ಚುನಾವಣೆಯಲ್ಲಿ ಸ್ಪರ್ಧಿಸಲು ಗೋಸಾಕಣೆ ಕಡ್ಡಾಯಗೊಳಿಸಿ: ಚುನಾವಣಾ ಆಯೋಗಕ್ಕೆ ಬಿಜೆಪಿ ಸಚಿವರ ಸಲಹೆ

Update: 2021-08-16 17:22 GMT

ಭೋಪಾಲ, ಆ. 16: ಚುನಾವಣೆಗಳಲ್ಲಿ ಸ್ಪರ್ಧಿಸಲು ಗೋವು ಸಾಕಣೆ ಕಡ್ಡಾಯಗೊಳಿಸಬೇಕು ಎಂದು ಬಿಜೆಪಿ ಆಡಳಿತ ಇರುವ ಮಧ್ಯಪ್ರದೇಶದ ಸಚಿವ ಹರ್ದೀಪ್ ಸಿಂಗ್ ಡಾಂಗ್ ಸೋಮವಾರ ಚುನಾವಣಾ ಆಯೋಗಕ್ಕೆ ಸಲಹೆ ನೀಡಿದ್ದಾರೆ. 

ತಿಂಗಳಿಗೆ 25 ಸಾವಿರ ರೂಪಾಯಿಗಿಂತ ಹೆಚ್ಚು ವೇತನ ಪಡೆಯುವ ರಾಜ್ಯ ಸರಕಾರದ ಉದ್ಯೋಗಿಗಳಿಂದ ಗೋರಕ್ಷಣೆಗೆ ಪ್ರತಿ ತಿಂಗಳು 500 ರೂಪಾಯಿ ಸಂಗ್ರಹಿಸಬೇಕು ಹಾಗೂ ಗೋವುಗಳನ್ನು ರಕ್ಷಿಸಲು ಸಮಾಜದ ಎಲ್ಲಾ ವರ್ಗಗಳು ಕೊಡುಗೆ ನೀಡಲು ಕಾನೂನಿನ ಖಾತರಿ ನೀಡಬೇಕು ಎಂದು ಕೂಡ ಅವರು ಹೇಳಿದ್ದಾರೆ. 

‘‘ಚುನಾವಣೆಗೆ ಸ್ಪರ್ಧಿಸಲು ಗೋವು ಸಾಕಣೆ ಕಡ್ಡಾಯಗೊಳಿಸುವಂತೆ ನಾನು ಚುನಾವಣಾ ಆಯೋಗವನ್ನು ಆಗ್ರಹಿಸುತ್ತೇನೆ. ಗೋಸಾಕಣೆ ಮಾಡದವರ ಫಾರ್ಮ್ ಅನ್ನು ರದ್ದುಗೊಳಿಸಬೇಕು. ನಾನು ಈ ಸಂಬಂಧ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಿದ್ದೇನೆ’’ ಎಂದು ಅವರು ಹೇಳಿದ್ದಾರೆ. ಪ್ರಸ್ತಾಪಿತ ಕೃಷಿ ಕಾಯ್ದೆಯ ಅಡಿಯಲ್ಲಿ ಕೃಷಿ ಮಾಡುವರು ಅಥವಾ ಕೃಷಿ ಉತ್ಪನ್ನಗಳನ್ನು ಖರೀದಿಸುವ ಹಾಗೂ ಮಾರುವುದರಲ್ಲಿ ಭಾಗಿಯಾದವರು ಗೋವು ಸಾಕಣೆ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಡಾಂಗ್ ತಿಳಿಸಿದ್ದಾರೆ.

‘‘ಸರಕಾರಿ ಸಿಬ್ಬಂದಿಗೆ ಗೋ ಸಾಕಣೆ ಸಾಧ್ಯವಿಲ್ಲ. ಆದುದರಿಂದ ತಿಂಗಳಿಗೆ 25 ಸಾವಿರ ರೂಪಾಯಿಗಿಂತ ಹೆಚ್ಚು ವೇತನ ಪಡೆಯುವ ಸರಕಾರಿ ಸಿಬ್ಬಂದಿಯಿಂದ ತಿಂಗಳಿಗೆ 500 ರೂಪಾಯಿ ಸಂಗ್ರಹಿಸಬೇಕು’’ ಎಂದು ಅವರು ಹೇಳಿದ್ದಾರೆ. ಗೋರಕ್ಷಣೆ ಕುರಿತಂತೆ ಸುಮ್ಮನೆ ಮಾತನಾಡುವ ಬದಲು, ಈ ದಿಶೆಯಲ್ಲಿ ಅರ್ಥಪೂರ್ಣ ಕ್ರಮ ಕೈಗೊಳ್ಳುವ ಅಗತ್ಯತೆ ಇದೆ ಎಂದು ಡಾಂಗೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News