕಲ್ಯಾಣಕ್ಕೆ ಸದ್ಬಳಕೆ ಮಾಡಲಾಗುವುದು' ಎಂದು ಅವರು ಇದೇ ವೇಳೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News