ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲೂ ರಾಯಣ್ಣ ಪ್ರತಿಮೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2021-08-15 12:09 GMT

ಬೆಂಗಳೂರು, ಆ.15: `ವೀರ ಸೇನಾನಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ಪ್ರಮುಖ ಸ್ಥಳಗಳಲ್ಲಿ ನಿರ್ಮಾಣ ಮಾಡಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ರವಿವಾರ ಬಿಬಿಎಂಪಿ ವತಿಯಿಂದ ನಗರದ ರೈಲ್ವೆ ನಿಲ್ದಾಣದ ಎದುರು ಇರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿ ಬಳಿಕ ಅವರು ಮಾತನಾಡಿದ ಅವರು, `ಹೊಸದಿಲ್ಲಿಯಲ್ಲಿ ಪ್ರಮುಖ ಸ್ಥಳವೊಂದರಲ್ಲಿ ರಾಯಣ್ಣನವರ ಪ್ರತಿಮೆ ನಿರ್ಮಾಣ ಮಾಡಬೇಕೆಂಬುದು ಬಹುದಿನಗಳ ಬೇಡಿಕೆಯಾಗಿದೆ. ಈ ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಜತೆಗೆ, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣನವರ ಹೆಸರಿಡುವಂತೆ ಬೇಡಿಕೆಯಿದೆ. ನಾನು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇನೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

`ಇನ್ನು, ರಾಯಣ್ಣ ಹುಟ್ಟಿದ ಜನ್ಮಸ್ಥಳವಾದ ನಂದಗಡವನ್ನು ಒಂದು ಐತಿಹಾಸಕ ತಾಣವನ್ನಾಗಿ ಮಾಡಲಾಗುವುದು. ಹಿಂದಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಇದರ ಅಭಿವೃದ್ಧಿಗಾಗಿ 80 ಕೋಟಿ ಅನುದಾನ ಘೋಷಣೆ ಮಾಡಿದ್ದು, ಶೀಘ್ರದಲ್ಲೇ ಹಣವನ್ನು ಬಿಡುಗಡೆ ಆಗಲಿದೆ ಎಂದರು.

ಅದೇ ರೀತಿ, ನಂದಗಡದಲ್ಲಿ ರಾಯಣ್ಣನವರ ಹೆಸರಿನಲ್ಲಿ ಅದ್ಭುತವಾದ ಸೈನಿಕ ಶಾಲೆಯನ್ನು ನಿರ್ಮಾಣ ಮಾಡಲಾಗುತ್ತದೆ. ಇಲ್ಲಿ ದೇಶ ಕಾಯುವ ಸೈನಿಕರಿಗೆ ಅತ್ಯುತ್ತಮವಾದ ತರಬೇತಿ ನೀಡಲಾಗುವುದು. ನಂತರ ಕೇಂದ್ರ ಸರ್ಕಾರಕ್ಕೆ ಇದನ್ನು ಹಸ್ತಾಂತರ ಮಾಡಲಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಆರ್.ಅಶೋಕ್, ಎಂ.ಟಿ.ಬಿ. ನಾಗರಾಜ್, ಶಾಸಕ ದಿನೇಶ್ ಗುಂಡುರಾವ್, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಎಂ.ರೇವಣ್ಣ, ಕಾಗಿನೆಲೆ ಕನಕ ಗುರುಪೀಠ ಪೀಠಾಧ್ಯಕ್ಷ ನಿರಂಜನಾನಂದಪುರಿ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News