ಪೆಗಾಸಸ್ ಪ್ರಕರಣ: ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳಿಂದ ದೂರವಿರಿ ಎಂದ ಸುಪ್ರೀಂ ಕೋರ್ಟ್

Update: 2021-08-10 08:27 GMT

ಹೊಸದಿಲ್ಲಿ : ಪೆಗಾಸಸ್ ಸ್ಪೈವೇರ್ ಬಳಸಿ ಬೇಹುಗಾರಿಕೆ ನಡೆಸಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ಕೋರಿ ಅರ್ಜಿ ಸಲ್ಲಿಸುವವರಿಗೆ ಮಂಗಳವಾರ ಸುಪ್ರೀಂ ಕೋರ್ಟ್ ಸಲಹೆಯೊಂದನ್ನು ನೀಡಿದೆ. ನ್ಯಾಯಾಂಗದ ಮೇಲೆ ನಂಬಿಕೆಯಿರಿಸಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪರ್ಯಾಯ ಚರ್ಚೆಗಳಲ್ಲಿ ಭಾಗವಹಿಸುವುದರಿಂದ ದೂರವಿರಿ ಎಂದು ನ್ಯಾಯಾಲಯ ಅವರಿಗೆ ಹೇಳಿದೆ.

"ಯಾರು ಕೂಡ ತಮ್ಮ ಮಿತಿಯನ್ನು ಮೀರಬಾರದು. ನಾವು ಚರ್ಚೆಗಳಿಗೆ ವಿರೋಧ ಹೊಂದಿಲ್ಲ, ಆದರೆ ವಿಚಾರ ನ್ಯಾಯಾಲಯದ ಮುಂದೆ ಇರುವಾಗ ಅದು ಇಲ್ಲಿಯೇ ಚರ್ಚೆಯಾಗಬೇಕು" ಎಂದು ಸಿಜೆಐ ಎನ್ ವಿ ರಮಣ ಅವರ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ. ರಾಜಕೀಯ ಪಕ್ಷಗಳೂ ಪ್ರಶ್ನೆಗಳಿಗೆ ನ್ಯಾಯಾಲಯದಲ್ಲಿ ಉತ್ತರ ನೀಡಬೇಕು, ನ್ಯಾಯಾಲಯಗಳ ಹೊರಗಲ್ಲ ಎಂದು ಪೀಠ ಹೇಳಿದೆ.

ಸರಕಾರದ ಪರ ವಕೀಲ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ಪ್ರಕರಣದಲ್ಲಿ ತಮಗೆ ಹೆಚ್ಚು ಸಮಯಾವಕಾಶ ಕೇಳಿದ್ದರಿಂದ ಮುಂದಿನ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ನ್ಯಾಯಾಲಯ ಮುಂದೂಡಿದೆ.

ಪೆಗಾಸಸ್ ಪ್ರಕರಣದ ತನಿಖೆಗೆ ಕೋರಿ ಅರ್ಜಿ ಸಲ್ಲಿಸಿದವರಲ್ಲಿ ಸೇರಿರುವ ಹಿರಿಯ ಪತ್ರಕರ್ತರಾದ ಎನ್ ರಾಮ್ ಹಾಗೂ ಶಶಿ ಕುಮಾರ್ ಪರ ವಕೀಲ ಕಪಿಲ್ ಸಿಬಲ್ ಮಾತನಾಡಿ. ಕಳೆದ ವಿಚಾರಣೆಯ ನಂತರ ರಾಮ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿದೆ ಎಂದು  ನ್ಯಾಯಾಲಯದ ಗಮನ ಸೆಳೆದರು.

ಈ ಹಿಂದೆ ಆಗಸ್ಟ್ 5ರಂದು ನಡೆದ ವಿಚಾರಣೆಯಲ್ಲಿ ನ್ಯಾಯಾಲಯ ಪ್ರತಿಕ್ರಿಯಿಸಿ, ವರದಿಗಳು ನಿಜವಾಗಿದ್ದರೆ ಪೆಗಾಸಸ್ ವಿಚಾರ ಗಂಭೀರವಾಗಿದೆ  ಎಂದು ಹೇಳಿತ್ತಲ್ಲದೆ ಅರ್ಜಿದಾರರು ತಮ್ಮ ಅರ್ಜಿಗಳ ಒಂದು ಪ್ರತಿಯನ್ನು ಸರಕಾರಕ್ಕೆ ಸಲ್ಲಿಸುವಂತೆಯೂ ಸೂಚಿಸಿತ್ತು.

ಎನ್ ರಾಮ್ ಹಾಗೂ ಶಶಿ ಕುಮಾರ್ ಅವರ ಅರ್ಜಿಗಳ ಹೊರತಾಗಿ ವಕೀಲ ಎಂ ಎಲ್ ಶರ್ಮ ಹಾಗೂ ಸಿಪಿಎಂನ ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಕೂಡ ಪೆಗಾಸಸ್ ಪ್ರಕರಣ ಸಂಬಂಧ ನ್ಯಾಯಾಲಯದ ಮೊರೆ ಹೋಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News