ವ್ಯರ್ಥವಾದ ಕಲಾಪಗಳಲ್ಲಿ ತೇಲಿ ಹೋದ ಜನರ ಪ್ರಲಾಪ

Update: 2021-08-13 04:36 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

17ನೇ ಲೋಕಸಭೆಯ ಅತಿ ಕನಿಷ್ಠ ಕಲಾಪಗಳನ್ನು ನಡೆಸಿದ ಹೆಗ್ಗಳಿಕೆಯೊಂದಿಗೆ ಸಂಸತ್ ಮುಂಗಾರು ಅಧಿವೇಶನ ಮುಕ್ತಾಯಗೊಂಡಿದೆ. 96 ಗಂಟೆಗಳ ಕಾಲ ಕಲಾಪ ನಡೆಸಬೇಕಾದ ಲೋಕಸಭೆ ಕೇವಲ 21 ಗಂಟೆ, 14 ನಿಮಿಷವನ್ನು ಈ ದೇಶದ ಜನರಿಗಾಗಿ ಮೀಸಲಿರಿಸಿತು. ಅಧಿವೇಶನ ಗದ್ದಲದಿಂದ ಆರಂಭಗೊಂಡು ಗದ್ದಲದಿಂದಲೇ ಮುಕ್ತಾಯವಾಯಿತು. ಸದ್ಯ ಆಡಳಿತ ಪಕ್ಷಕ್ಕೂ ಇದೇ ಬೇಕಾಗಿತ್ತೇನೋ. ‘ದೇಶದ ಅಭಿವೃದ್ಧಿಯನ್ನು ಚರ್ಚಿಸುವುದಕ್ಕೆ ವಿರೋಧ ಪಕ್ಷಗಳು ಅವಕಾಶ ನೀಡಲಿಲ್ಲ’ ಎಂದು ಸರಕಾರ ಪ್ರತಿಪಕ್ಷಗಳ ಕಡೆಗೆ ಬೆರಳು ತೋರಿಸುತ್ತಿದೆ. ಇದೇ ಸಂದರ್ಭದಲ್ಲಿ ಪೆಗಾಸಸ್, ರೈತರ ಸಮಸ್ಯೆ, ಬೆಲೆಯೇರಿಕೆಗಳ ವಿಷಯಗಳನ್ನು ಚರ್ಚಿಸಲು ಕೇಂದ್ರ ಸರಕಾರ ಅವಕಾಶ ನೀಡದೇ ಇರುವುದು ಅಧಿವೇಶನ ವಿಫಲವಾಗಲು ಮುಖ್ಯ ಕಾರಣ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಕಲಾಪದ ಆರಂಭವೇ ವೈಫಲ್ಯದ ಸೂಚನೆಯನ್ನು ನೀಡಿತ್ತು. ಈ ಬಾರಿಯ ಅಧಿವೇಶನದಲ್ಲಿ ಆಕ್ಸಿಜನ್ ಇಲ್ಲದೆ ಮೃತಪಟ್ಟ ದೇಶದ ನೂರಾರು ಸಂತ್ರಸ್ತರ ಬಗ್ಗೆ ಚರ್ಚೆ ನಡೆಯಬಹುದು ಎಂದು ಭಾವಿಸಲಾಗಿತ್ತು. ಜೊತೆಗೆ, ಎರಡನೇ ಅಲೆಯಲ್ಲಿ ಸರಕಾರದ ವೈಫಲ್ಯಗಳ ಬಗ್ಗೆಯೂ ಚರ್ಚೆ ನಡೆಯಬೇಕಾಗಿತ್ತು. ಮೂರನೇ ಅಲೆಯನ್ನು ಎದುರಿಸುವಲ್ಲಿ ಸರಕಾರ ಕೈಗೊಳ್ಳಬೇಕಾದ ಮುಂಜಾಗೃತೆಗಳ ಬಗ್ಗೆಯೂ ಪ್ರತಿಪಕ್ಷಗಳು ಸರಕಾರದಿಂದ ಮಾಹಿತಿಗಳನ್ನು ಪಡೆಯಬೇಕಾಗಿತ್ತು. ಇದೇ ಸಂದರ್ಭದಲ್ಲಿ, ರೈತರ ಪ್ರತಿಭಟನೆ 300 ದಿನವನ್ನು ದಾಟಿದೆ. ಸ್ವಾತಂತ್ರೋತ್ಸವದ ದಿನ, ರೈತ ಪ್ರತಿಭಟನೆ ಮತ್ತೊಮ್ಮೆ ಸಂಘರ್ಷ ರೂಪ ಪಡೆಯುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ರೈತರ ಬೇಡಿಕೆಗಳೂ ಅಧಿವೇಶನದಲ್ಲಿ ತುರ್ತಾಗಿ ಚರ್ಚೆ ನಡೆಯಬೇಕಿತ್ತು. ಹಾಗೆಯೇ ತೈಲ ಬೆಲೆಯೇರಿಕೆ, ಲಾಕ್‌ಡೌನ್‌ನಿಂದಾಗಿ ಜರ್ಜರಿತಗೊಂಡಿರುವ ಆರ್ಥಿಕತೆ ಇವೆಲ್ಲವೂ ಅಧಿವೇಶನದಲ್ಲಿ ಚಿಂತನಮಂಥನವಾಗಬೇಕಾಗಿದ್ದವು. ಆದರೆ ದುರದೃಷ್ಟವಶಾತ್, ಅಧಿವೇಶನ ಆರಂಭವಾಗಬೇಕು ಎನ್ನುವಷ್ಟರಲ್ಲೇ ‘ಪೆಗಾಸಸ್’ ಎನ್ನುವ ಭೂತ ಸಂಸತ್‌ನ ಮೆಟ್ಟಿಲಲ್ಲಿ ಬಂದು ಕೂತಿತು. ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದಾದ ಅತಿ ಗಂಭೀರ ವಿಷಯವಾಗಿತ್ತು ಪೆಗಾಸಸ್ ಗೂಢಚಾರಿಕೆ. ಈ ದೇಶದ ಎಲ್ಲ ವಲಯಗಳ ಗಣ್ಯರ ಗೂಢಚಾರಿಕೆಗಾಗಿ ಪೆಗಾಸಸ್‌ನ್ನು ಸರಕಾರ ಬಳಸಿಕೊಂಡಿತ್ತು ಎನ್ನುವ ಬಹುದೊಡ್ಡ ಆರೋಪ, ಉಳಿದೆಲ್ಲ ವಿಷಯಗಳನ್ನು ಪಕ್ಕಕ್ಕೆ ಸರಿಸುವಂತೆ ಮಾಡಿತು. ಕೊನೆಗೂ ಈ ಪೆಗಾಸಸ್ ಇಡೀ ಅಧಿವೇಶನವನ್ನು ಆಹುತಿ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಯಿತು.

ಅಧಿವೇಶನದಲ್ಲಿ ಯಾವುದನ್ನು ಚರ್ಚಿಸಬೇಕು, ಯಾವುದನ್ನು ಚರ್ಚಿಸಬಾರದು ಎನ್ನುವುದನ್ನು ಆಡಳಿತ ಪಕ್ಷವೇ ನಿರ್ಧರಿಸುವುದಾದರೆ, ಅಧಿವೇಶನ ಕರೆಯುವ ಅಗತ್ಯವಿದೆಯೆ? ಸರಕಾರಕ್ಕೆ ಅಪಥ್ಯವಾದ ಯಾವುದನ್ನೂ ಚರ್ಚಿಸಬಾರದು ಎಂದ ಮೇಲೆ, ಅಧಿವೇಶನದ ಉದ್ದೇಶವೇನು? ಪ್ರತಿಪಕ್ಷಗಳ ಅಗತ್ಯವಾದರೂ ಇದೆಯೇ? ಕಳೆದೆರಡು ವರ್ಷಗಳಲ್ಲಿ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಅಧಿವೇಶನದಲ್ಲಲ್ಲದೆ ಇನ್ನೆಲ್ಲಿ ಚರ್ಚಿಸಲು ಸಾಧ್ಯ? ಗಂಗಾನದಿಯಲ್ಲಿ ತೇಲಿದ ನೂರಾರು ಹೆಣಗಳು, ಆಕ್ಸಿಜನ್ ಇಲ್ಲದೆ ಮೃತಪಟ್ಟ ನೂರಾರು ಕೊರೋನ ಸಂತ್ರಸ್ತರು, ವಲಸೆ ಕಾರ್ಮಿಕರು ಅನುಭವಿಸಿದ ಸಾವು ನೋವುಗಳು, ದೇಶದಲ್ಲಿ ಮುಚ್ಚುತ್ತಿರುವ ಉದ್ದಿಮೆಗಳು, ಹೆಚ್ಚುತ್ತಿರುವ ನಿರುದ್ಯೋಗಗಳು ಇವೆಲ್ಲವನ್ನು ಚರ್ಚಿಸದೆ ಕೊರೋನ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವೇ? ಮಾತುಮಾತಿಗೂ ಲಸಿಕೆಗಳ ಅಂಕಿಅಂಶಗಳನ್ನು ಹೇಳುತ್ತಿರುವ ಸರಕಾರಕ್ಕೆ ದೇಶಕ್ಕಾಗಿರುವ ನಾಶ ನಷ್ಟವನ್ನು ಲಸಿಕೆಗಳ ಅಂಕಿಅಂಶಗಳಿಂದ ಭರ್ತಿ ಮಾಡಲು ಸಾಧ್ಯವಿಲ್ಲ ಎನ್ನುವ ಸತ್ಯ ಗೊತ್ತಿಲ್ಲವೇ? ವಿರೋಧ ಪಕ್ಷಗಳ ಗದ್ದಲಗಳಿಂದಾಗಿ ಕೊರೋನದಂತಹ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗಲಿಲ್ಲ ಎಂದು ಸರಕಾರ ಆರೋಪಿಸುತ್ತಿದೆ. ಆಕ್ಸಿಜನ್‌ನಿಂದ ಮೃತಪಟ್ಟ ಕೊರೋನ ಸಂತ್ರಸ್ತರ ಕುರಿತಂತೆ ತನ್ನ ಬಳಿ ಯಾವುದೇ ಮಾಹಿತಿಯಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಈ ದೇಶದಲ್ಲಿ ಆಕ್ಸಿಜನ್ ಕೊರತೆಯಿಂದ ಯಾರೂ ಸತ್ತಿಲ್ಲ ಎನ್ನುತ್ತಿರುವ ಸರಕಾರದ ಜೊತೆಗೆ ಕೊರೋನವನ್ನು ಎದುರಿಸುವ ಬಗೆಯನ್ನು ನಡೆಸುವುದಾದರೂ ಹೇಗೆ? ಆಕ್ಸಿಜನ್ ಕೊರತೆಯಿಂದ ಮೃತಪಟ್ಟ ಬಗ್ಗೆ ನ್ಯಾಯಾಲಯಗಳೂ ತನ್ನ ಆತಂಕವನ್ನು ವ್ಯಕ್ತಪಡಿಸಿರುವಾಗ ಜನರ ನಡುವೆ ಇರಬೇಕಾದ ಜನಪ್ರತಿನಿಧಿಗಳಿಗೇ ಆ ಬಗ್ಗೆ ಮಾಹಿತಿಯಿಲ್ಲ ಎಂದಾದರೆ, ಕೊರೋನವನ್ನು ಸರಕಾರ ಎಷ್ಟು ಗಂಭೀರವಾಗಿ ಸ್ವೀಕರಿಸಿದೆ ಎನ್ನುವುದನ್ನು ನಾವು ಗ್ರಹಿಸಬಹುದು. ಇದೇ ಸಂದರ್ಭದಲ್ಲಿ, ದಿಲ್ಲಿಯ ಗಡಿಯಲ್ಲಿ ಹಲವು ತಿಂಗಳುಗಳಿಂದ ರೈತರು ತಮ್ಮ ಹಕ್ಕಿಗಾಗಿ ಬೀಡು ಬಿಟ್ಟಿದ್ದಾರೆ.

ಸರಕಾರದ ರೈತ ವಿರೋಧಿ ಕಾಯ್ದೆಗಳನ್ನು ಹಿಂದೆಗೆಯುವಂತೆ ಒತ್ತಾಯಿಸುತ್ತಿದ್ದಾರೆ. ಕೊರೋನದ ಈ ಸಂಕಷ್ಟದ ದಿನಗಳಲ್ಲೂ ಅವರು ತಮ್ಮ ಧರಣಿಯಿಂದ ಅಲ್ಲಾಡಿಲ್ಲ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅವರ ಬೇಡಿಕೆಗಳು ಚರ್ಚೆಯಾಗುತ್ತಿವೆ. ಮಾನವ ಹಕ್ಕು ಸಂಘಟನೆಗಳು ಅವರ ಪರವಾಗಿ ಬೀದಿಗಿಳಿದಿವೆ. ಆದರೆ ಸರಕಾರ ಕಣ್ಣಿದ್ದೂ ಕುರುಡನಂತೆ ವರ್ತಿಸುತ್ತಿದೆ. ಆದರೆ ಈ ಕುರುಡು ನಾಟಕ ಸಮಸ್ಯೆಯನ್ನು ಬಗೆಹರಿಸುವುದಿಲ್ಲ. ಈ ಅಧಿವೇಶನದಲ್ಲಾದರೂ ರೈತರ ಸಮಸ್ಯೆಗಳು ಚರ್ಚೆಯಾಗಬೇಕಾಗಿತ್ತು. ಆದರೆ ಚರ್ಚೆಯಾಗುವುದು ಸರಕಾರಕ್ಕೆ ಬೇಕಾಗಿರಲಿಲ್ಲ. ಆದುದರಿಂದಲೇ ಕಲಾಪ ಸರಿಯಾದ ಹಾದಿಯಲ್ಲಿ ಸಾಗುವುದು ಸರಕಾರಕ್ಕೆ ಇಷ್ಟವಿರಲಿಲ್ಲ. ಪೆಗಾಸಸ್‌ನ್ನು ಬಳಸಿಕೊಂಡು ಪ್ರತಿಪಕ್ಷಗಳು ಕಲಾಪವನು ಬಲಿತೆಗೆದುಕೊಂಡಿತೋ, ಅಥವಾ ಸರಕಾರವೇ ಪೆಗಾಸಸ್‌ನ್ನು ಬಳಸಿಕೊಂಡು ಅಧಿವೇಶನವನ್ನು ನಡೆಯದಂತೆ ನೋಡಿಕೊಂಡಿತೋ ಊಹಿಸುವುದು ಕಷ್ಟವಿಲ್ಲ. ಇಷ್ಟಕ್ಕೂ ಪೆಗಾಸಸ್ ಗೂಢಚಾರಿಕೆ ಪ್ರತಿಪಕ್ಷಗಳ ಕೃತಕ ಆರೋಪವಲ್ಲ. ಅಧಿವೇಶವನ್ನು ವ್ಯರ್ಥಗೊಳಿಸಲು ಸೃಷ್ಟಿಸಿದ ಬಾಯಿ ಮಾತಿನ ಆರೋಪಗಳಲ್ಲ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪತ್ರಕರ್ತರ ತಂಡ ಹೊರಗೆಡಹಿದ ಗಂಭೀರ ಪ್ರಕರಣ ಇದು. ಈ ಬಗ್ಗೆ ಬೇರೆ ಬೇರೆ ದೇಶಗಳು ಈಗಾಗಲೇ ತನಿಖೆಗೆ ಆದೇಶ ನೀಡಿವೆ. ಪೆಗಾಸಸ್ ಕಣ್ಗಾವಲು ತಂತ್ರಜ್ಞಾನದ ಮಾರಾಟವನ್ನು ನಿಲ್ಲಿಸುವುದಕ್ಕಾಗಿ ವಿಶ್ವಸಂಸ್ಥೆ ಮಾನವ ಹಕ್ಕು ತಜ್ಞರೂ ಕರೆ ನೀಡಿದ್ದಾರೆ.

‘ಇದು ನಿಜವೇ ಆಗಿದ್ದರೆ ಗಂಭೀರ ವಿಷಯ’ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯವೇ ಆತಂಕ ವ್ಯಕ್ತಪಡಿಸಿದೆ. ಜೊತೆಗೆ ಹಲವು ವಿರೋಧ ಪಕ್ಷದ ನಾಯಕರ ವಿರುದ್ಧವೂ ಪೆಗಾಸಸ್ ತಂತ್ರಜ್ಞಾನವನ್ನು ಬಳಸಲಾಗಿದೆ ಎಂಬ ಆರೋಪಗಳಿವೆ. ಹೀಗಿರುವಾಗ, ಇದರ ವಿರುದ್ಧ ಪ್ರತಿಪಕ್ಷಗಳು ತನಿಖೆಗೆ ಆಗ್ರಹಿಸಲೇ ಬಾರದು ಎಂದು ಹೇಳುವುದು ಸರಕಾರದ ಸರ್ವಾಧಿಕಾರಿ ಧೋರಣೆಯಲ್ಲವೇ? ನಿಜಕ್ಕೂ ಅಧಿವೇಶನ ಮುಂದುವರಿಸುವ ಬಗ್ಗೆ ಸರಕಾರಕ್ಕೆ ಆಸಕ್ತಿಯಿದ್ದಿದ್ದರೆ ಈ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲು ಅನುಮತಿ ನೀಡುತ್ತಿತ್ತು. ಆದರೆ ಸರಕಾರಕ್ಕೆ ಪೆಗಾಸಸ್ ಕುರಿತಂತೆಯೂ ತನಿಖೆ ನಡೆಯುವುದು ಇಷ್ಟವಿರಲಿಲ್ಲ. ಮಾತ್ರವಲ್ಲ, ಅಧಿವೇಶನ ಸುಗಮವಾಗಿ ನಡೆಯುವುದು ಬೇಕಾಗಿರಲಿಲ್ಲ. ಅಧಿವೇಶನ ಹಳಿಗೆ ಬಂದರೆ, ವಿರೋಧ ಪಕ್ಷಗಳ ಇನ್ನಷ್ಟು ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ. ಅವುಗಳಿಗೆ ಉತ್ತರಿಸುವ ಸ್ಥಿತಿಯಲ್ಲಿ ಕೇಂದ್ರ ಸರಕಾರ ಇದ್ದಿರಲಿಲ್ಲ. ಬುಧವಾರ ರಾಜ್ಯಸಭೆಯಲ್ಲಿ ಸಂಸದರ ವಿರುದ್ಧ ಹಲ್ಲೆ ನಡೆಸಲು ಹೊರಗಿನ ಶಕ್ತಿಗಳನ್ನು ಬಳಸಿಕೊಳ್ಳಲಾಗಿತ್ತು ಎನ್ನುವ ಗಂಭೀರ ಆರೋಪಗಳನ್ನೂ ಪ್ರತಿಪಕ್ಷಗಳು ಮಾಡಿವೆ. ಅದು ನಿಜವೇ ಆಗಿದ್ದರೆ, ಸಂಸತ್‌ಗೆ ಮಾಡಿದ ಅತಿ ದೊಡ್ಡ ಅವಮಾನವೇ ಸರಿ. ಈ ನಿಟ್ಟಿನಲ್ಲಿ ಸರಕಾರ ತನ್ನನ್ನು ತಾನು ಸಮರ್ಥಿಸಿಕೊಳ್ಳದೆ ಸತ್ಯಾಸತ್ಯತೆ ಏನು ಎನ್ನುವುದನ್ನು ಜನರಿಗೆ ತಿಳಿಸಲು ತನಿಖೆಗೆ ಆದೇಶ ನೀಡಬೇಕಾಗಿದೆ. ಸಂಸತ್ ಅಧಿವೇಶನವನ್ನು ಅವಧಿಗೆ ಮುನ್ನವೇ ಹಠಾತ್‌ಅಂತ್ಯಗೊಳಿಸಿರುವುದು ಜನರಿಗೆ ಎಸಗಿದ ದ್ರೋಹವಾಗಿದೆ. ಜನರ ಸಂಕಟಗಳಿಗೆ ಸ್ಪಂದಿಸುವಲ್ಲಿ ಅಧಿವೇಶನ ಸಂಪೂರ್ಣ ವಿಫಲವಾದುದಕ್ಕೆ ಕೇಂದ್ರ ಸರಕಾರ ದೇಶದ ಕ್ಷಮೆ ಯಾಚಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News