​ಈ ರಾಜ್ಯದಲ್ಲಿ ವಿರೋಧ ಪಕ್ಷವಿಲ್ಲದ ಸರ್ಕಾರ ರಚನೆಗೆ ನಿರ್ಧಾರ!

Update: 2021-08-13 04:20 GMT
ನಾಗಾಲ್ಯಾಂಡ್ ಮುಖ್ಯಮಂತ್ರಿ ನೀಫಿಯು ರಿಯೊ (Photo credit: twitter@Neiphiu_Rio)

ಕೋಹಿಮಾ, ಆ.13: ಇಬ್ಬರು ಪಕ್ಷೇತರ ಸದಸ್ಯರನ್ನು ಜತೆಗೂಡಿಕೊಂಡು ರಾಜ್ಯದಲ್ಲಿ ವಿರೋಧ ಪಕ್ಷಗಳೇ ಇಲ್ಲದ 'ನಾಗಾಲ್ಯಾಂಡ್ ಸಂಯುಕ್ತ ಸರ್ಕಾರ' ರಚಿಸಲು ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಪ್ರಗತಿಪರ ಪಕ್ಷ (ಎನ್‌ಡಿಪಿಪಿ) ಮತ್ತು ಪ್ರಮುಖ ವಿರೋಧ ಪಕ್ಷವಾದ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ತಾತ್ವಿಕ ನಿರ್ಧಾರ ಕೈಗೊಂಡಿವೆ.

ಮುಖ್ಯಮಂತ್ರಿ ನೀಫಿಯು ರಿಯೊ ಅವರ ಅಧಿಕೃತ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

ಈ ಹೊಸ ರಾಜಕೀಯ ಬೆಳವಣಿಗೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ತೆಮ್‌ಜೆನ್ ಇಮ್ನಾ ಅಲಾಂಗ್, "ನಾವು ಧನಾತ್ಮಕ ಸಂವಾದದಲ್ಲಿ ತೊಡಗಿದ್ದೇವೆ" ಎಂದಷ್ಟೇ ಹೇಳಿ ಯಾವುದೇ ವಿವರಗಳನ್ನು ಬಿಟ್ಟುಕೊಡಲು ನಿರಾಕರಿಸಿದರು.

ಕಳೆದ ಜುಲೈ 19ರಂದು ಎನ್‌ಪಿಎಫ್ ಸರ್ವಪಕ್ಷಗಳ ಸರ್ಕಾರ ರಚನೆಗೆ ನಿರ್ಣಯ ಅಂಗೀಕರಿಸಿತ್ತು ಹಾಗೂ ನಾಗಾ ರಾಜಕೀಯ ಪರಿಹಾರದ ಹಿತಾಸಕ್ತಿಯ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡಿತ್ತು.

ನಾಗಾಲ್ಯಾಂಡ್ ಶಾಸಕರು ನೇರವಾಗಿ ಶಾಂತಿ ಮಾತುಕತೆಗಳಲ್ಲಿ ತೊಡಗಿಸಿಕೊಂಡಿಲ್ಲವಾದರೂ, ಭಾರತ- ನಾಗಾ ಸಮಸ್ಯೆ ಇತ್ಯರ್ಥಪಡಿಸಲು ಅಗತ್ಯ ವೇದಿಕೆಯನ್ನು ಕಲ್ಪಿಸಿಕೊಡಲು ಬದ್ಧ ಎಂದು ಎಲ್ಲ ಪಕ್ಷಗಳ ಮುಖಂಡರು ಭರವಸೆ ನೀಡಿದ್ದರು.

2015ರಲ್ಲಿ ಎನ್‌ಪಿಎಫ್ ನೇತೃತ್ವದ ಡೆಮಾಕ್ರಟಿಕ್ ಅಲೆಯನ್ಸ್ ಆಫ್ ನಾಗಾಲ್ಯಾಂಡ್ ಅಧಿಕಾರಾವಧಿಯಲ್ಲೂ ಇಂಥದ್ದೇ ಸರ್ಕಾರವನ್ನು ರಾಜ್ಯ ಕಂಡಿತ್ತು. ಕಾಂಗ್ರೆಸ್ ಶಾಸಕರು ಸರಕಾರದಲ್ಲಿ ಕೈಜೋಡಿಸಿ ಅಂತಿಮವಾಗಿ ಆಡಳಿತಾರೂಢ ಎನ್‌ಪಿಎಫ್‌ನಲ್ಲಿ ವಿಲೀನವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News