9 ಮತ್ತು 10ನೆ ತರಗತಿ ಆರಂಭಕ್ಕೆ ಶಿಕ್ಷಣ ಇಲಾಖೆ ಮಾರ್ಗಸೂಚಿ ಪ್ರಕಟ

Update: 2021-08-16 12:57 GMT

ಬೆಂಗಳೂರು, ಆ. 16: ರಾಜ್ಯದಲ್ಲಿನ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ 9 ಮತ್ತು 10ನೆ ತರಗತಿ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ `ಅರ್ಧದಿನ' ಪೂರ್ಣ ಪ್ರಮಾಣದಲ್ಲಿ ಬೊಧನಾ ತರಗತಿಗಳನ್ನು ಆರಂಭಿಸಲು ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮಾರ್ಗಸೂಚಿ ಸುತ್ತೋಲೆ ಹೊರಡಿಸಿದೆ.

2021-22ನೆ ಶೈಕ್ಷಣಿಕ ವರ್ಷದ ಶಾಲೆಗಳನ್ನು ಇದೇ ಆ.23ರಿಂದ ರಾಜ್ಯದಲ್ಲಿ ಕೋವಿಡ್-19ರ ಸೋಂಕಿನ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ 9 ಮತ್ತು 10ನೆ ತರಗತಿಗಳನ್ನು ಆರಂಭಿಸಲು ಸೂಚಿಸಲಾಗಿದೆ. ಪ್ರತಿದಿನ ಅರ್ಧದಿನ ಬೆಳಗಿನ ಅವಧಿಯಲ್ಲಿ ತೆರೆಯಲು ಸೂಚಿಸಲಾಗಿದೆ. 1ರಿಂದ 8ನೆ ತರಗತಿ ಆರಂಭ ಸದ್ಯಕ್ಕೆ ಇಲ್ಲ. ಅಲ್ಲದೆ, ಸೋಂಕಿನ ಪ್ರಮಾಣ ಶೇ.2ಕ್ಕಿಂತ ಹೆಚ್ಚು ಇರುವ ಜಿಲ್ಲೆಗಳಲ್ಲಿ 1 ರಿಂದ 10ನೆ ತರಗತಿಗಳಿಗೆ ಪರ್ಯಾಯ ವಿಧಾನದಲ್ಲಿ ಕಲಿಕೆ ಮತ್ತು ಬೋಧನಾ ಪ್ರಕ್ರಿಯೆಗಳನ್ನು ಮುಂದುವರೆಸಲು ಸುತ್ತೋಲೆಯಲ್ಲಿ ನಿರ್ದೇಶನ ನೀಡಲಾಗಿದೆ.

ಮಾರ್ಗಸೂಚಿ: 9 ಮತ್ತು 10ನೆ ತರಗತಿಯ ಮಕ್ಕಳು ಶಾಲೆಗೆ ಹಾಜರಾಗುವಾಗ ಪೋಷಕರ ಅನುಮತಿ ಪತ್ರ ತರುವುದು ಕಡ್ಡಾಯ. ಅನುಮತಿ ಪತ್ರದಲ್ಲಿ ಮಗುವಿಗೆ ಕೋವಿಡ್-19 ಸೋಂಕಿನ ಯಾವುದೇ ಲಕ್ಷಣಗಳಿರುವುದಿಲ್ಲ ಎಂದು ದೃಢೀಕರಿಸಬೇಕು. 9 ಮತ್ತು 10ನೆ ತರಗತಿಯ ವಿದ್ಯಾರ್ಥಿಗಳು ಮನೆಯಿಂದಲೇ ಅಗತ್ಯವಾದ ಕುಡಿಯುವ ನೀರು, ಉಪಹಾರವನ್ನು ತರುವುದು. ಶಾಲೆಗಳಲ್ಲಿ ಅವಶ್ಯಕತೆ ಅನುಸಾರ ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯಲು ಶುದ್ಧ ಬಿಸಿ ನೀರಿನ ವ್ಯವಸ್ಥೆ ಮಾಡುವುದು. ಶಾಲೆಗಳಲ್ಲಿ ವಿದ್ಯಾರ್ಥಿಗಳ ಭೌತಿಕ ಹಾಜರಾತಿ ಕಡ್ಡಾಯವಲ್ಲ. ಆನ್‍ಲೈನ್ ಅಥವಾ ಪರ್ಯಾಯ ವಿಧಾನದಲ್ಲಿಯೂ ಹಾಜರಾಗಬಹುದು. ಶಾಲೆಗೆ ಹಾಜರಾಗಲು ಬಯಸದೇ ಇರುವ ವಿದ್ಯಾರ್ಥಿಗಳಿಗೆ ಈಗ ಅನುಸರಿಸುತ್ತಿರುವ ಆನ್‍ಲೈನ್ ಇತರೆ ಪರ್ಯಾಯ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗಬೇಕು.

ಸಲಹಾತ್ಮಕ ವೇಳಾಪಟ್ಟಿ: 9 ಮತ್ತು 10ನೆ ತರಗತಿಯ ಮಕ್ಕಳಿಗೆ ಭೌತಿಕ ತರಗತಿಗಳನ್ನು ನಡೆಸಲು ಅವಶ್ಯಕ ದೈಹಿಕ ಅಂತರ ಕಾಪಾಡುವ ದೃಷ್ಟಿಯಿಂದ ಶಾಲಾ ಹಂತದಲ್ಲಿ ಕೊಠಡಿಗಳ ಲಭ್ಯತೆ, ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಶಿಕ್ಷಕರ ಸಂಖ್ಯೆಯನ್ನು ಆಧರಿಸಿ 9 ಮತ್ತು 10ನೆ ತರಗತಿಗಳ ವಿದ್ಯಾರ್ಥಿಗಳನ್ನು 15 ರಿಂದ 20 ಸಂಖ್ಯೆಯ ವಿದ್ಯಾರ್ಥಿಗಳ ತಂಡಗಳನ್ನಾಗಿ ಮಾಡಿಕೊಂಡು, ಭೌತಿಕ ತರಗತಿಗಳನ್ನು ನಡೆಸುವುದು. ಸೋಮವಾರದಿಂದ ಶುಕ್ರವಾರದ ವರೆಗೆ ಪ್ರತಿನಿತ್ಯ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:30ರ ವರೆಗೆ ಹಾಗೂ ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12:50ರ ವರೆಗೆ ಮಾತ್ರ ನಡೆಸಬೇಕು ಎಂದು ಸೂಚಿಸಲಾಗಿದೆ.

ಸ್ಯಾನಿಟೈಜ್ ಕಡ್ಡಾಯ: ಭೌತಿಕ ತರಗತಿ ಆರಂಭಕ್ಕೆ ಮೊದಲು ಶಾಲೆಯ ಆವರಣ, ಕಾಂಪೌಂಡ್, ಮುಖ್ಯದ್ವಾರ ಸಹಿತ ಶಾಲಾ ಕೊಠಡಿ, ಪೀಠೋಪಕರಣಗಳನ್ನು ಸ್ವಚ್ಛಗೊಳಿಸಿ ಧೂಳು ಒರೆಸಿ ಸೋಂಕು ನಿವಾರಣಾ ದ್ರಾವಣ ಸಿಂಪಡಿಸಬೇಕು. ಶಾಲೆಯಲ್ಲಿ ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿ ನೀರು ತುಂಬಿಸಬೇಕು. ಶೌಚಾಲಯ, ಮೂತ್ರಾಲಯವನ್ನು ಹೈಪೋಕ್ಲೋರೈಟ್ ದ್ರಾವಣ ಬಳಸಿ ಸ್ವಚ್ಚಗೊಳಿಸತಕ್ಕದ್ದು. ಮಲೆಗಾಲವಾಗಿದ್ದರಿಂದ ಶಿಥಿಲ ಕೊಠಡಿ/ಕಟ್ಟಡಗಳಲ್ಲಿ ಮಕ್ಕಳನ್ನು ಕೂರಿಸಬಾರದು.

ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು: ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕನಿಷ್ಟ 3ರಿಂದ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು. ಮಕ್ಕಳ ದಟ್ಟಣೆ ತಪ್ಪಿಸಲು ಆಗಮನ ಮತ್ತು ನಿರ್ಗಮನ ಪ್ರತ್ಯೇಕ ಮಾರ್ಗ ವ್ಯವಸ್ಥೆ ಕಲ್ಪಿಸಬೇಕು. ವಿದ್ಯಾರ್ಥಿಗಳು ಶಾಲಾ ಆವರಣ ಪ್ರವೇಶಕ್ಕೆ ಮೊದಲು ಹ್ಯಾಂಡ್ ಸ್ಯಾನಿಟೈಸರ್ ಅಥವಾ ಸಾಬೂನಿನಿಂದ ಕೈಗಳನ್ನು ಸ್ವಚ್ಚಗೊಳಿಸಲು ಅವಕಾಶ ಕಲ್ಪಿಸತಕ್ಕದ್ದು. ಥರ್ಮಲ್ ಸ್ಕ್ಯಾನರ್‍ನಿಂದ ವಿದ್ಯಾರ್ಥಿಗಳ ದೇಹದ ಉಷ್ಣತೆ ಪರೀಕ್ಷಿಸತಕ್ಕದ್ದು. ಶಾಲೆಗೆ ಆಗಮಿಸುವ ಮತ್ತು ನಿರ್ಗಮಿಸುವ ವೇಳೆ ದಟ್ಟಣೆ ಆಗದಂತೆ ನೋಡಿಕೊಳ್ಳಬೇಕು. ಯಾವುದೇ ವಿದ್ಯಾರ್ಥಿಗೆ ಕೆಮ್ಮು ಜ್ವರ, ನೆಗಡಿ, ಮೂಗು ಸೋರಿಕೆ ಕಂಡು ಬಂದರೆ, ಐಸೋಲೇಷನ್‍ನಲ್ಲಿ ತಾತ್ಕಾಲಿಕವಾಗಿ ಇರಿಸಿ, ಬಳಿಕ ಪೋಷಕರು ಸಂಪರ್ಕಿಸಿ ಮನೆಗೆ ಕಳುಹಿಸಬೇಕು. ವಿದ್ಯಾರ್ಥಿಗಳು ತಮ್ಮ ನಡುವೆ ವಸ್ತುಗಳನ್ನು ಪರಸ್ಪರ ವಿನಿಮಯ ಮಾಡದಂತೆ ನೋಡಿಕೊಳ್ಳಬೇಕು.

ಶಿಕ್ಷಕರಿಗೆ ಮುನ್ನಚ್ಚರಿಕೆ: ಮುಖ್ಯಶಿಕ್ಷಕರು ಮತ್ತು ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. 50 ವರ್ಷ ಮೇಲ್ಪಟ್ಟ ಶಿಕ್ಷಕರು ಮಾಸ್ಕ್ ಜೊತೆಗೆ ಫೇಸ್ ಶೀಲ್ಡ್ ಧರಿಸುವುದು ಒಳಿತು. ಶಾಲೆ ಮತ್ತು ತರಗತಿಗಳಲ್ಲಿ ಅಂತರ ಕಾಯ್ದುಕೊಳ್ಳಬೇಕು. ಎಲ್ಲ ಸಿಬ್ಬಂದಿ ಕೋವಿಡ್ ಲಸಿಕೆ ಪಡೆದಿದ್ದಾರೆಂಬುದನ್ನು ಖಚಿತಪಡಿಸಿಕೊಳ್ಳಬೇಕು. ಲಸಿಕೆ ಪಡೆಯದಿದ್ದಲ್ಲಿ ಶೀಘ್ರವೇ ಒದಗಿಸಿಕೊಡಬೇಕು. ಸೋಂಕಿನ ಲಕ್ಷಣಗಳಿದ್ದರೆ ಶಾಲೆಗೆ ಹಾಜರಾಗಬಾರದು. ಪುನಃ ಶಾಲೆಗೆ ಹಾಜರಾಗುವ ಮೂರುದಿನ ಮೊದಲೆ ಆರ್‍ಟಿಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ರಿಪೋರ್ಟ್ ಅನ್ನು ಸಲ್ಲಿಸಬೇಕು.

ಪ್ರತಿದಿನ ಶಾಲೆ ಪ್ರಾರಂಭ ಮತ್ತು ಶಾಲೆ ಮುಕ್ತಾಯ ಆಗುವವರೆಗೂ ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಅನುಸರಿಸಬೇಕು. ಈ ಕುರಿತು ಮೇಲ್ವಿಚಾರಣೆಗೆ ಒಬ್ಬ ಶಿಕ್ಷಕರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು. ವಿದ್ಯಾರ್ಥಿಗಳು ಒಂದು ಕಡೆ ಗುಂಪು ಸೇರುವ ಸಭೆ, ಸಮಾರಂಭ, ಹಬ್ಬಗಳು ಹಾಗೂ ಇತರೆ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಹಮ್ಮಿಕೊಳ್ಳಬಾರದು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News