ಗೃಹ ಇಲಾಖೆ ನ್ಯೂನತೆ ಸರಿಪಡಿಸಿ, ಬಲವರ್ಧನೆಗೆ ಕ್ರಮ: ಸಚಿವ ಆರಗ ಜ್ಞಾನೇಂದ್ರ

Update: 2021-08-09 13:25 GMT

ಬೆಂಗಳೂರು, ಆ. 9: `ಪೊಲೀಸ್ ಇಲಾಖೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಿ, ಇಲಾಖೆಗೆ ಅಗತ್ಯವಿರುವ ಸಿಬ್ಬಂದಿ ಮತ್ತು ಸೌಲಭ್ಯಗಳನ್ನು ಒದಗಿಸುವ ಮೂಲಕ ಗೃಹ ಇಲಾಖೆಯ ಬಲವರ್ಧನೆಗೆ ಕ್ರಮ ವಹಿಸಲಾಗುವುದು' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಗೃಹ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಮೊದಲ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, `ಗೃಹ ಇಲಾಖೆ ಸಚಿವನಾದ ಬಳಿಕ ಇದೇ ಮೊದಲ ಬಾರಿಗೆ ಅಧಿಕಾರಿಗಳ ಸಭೆ ನಡೆಸಿದ್ದು, ಗೃಹ ಇಲಾಖೆಯನ್ನು ಅರಿತುವ ಪ್ರಯತ್ನ ಮಾಡಿದ್ದೇನೆ. ರಾಜ್ಯದ ಪೊಲೀಸ್ ಇಲಾಖೆ ಅತ್ಯುತ್ತಮ ಕೆಲಸ ಮಾಡುತ್ತಿದ್ದು, ಇಲಾಖೆಯಲ್ಲಿ ಮತ್ತಷ್ಟು ಸುಧಾರಣೆ ತರಲು ಶ್ರಮಿಸುವೆ' ಎಂದು ಹೇಳಿದರು.

ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಬಳಿಕ ನನಗೆ ಸಿಕ್ಕ ಮಾಹಿತಿ ಪ್ರಕಾರ ಇಲಾಖೆಯಲ್ಲಿ 16 ಸಾವಿರದಷ್ಟು ಸಿಬ್ಬಂದಿ ಕೊರತೆ ಇದೆ. ಹಂತ-ಹಂತವಾಗಿ ಸಿಬ್ಬಂದಿ ಭರ್ತಿ ಮಾಡಲಾಗುವುದು. ಅಲ್ಲದೆ, ಸಬ್ ಇನ್‍ಸ್ಪೆಕ್ಟರ್‍ಗಳ ಕೊರತೆ ನಿವಾರಿಸಲು ತ್ವರಿತಗತಿಯಲ್ಲಿ ಕ್ರಮ ವಹಿಸುವ ಮೂಲಕ ಜನರ ರಕ್ಷಣೆಗೆ ಇಲಾಖೆ ಸನ್ನದ್ಧಗೊಳಿಸಲಾಗುವುದು' ಎಂದು ಆರಗ ಜ್ಞಾನೇಂದ್ರ ಭರವಸೆ ನೀಡಿದರು.

ಪೊಲೀಸ್ ಇಲಾಖೆ ಯಾವುದೇ ಕಾರಣಕ್ಕೂ ಮಲಗಬಾರದು. ಜನರ ರಕ್ಷಣೆ ಮಾಡಬೇಕು. ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಇರಿಸಿ ಜನರು ನೆಮ್ಮದಿಯಿಂದ ನಿದ್ದೆ ಮಾಡುತ್ತಾರೆ. ಹೀಗಾಗಿ ಇಲಾಖೆ ಮತ್ತು ಇಲ್ಲಿನ ಸಿಬ್ಬಂದಿ ಸದಾ ಎಚ್ಚರದಿಂದ ಕೆಲಸ ಮಾಡಬೇಕು. ಜೊತೆಗೆ ಕಾನೂನು, ಶಾಂತಿ, ಸುವ್ಯವಸ್ಥೆ ಕಾಪಾಡಲು ಆಸ್ಥೆ ವಹಿಸಬೇಕು ಎಂದು ಆರಗ ಜ್ಞಾನೇಂದ್ರ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅಪರಾಧ ಕೃತ್ಯಗಳ ಪತ್ತೆ ಸಹಿತ ಗೃಹ ಇಲಾಖೆ ಕಾರ್ಯಚಟುವಟಿಕೆಗಳ ಸುಗಮ ನಿರ್ವಹಣೆಗೆ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವ ಸಂಬಂಧವೂ ಚರ್ಚಿಸಲಾಗಿದೆ. ಇಲಾಖೆ ಅರಿತುಕೊಳ್ಳಲು ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಮುಂಬರುವ ದಿನಗಳಲ್ಲಿ ಇಲಾಖೆಯಲ್ಲಿ ಸುಧಾರಣೆ ತರಲಾಗುವುದು ಎಂದು ಆರಗ ಜ್ಞಾನೇಂದ್ರ ಇದೇ ವೇಳೆ ವಿವರ ನೀಡಿದರು.

ಪರಿಶೀಲಿಸಿ ಮಾತನಾಡುವೆ: `ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹಿಂಸೆಗೆ ಪ್ರಚೋದನೆ ನೀಡುವ ಹೇಳಿಕೆ ನೀಡಿರುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಈ ಬಗ್ಗೆ ಈಶ್ವರಪ್ಪ ಅವರನ್ನೇ ಕೇಳಬೇಕು. ಯಾವ ಅರ್ಥದಲ್ಲಿ ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ಅವರ ಜತೆ ಚರ್ಚಿಸುವೆ. ಆ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ' ಎಂದು ಆರಗ ಜ್ಞಾನೇಂದ್ರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News