ಭೂಮಿ ಬಿಸಿಯಾಗುವ ದರದಲ್ಲಿ ಹೆಚ್ಚಳ: ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಅಂತರ್-ಸರಕಾರಿ ಸಮಿತಿ ವರದಿ

Update: 2021-08-09 16:58 GMT

ಹೊಸದಿಲ್ಲಿ, ಆ. 9: ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಅಂತರ್-ಸರಕಾರಿ ಸಮಿತಿಯು ತನ್ನ ಆರನೇ ಅಧ್ಯಯನ ವರದಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಈ ಸಮಿತಿಯ 195 ಸದಸ್ಯ ದೇಶಗಳ ಪೈಕಿ ಭಾರತವೂ ಒಂದಾಗಿದೆ.

ಭೂಮಿಯ ಹವಾಮಾನದಲ್ಲಿನ ಬದಲಾವಣೆಯನ್ನು ವಿಜ್ಞಾನಿಗಳು ಪ್ರತಿಯೊಂದು ಪ್ರದೇಶದಲ್ಲಿ ಮತ್ತು ಇಡೀ ಹವಾಮಾನ ವ್ಯವಸ್ಥೆಯಲ್ಲಿ ವೀಕ್ಷಿಸುತ್ತಿದ್ದಾರೆ. ಸಾಗರ ಮಟ್ಟದಲ್ಲಿನ ನಿರಂತರ ಏರಿಕೆ ಮುಂತಾದ ಈಗಾಗಲೇ ಆರಂಭಗೊಂಡಿರುವ ಕೆಲವು ಬದಲಾವಣೆಗಳನ್ನು ಇನ್ನು ಲಕ್ಷಾಂತರ ವರ್ಷಗಳ ಅವಧಿಯಲ್ಲಿ ನಿಲ್ಲಿಸಲು ಸಾಧ್ಯವಿಲ್ಲ. ಆದರೂ, ಇಂಗಾಲದ ಡೈ ಆಕ್ಸೈಡ್ ಮತ್ತು ಭೂಮಿಯ ತಾಪಮಾನಕ್ಕೆ ಕಾರಣವಾಗುವ ಅನಿಲಗಳ ಉತ್ಪಾದನೆಯಲ್ಲಿ ಬೃಹತ್ ಪ್ರಮಾಣದ ಹಾಗೂ ಕ್ಷಿಪ್ರ ಕಡಿತವು ಹವಾಮಾನ ಬದಲಾವಣೆಯನ್ನು ಸೀಮಿತಗೊಳಿಸಬಲ್ಲವು. ಆದರೆ, ಇದನ್ನು ಮಾಡಲು ದೇಶಗಳು ಮನಸ್ಸು ಮಾಡಬೇಕಾಗಿದೆ ಎಂದು ವರದಿ ಹೇಳಿದೆ.

ಭೂಮಿಯು ವೇಗವಾಗಿ ಬಿಸಿಯಾಗುತ್ತಿದೆ ಎಂದು ಹೇಳಿರುವ ವರದಿಯು 2030ರ ವೇಳೆಗೆ ಭೂಮಿಯು ಕೈಗಾರಿಕಾಪೂರ್ವ ಮಟ್ಟಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್ ಹೆಚ್ಚು ಬಿಸಿಯಾಗಲಿದೆ ಎಂದಿದೆ. ಈ ಮಟ್ಟದ ಉಷ್ಣತೆಯು 2018ರಲ್ಲಿ ಊಹಿಸಿರುವುದಕ್ಕಿಂತ ಒಂದು ದಶಕದ ಮೊದಲೇ ಸಂಭವಿಸಲಿದೆ.

‘‘ಸಮುದ್ರ ಮಟ್ಟವು ವೇಗವಾಗಿ ಏರುತ್ತಿದೆ. 1901 ಮತ್ತು 1971ರ ನಡುವಿನ ಅವಧಿಯಲ್ಲಿ ಸಮುದ್ರ ಮಟ್ಟ ಏರಿಕೆಯ ಸರಾಸರಿ ದರ ವರ್ಷಕ್ಕೆ 1.3 ಮಿಲಿಮೀಟರ್ ಆಗಿತ್ತು. ಇದು 2006-2018ರ ನಡುವಿನ ಅವಧಿಯಲ್ಲಿ ದ್ವಿಗುಣಕ್ಕಿಂತಲೂ ಹೆಚ್ಚಾಗಿ ವರ್ಷಕ್ಕೆ 3.7 ಮಿ.ಮೀಟರ್ ಆಗಿದೆ. 1901 ಮತ್ತು 2018ರ ನಡುವಿನ ಅವಧಿಯಲ್ಲಿ ಜಾಗತಿಕ ಸರಾಸರಿ ಸಮುದ್ರ ಮಟ್ಟವು 0.20 ಮೀಟರ್ ಏರಿದೆ’’ ಎಂದು ವರದಿ ಹೇಳಿದೆ.

‘‘ನಗರಗಳು ಜಾಗತಿಕ ತಾಪಮಾನದ ಕೇಂದ್ರ ಬಿಂದುಗಳಾಗಿವೆ. ಯಾಕೆಂದರೆ ನಗರಗಳು ಉಷ್ಣತೆಯನ್ನು ಹಿಡಿದಿಟ್ಟುಕೊಳ್ಳುತ್ತವೆ ಹಾಗೂ ಅಲ್ಲಿ ನೀರು ಮತ್ತು ಸಸ್ಯರಾಶಿ ಮುಂತಾದ ತಂಪು ಪ್ರದೇಶಗಳು ಇಲ್ಲ’’ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News