ಕಾಂಗ್ರೆಸ್‍ನವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಸಿ.ಟಿ.ರವಿ

Update: 2021-08-15 11:33 GMT

ಚಿಕ್ಕಮಗಳೂರು, ಆ.15: ಹಾಲಿ ಪ್ರಧಾನಮಂತ್ರಿಯನ್ನು ನರಹಂತಕ ಎಂದವರು, ಪ್ರಜಾಪ್ರಭುತ್ವವನ್ನೆ ಕತ್ತುಹಿಸುಕಿ ತುರ್ತು ಪರಿಸ್ಥಿತಿ ಹೇರಿದವರು ಪ್ರಜಾಪ್ರಭುತ್ವದ ಪಾಠ ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಸಿ.ಟಿ.ರವಿ ತಮ್ಮ ಎಂದಿನ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಅವರನ್ನು ಯಾರು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿದರೋ ಆ ಜನ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಕೆಲವೊಮ್ಮೆ ಉತ್ತರ ನೀಡಬೇಕಾದ ಸಂದರ್ಭ ಅವರಿಗೆ ಅವರದ್ದೇ ಭಾಷೆಯಲ್ಲಿ ಅರ್ಥವಾಗಲೆಂದು ಉತ್ತರ ಕೊಡುತ್ತೇವೆ ಎಂದು ಸಿ.ಟಿ.ರವಿ ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ,  ಸಿದ್ದರಾಮಯ್ಯ ಹೇಳಿದ್ದೆಲ್ಲಾ ಉಲ್ಟಾ ಆಗುತ್ತೆ. ಹಾಗಾಗಿ ಅವರ ಬಾಯಲ್ಲಿ ಉಲ್ಟಾ ಮಚ್ಚೆ ಇದೆ. ಸಿದ್ದರಾಮಯ್ಯನವರು ಅಪ್ಪನಾಣೆ ಮೋದಿ ಪ್ರಧಾನಿ ಆಗಲ್ಲ ಎಂದಿದ್ದರು. ಆದರೆ ಅವರು ಏನು ಹೇಳುತ್ತಾರೊ ಅದು ಉಲ್ಟಾ ಆಗುತ್ತದೆ, ಮೋದಿ ಪ್ರಧಾನಿ ಆಗಲ್ಲ ಎಂದಿದ್ದರೂ ಎರಡು ಬಾರಿ ಆದರು. 2018ರ ಚುನಾವಣೆಯಲ್ಲಿ ನಾನು ಮತ್ತೆ ಅಧಿಕಾರಕ್ಕೆ ಬಂದೆ ಬರುತ್ತೇನೆ ಅಂತಲೂ ಹೇಳಿದ್ದರು, ಆದರೆ ಅವರು ಅಧಿಕಾರಕ್ಕೆ ಬರಲಿಲ್ಲ. ಅವರು ಏನು ಹೇಳುತ್ತಾರೊ ಅದಕ್ಕೆ ತದ್ವಿರುದ್ಧವಾಗಿ ಆಗಿದೆ. ಅವರು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದರೆ ನೂರಕ್ಕೆ ನೂರು ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದರು.

ಬಿಜೆಪಿ ಉಳಿಯಲ್ಲ ಎಂದರೆ ಈ ಅವಧಿ ಪೂರ್ಣಗೊಳಿಸಿ ಮುಂದಿನ 5 ವರ್ಷಕ್ಕೂ ಅಧಿಕಾರಕ್ಕೆ ಬರುತ್ತದೆ. ಸಿದ್ದರಾಮಯ್ಯ ಏನು ಹೇಳುತ್ತಾರೋ ಅದು ಉಲ್ಟಾ ಆಗುತ್ತದೆ. ಅವರ ನಾಲಿಗೆಯಲ್ಲಿ ಉಲ್ಟಾ ಮಚ್ಚೆ ಇರಬಹುದೇನೋ ಎಂದು ವ್ಯಂಗ್ಯವಾಡಿದರು.

ಜಿಲ್ಲೆಯ ಅಭಿವೃದ್ಧಿಯನ್ನು ಸಿ.ಟಿ.ರವಿ ಮರೆತಿದ್ದಾರೆ ಎಂದು ಜನ ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಕ್ಷೇತ್ರದ ಜನರಿಗೆ ಕೊಟ್ಟ ಮಾತಿನಂತೆ ಎಲ್ಲಾ ಕೆಲಸಗಳನ್ನು ನಿರಂತರವಾಗಿ ಮಾಡುತ್ತಿದ್ದೇನೆ. ಕಳೆದ 3 ದಿನಗಳಲ್ಲಿ ಕ್ಷೇತ್ರದಲ್ಲಿ ಎಷ್ಟು ಸುತ್ತಿದ್ದೇನೆಂದು ನನಗೆ ಮಾತ್ರ ಗೊತ್ತು. ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ರೂಪಿಸಲು ನಮ್ಮವರಿದ್ದಾರೆ ಎಂದ ಅವರು, ಭದ್ರಾಯೋಜನೆ ಕುರಿತಂತೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ತಿಂಗಳ ಅಂತ್ಯದಲ್ಲಿ ಸಿಎಂ ಹಾಗೂ ಮಾಜಿ ಸಿಎಂ ಕರೆಸಿ ಶಂಕುಸ್ಥಾಪನೆ ನೆರವೇರಿಸಲು ಬಯಲು ಭಾಗದ ಶಾಸಕರ ಜೊತೆ ಚರ್ಚಿಸಲಾಗಿದೆ. ಈ ಸಂಬಂಧ ಆ.16ರಂದು ಸಿಎಂ ಅವರನ್ನು ಬೇಟಿಯಾಗಿ ಚರ್ಚೆ ಮಾಡುತ್ತೇನೆ ಎಂದರು.

ಮಲ್ಟಿ ವಿಲೇಜ್ ವಾಟರ್‍ಗೆ ಸಂಬಂದಿಸಿದಂತೆ ಡಿಪಿಆರ್ ಸಿದ್ಧವಾಗಿ ನಬಾರ್ಡ್‍ಗೆ ಹೋಗಿದ್ದು, ಅಲ್ಲಿಂದ ಬಂದಾಕ್ಷಣ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಮಿಲ್ಕ್ ಯೂನಿಯನ್ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ಯಾರು ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಾರೊ ಅವರನ್ನು ಕರೆದೊಯ್ದು ಮುಂದಿನ ಬಜೆಟ್‍ನಲ್ಲಿ ಸೇರಿಸಲು ಜಿಲ್ಲೆಯ ಎಲ್ಲಾ ಶಾಸಕರು ತಂಡವಾಗಿ ಪ್ರಯತ್ನಿಸುತ್ತೇವೆ ಎಂದರು.

ನನಗೆ ಈ ಹಿಂದೆ ಸಾಂವಿಧಾನಿಕ ಅಧಿಕಾರ ಇತ್ತು, ಧ್ವಜಾರೋಹಣವನ್ನು ನಾನೇ ಮಾಡಿ ಮಾತನಾಡಿದ್ದೆ. ಈಗ ಪಕ್ಷದ ಜವಾಬ್ದಾರಿಯುತ ಹುದ್ದೆ ಹಾಗೂ ಗೌರವ ಸಿಕ್ಕಿದೆ. ಗೌರವ ಮತ್ತು ಅಧಿಕಾರದ ನಡುವೆ ಪಕ್ಷವನ್ನು ಮೊದಲ ಆಯ್ಕೆ ಮಾಡಿಕೊಂಡಿದ್ದೇನೆ. ರಾಜ್ಯದಿಂದ ಹೊರಗೆ ಪಕ್ಷದ ಕಾರ್ಯಕರ್ತರ ನಡುವೆ ಓಡಾಟ ಮಾಡೋದು ಹೊಸ ಅನುಭವ ತಂದುಕೊಟ್ಟಿದೆ. ಇದು ನನ್ನ ಬೆಳವಣಿಗೆಗೆ ಅನುಕೂಲವಾಗಿದೆ. ನನ್ನ ಆಯ್ಕೆ ಬಗ್ಗೆ ದುಖಃವಿಲ್ಲ ಎಂದ ಅವರು, ಕೆಂಪುಕೋಟೆಯಲ್ಲಿನ ಪಾಸ್ ಒದಗಿತ್ತು. ಆದರೆ ಸ್ವ ಕ್ಷೇತ್ರದಲ್ಲಿ ಇರಬೇಕೆಂದು ಇಲ್ಲಿಗೆ ಬಂದಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News