ಕಾಂಗ್ರೆಸ್ ನಾಯಕರ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ ಸಚಿವ ಈಶ್ವರಪ್ಪ

Update: 2021-08-10 12:18 GMT

ಬೆಂಗಳೂರು, ಆ.10: ಕಾಂಗ್ರೆಸ್ಸಿಗರನ್ನು ಕುಡುಕ ಸೂ...ಮಕ್ಕಳು ಎಂದು ಹೇಳುವ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರು ‘ಸರ್ ಕಾಂಗ್ರೆಸ್ ನವರು ಈಶ್ವರಪ್ಪ ತಮ್ಮ ಹೆಸರನ್ನು ಜೋಕರ್ ಎಂದು ಬದಲಾಯಿಸಿಕೊಳ್ಳುವುದು ಒಳ್ಳೆಯದು’ ಎಂದು ಹೇಳಿದ್ದಾರೆ ಎಂದು ಪ್ರಶ್ನಿಸಿದ್ದಕ್ಕೆ ಈಶ್ವರಪ್ಪ ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಯಾರೋ ಕುಡುಕ ಸೂ....ಮಕ್ಕಳು ಹೇಳುತ್ತಾರೆ ಎಂದು ಮಾತಿನ ಬರದಲ್ಲಿ ಈಶ್ವರಪ್ಪ ಅವಾಚ್ಯ ಶಬ್ಧ ಬಳಕೆ ಮಾಡಿದರು. ಮಾತನಾಡುತ್ತಲೆ ಎಚ್ಚೆತ್ತುಕೊಂಡ ಈಶ್ವರಪ್ಪ, ಅದು ಕೋಪದಲ್ಲಿ ಬಂತು, ಆ ಮಾತನ್ನ ವಾಪಸ್ ಪಡೆಯುತ್ತೇನೆ. ದಯವಿಟ್ಟು ಅದನ್ನ ಮುಂದುವರೆಸೋದು ಬೇಡ. ಆ ಮಾತನ್ನ ಹಿಂಪಡೆಯುತ್ತೇನೆ ಎಂದು ಈಶ್ವರಪ್ಪ ಹೇಳಿದರು.

ನನ್ನ ಹೇಳಿಕೆಯನ್ನು ವಿವಾದ ಮಾಡೋದು ಸರಿಯಲ್ಲ: ಒಂದು ಕಾಲದಲ್ಲಿ ಜನಸಂಘದಲ್ಲಿ ಶಕ್ತಿ ಇರಲಿಲ್ಲ. ರೈಲ್ವೆ ಪ್ಲಾಟ್‍ಫಾರಂನಲ್ಲಿ ಕೊಲೆ ಮಾಡಿ ಹಾಕಿದ್ದ ಕಾಲ ಇತ್ತು. ಆಗ ನಮಗೆ ಶಕ್ತಿ ಇರಲಿಲ್ಲ. ಅದಕ್ಕೆ ಏನೇ ಆದರೂ ಸುಮ್ಮನಿರುವಂತೆ ನಮ್ಮ ಹಿರಿಯರು ಹೇಳಿದ್ದರು ಎಂದು ಈಶ್ವರಪ್ಪ ಹೇಳಿದರು.

ಆದರೆ, ಈಗ ನಮಗೆ ಶಕ್ತಿ ಬಂದಿದೆ. ನಾವು ಯಾರ ತಂಟೆಗೂ ಹೋಗೋದು ಬೇಡ. ನಮ್ಮ ತಂಟೆಗೆ ಬಂದರೆ ಸುಮ್ಮನಿರೋದು ಬೇಡ ಎಂದು ಹಿರಿಯರು ಹೇಳಿದ್ದರು. ಅದನ್ನ ನಾನು ಉಲ್ಲೇಖ ಮಾಡಿದ್ದೇನೆ ಅಷ್ಟೇ. ಇದನ್ನು ವಿವಾದ ಮಾಡೋದು ಸರಿಯಲ್ಲ. ಇಲ್ಲಿಗೆ ನಿಲ್ಲಿಸೋಣ, ಮುಂದುವರೆಸೋದು ಬೇಡ. ಆದರೂ ವಿವಾದ ಮಾಡುತ್ತೇನೆ, ಮುಂದುವರೆಸುತ್ತೇನೆ ಅಂದರೆ, ಮುಂದುವರೆಸಿ ನಂಗೇನು ಅಭ್ಯಂತರ ಇಲ್ಲ ಎಂದು ಈಶ್ವರಪ್ಪ ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಗೋವುಗಳ ವಿಚಾರದಲ್ಲಿ ಸಾಕಷ್ಟು ಪ್ರಕರಣಗಳನ್ನು ದಾಖಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗಿನ ಜಾವ ಕರುಗಳನ್ನು ಕಳ್ಳತನ ಮಾಡುತ್ತಿದ್ದರು. ಅದನ್ನು ಮಹಿಳೆಯರು ಪ್ರಶ್ನೆ ಮಾಡಿದರೆ, ಚಾಕು ತೋರಿಸಿ ಬೆದರಿಕೆ ಹಾಕುತ್ತಿದ್ದರು ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕೋಮುವಾದಿಗಳನ್ನು ಮಟ್ಟ ಹಾಕುತ್ತೇನೆ ಅಂತಾ ಹೇಳಿದ್ದರು. ಹಲವು ಸುಳ್ಳು ಕೇಸ್‍ಗಳನ್ನು ಹಾಕಿದರು. ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದಾಗ ಕೆಲವು ಪ್ರಕರಣಗಳ ಹಿಂಪಡೆದಿದ್ದರು. ಇನ್ನು ಕೆಲವು ಪ್ರಕರಣಗಳಿವೆ, ಅವುಗಳನ್ನು ದಾಖಲೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಈಶ್ವರಪ್ಪ ಹೇಳಿದರು.

ಸಿದ್ದರಾಮಯ್ಯ ದಲಿತರನ್ನು ಮುಖ್ಯಮಂತ್ರಿ ಮಾಡಬೇಕು ಅಂತ ಹೇಳುತ್ತಾರೆ. ಇವರಿಗೆ ನಾವು ಏನ್ ಹೇಳುತ್ತಿದ್ದೇವೆ, ಏನು ಮಾತನಾಡುತ್ತಿದ್ದೇವೆ ಅನ್ನೋದೆ ಗೊತ್ತಿಲ್ಲ. ದಲಿತರನ್ನು ಸಿಎಂ ಮಾಡಬೇಕು ಅನ್ನೋವವರು ಈ ಹಿಂದೆ ಆಡಳಿತ ನಡೆಸಿದಾಗ ಏನು ಮಾಡಿದರು ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News