ಟ್ವಿಟರ್ ಪಕ್ಷಪಾತಿ, ರಾಜಕೀಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ: ರಾಹುಲ್ ಗಾಂಧಿ ಕಿಡಿ

Update: 2021-08-13 06:59 GMT

ಹೊಸದಿಲ್ಲಿ: ತನ್ನ ಟ್ವಿಟರ್ ಖಾತೆಯನ್ನು ಲಾಕ್ ಮಾಡಿರುವ ಕುರಿತು ರಾಹುಲ್ ಗಾಂಧಿ ಇಂದು ಟ್ವಿಟರ್  ವಿರುದ್ಧ ಹರಿಹಾಯ್ದಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಯು ನಮ್ಮ  ರಾಜಕೀಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಹಾಗೂ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಿದರು.

"ನನ್ನ ಟ್ವಿಟರ್ ಅನ್ನು ಮುಚ್ಚುವ ಮೂಲಕ ಟ್ವಿಟರ್ ಸಂಸ್ಥೆಯು ನಮ್ಮ ರಾಜಕೀಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ನಮ್ಮ ರಾಜಕೀಯವನ್ನು ವ್ಯಾಖ್ಯಾನಿಸಲು ಕಂಪನಿಯು ತನ್ನ ವ್ಯಾಪಾರವನ್ನು ಮಾಡುತ್ತಿದೆ ಹಾಗೂ ರಾಜಕಾರಣಿಯಾಗಿ ಅದು ನನಗೆ ಇಷ್ಟವಿಲ್ಲ" ಎಂದು ಕಾಂಗ್ರೆಸ್ ಸಂಸದ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿರುವ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ  ದಾಳಿ ನಡೆಯುತ್ತಿದೆ. ನಮಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶವಿಲ್ಲ. ಮಾಧ್ಯಮಗಳು ನಿಯಂತ್ರಿಸಲ್ಪಡುತ್ತಿವೆ. ಟ್ವಿಟರ್‌ನಲ್ಲಿ ನಾವು ಯೋಚಿಸಿದ್ದನ್ನು ಹಾಕಲು ಅವಕಾಶವಿದೆ ಎಂದು ನಾನು ಭಾವಿಸಿದ್ದೆ. ಆದರೆ ಟ್ವಿಟರ್ ಈಗ ಪಕ್ಷಪಾತದ ವೇದಿಕೆಯಾಗಿದೆ. ಇದು ಸರಕಾರ ಏನು ಹೇಳುತ್ತದೆ ಅದನ್ನು ಕೇಳುತ್ತಿದೆ "ಎಂದು ರಾಹುಲ್ ಹೇಳಿದರು.

ಕಳೆದ ವಾರ ದಿಲ್ಲಿಯಲ್ಲಿ ಅತ್ಯಾಚಾರಕ್ಕೊಳಗಾಗಿ, ಕೊಲೆಗೀಡಾದ 9 ವರ್ಷದ ದಲಿತ ಬಾಲಕಿಯ ಕುಟುಂಬದೊಂದಿಗೆ ಕಾಂಗ್ರೆಸ್ ನಾಯಕ ಸಂವಹನ ನಡೆಸುತ್ತಿರುವ ಫೋಟೋಗಳಿರುವ ಪೋಸ್ಟ್‌ ಹಂಚಿಕೊಂಡಿದ್ದರು. ಆ ಬಳಿಕ ಟ್ವಿಟರ್ ಸಂಸ್ಥೆಯು ರಾಹುಲ್ ಗಾಂಧಿ ಹಾಗೂ  ಇತರ ಹಲವು ಕಾಂಗ್ರೆಸ್ ನಾಯಕರ ಟ್ವಿಟರ್ ಹ್ಯಾಂಡಲ್‌ಗಳನ್ನು ಲಾಕ್ ಮಾಡಿದೆ.

ಇದು ರಾಹುಲ್ ಗಾಂಧಿಯ ಮೇಲಿನ ದಾಳಿಯಲ್ಲ, ನಾನು 19-20 ಲಕ್ಷ ಫಾಲೋವರ್ಸ್ ಗಳನ್ನು ಹೊಂದಿದ್ದೇನೆ. ನೀವು ಅವರಿಗೆ ಅಭಿಪ್ರಾಯದ ಹಕ್ಕನ್ನು ನಿರಾಕರಿಸುತ್ತಿದ್ದೀರಿ. ಇದು ಕೇವಲ ಅನ್ಯಾಯವಲ್ಲ. ಟ್ವಿಟರ್ ಒಂದು ತಟಸ್ಥ ವೇದಿಕೆ ಎಂಬ ಕಲ್ಪನೆಯನ್ನೂ ಉಲ್ಲಂಘಿಸಲಾಗುತ್ತಿದೆ "ಎಂದು ಗಾಂಧಿ ತಮ್ಮ ವೀಡಿಯೊದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News