ಘೋಷಣೆಯಲ್ಲೇ ಮುಗಿದ ಭಾಷಣ

Update: 2021-08-17 04:29 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಈ ಬಾರಿ ಹಿಂದೆಂದಿಗಿಂತ ಭಾರೀ ಭದ್ರತೆಯೊಂದಿಗೆ ಸ್ವಾತಂತ್ರೋತ್ಸವದ ಭಾಷಣವನ್ನು ನರೇಂದ್ರ ಮೋದಿಯವರು ಮಾಡಿದ್ದಾರೆ. ಹಾಗೆಂದು ಅವರಿಗೆ ಬೆದರಿಕೆಯಿದ್ದದ್ದು ಯಾವುದೋ ಭಯೋತ್ಪಾದಕರಿಂದಲ್ಲ. ದಿಲ್ಲಿಯಲ್ಲಿ ಬೀಡು ಬಿಟ್ಟಿರುವ ರೈತರು ಏಕಾಏಕಿ ಕೆಂಪುಕೋಟೆಯನ್ನು ಪ್ರವೇಶಿಸುವ ಪ್ರಯತ್ನ ನಡೆಸಬಹುದು ಎನ್ನುವ ಭೀತಿಯಿಂದ ಪ್ರಧಾನಿಗೆ ಈ ಪರಿಯ ಭದ್ರತೆಯನ್ನು ನೀಡಲಾಗಿತ್ತು. ತನ್ನದೇ ದೇಶದ ರೈತರಿಗೆ ಬೆದರಿ, ಭಾರೀ ಭದ್ರತೆಯೊಂದಿಗೆ ಪ್ರಧಾನಿಯೊಬ್ಬರು ಕೆಂಪುಕೋಟೆಯಿಂದ ಭಾಷಣ ಮಾಡಿರುವುದು ಇದೇ ಮೊದಲಿರಬೇಕು. ಭಾಷಣಗಳಿಂದ ಈ ದೇಶ ಉದ್ಧಾರವಾಗುವುದಿದ್ದರೆ, ಪ್ರಧಾನಿ ಮೋದಿಯವರು ಅಧಿಕಾರ ಹಿಡಿದ ದಿನದಿಂದ ನಿರಂತರವಾಗಿ ಹರಿಸುತ್ತಿರುವ ಭಾಷಣದ ಫಲವಾಗಿ ಭಾರತ ವಿಶ್ವದಲ್ಲೇ ಸೂಪರ್ ಪವರ್ ದೇಶವಾಗಿ ಹೊರಹೊಮ್ಮಬೇಕಾಗಿತ್ತು. ಆದರೆ, 'ಹಿತ್ತಲಲ್ಲಿ ಉಪದೇಶಗಳ ಗೊಬ್ಬರ, ಇತ್ತ ಬಿತ್ತಲು ಬೀಜವಿಲ್ಲ, ಉಳುವುದಕ್ಕೆ ಭೂಮಿಯಿಲ್ಲ' ಎನ್ನುವಂತೆ ಗೊಬ್ಬರಕ್ಕೆ ಮೂಗು ಮುಚ್ಚಿಕೊಳ್ಳುವುದಷ್ಟೇ ಭಾರತೀಯರ ಭಾಗ್ಯ ಎನ್ನುವಂತಾಗಿದೆ. ಕೊರೋನ, ಲಾಕ್‌ಡೌನ್‌ನಿಂದ ತತ್ತರಿಸಿದ ದೇಶಕ್ಕೆ ಏನಾದರೂ ಹೊಸ ಭರವಸೆ ಪ್ರಧಾನಿಯ ಭಾಷಣದಿಂದ ಸಿಗಬಹುದು ಎಂದು ನಿರೀಕ್ಷೆಯಲ್ಲಿದ್ದವರಿಗೆ ಗಾಢ ನಿರಾಸೆಯಾಗಿದೆ. ಸ್ವಾತಂತ್ರ್ಯದ ಶತಮಾನೋತ್ಸವ ಸಂದರ್ಭದಲ್ಲಿ ದೇಶವು ಹೇಗಿರಬೇಕೆಂಬ ನೀಲ ನಕ್ಷೆಯನ್ನು ಮೋದಿಯವರು ಭಾರತದ ಜನರ ಮುಂದೆ ಇಟ್ಟಿದ್ದಾರೆ. ಜೊತೆಗೆ ಜನಸಾಮಾನ್ಯರಿಗೆ ಹಲವು ಆಶ್ವಾಸನೆಗಳನ್ನು ನೀಡಿದ್ದಾರೆ. ಆದರೆ ಕಳೆದ ವರ್ಷ ಮತ್ತು ಅದರ ಹಿಂದಿನ ಐದಾರು ವರ್ಷಗಳ ಕಾಲಾವಧಿಯಲ್ಲಿ ಜನರಿಗೆ ಅವರು ನೀಡಿದ ಭರವಸೆಗಳು ಈಡೇರಿದವೇ? ಎಂಬ ಬಗೆಗೂ ಪರಾಮರ್ಶೆ ನಡೆಯಬೇಕಾಗಿದೆ.

ಆದರೆ ಪ್ರಧಾನ ಮಂತ್ರಿಯವರ ಭಾಷಣದಲ್ಲಿ ವಾಕ್ಚಾತುರ್ಯದ ವೈಭವಾಡಂಬರ ಬಿಟ್ಟರೆ ಅವರು ಜನರಿಗೆ ನೀಡಿದ ಭರವಸೆಗಳೆಲ್ಲ ಕಳೆದ ಎಂಟು ವರ್ಷಗಳಿಂದ ನೀಡುತ್ತ ಬಂದ ಒಣ ಭರವಸೆಗಳಲ್ಲದೆ ಬೇರೇನೂ ಅಲ್ಲ ಎಂದರೆ ಅತಿಶಯೋಕ್ತಿಯಲ್ಲ.ಪ್ರತಿವರ್ಷ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೊಸ ಹೊಸ ಯೋಜನೆಗಳನ್ನು ಪ್ರಕಟಿಸುತ್ತಾರೆ. ಆದರೆ ಅವರು ಪ್ರಕಟಿಸಿದ ಯಾವ ಯೋಜನೆಗಳೂ ಕಾರ್ಯಗತಗೊಂಡ ಒಂದೇ ಒಂದು ಉದಾಹರಣೆಯಿಲ್ಲ.

ಇಡೀ ದೇಶ ಕೋವಿಡ್ ಸಾಂಕ್ರಾಮಿಕದಿಂದ ತತ್ತರಿಸಿ ಹೋಗಿದೆ. ಆರ್ಥಿಕತೆ ಅಸ್ತವ್ಯಸ್ತಗೊಂಡಿದೆ. ಕೋವಿಡ್ ಲಸಿಕೆಗಳನ್ನು ಕೊಡಿಸುವುದಾಗಿ ದೊಡ್ಡದಾಗಿ ಅಭಿಯಾನ ಆರಂಭಿಸಿ ಪ್ರಚಾರವನ್ನೇನೋ ಪಡೆಯಲಾಯಿತು. ಆದರೆ ಲಸಿಕೆ ಕೊರತೆಯಿಂದ ಭಾರತದ ಕೋಟ್ಯಂತರ ಜನ ಬಳಲುತ್ತಿದ್ದಾರೆ. ಲಕ್ಷಾಂತರ ಜನ ಕೈಯಲ್ಲಿನ ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇಂತಹವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಮಾತುಗಳು ಪ್ರಧಾನಿ ಭಾಷಣದಲ್ಲಿ ಇರಲಿಲ್ಲ.

''ಎಲ್ಲರ ಜೊತೆಗೆ ಎಲ್ಲರ ಏಳಿಗೆ'' ಎಂಬ ಸುಂದರ ಘೋಷಣೆಯನ್ನೇನೋ ಮೋದಿಯವರು ನೀಡಿದ್ದಾರೆ. ಆದರೆ ಇನ್ನೊಂದೆಡೆ ಜನರನ್ನು ಜಾತಿ, ಧರ್ಮದ ಆಧಾರದಲ್ಲಿ ವಿಭಜಿಸಿ ದ್ವೇಷದ ಕಿಚ್ಚು ಹಚ್ಚುವ ಮಾತುಗಳು ಅವರ ಪಕ್ಷದ ಮತ್ತು ಪರಿವಾರದ ಅನೇಕರಿಂದ ಆಗಾಗ ಕೇಳಿ ಬರುತ್ತಿವೆ. ಕೆಲ ಜನಸಮುದಾಯಗಳಲ್ಲಿ ಭೀತಿಯನ್ನು ಮೂಡಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸರಕಾರ ಕೈ ಬಿಟ್ಟಿಲ್ಲ. ಮಾತ್ರವಲ್ಲ ಅದನ್ನು ಹೇಗಾದರೂ ಜಾರಿಗೆ ತರುವ ಮಸಲತ್ತನ್ನು ನಡೆಸುತ್ತಲೇ ಇದೆ. ಈ ಬಗ್ಗೆ ಜನರಲ್ಲಿ ಉಂಟಾಗಿರುವ ಆತಂಕವನ್ನು ನಿವಾರಿಸುವಂತಹ ಮಾತುಗಳನ್ನು ಪ್ರಧಾನಿ ಆಡಿದ್ದರೆ ವಿಭಿನ್ನ ಸಮುದಾಯಗಳ ಜನರಲ್ಲಿ ಪರಸ್ಪರ ವಿಶ್ವಾಸ ಕುದುರಲು ಉತ್ತೇಜನ ನೀಡಿದಂತಾಗುತ್ತಿತ್ತು.

ಒಕ್ಕೂಟ ಸರಕಾರ ಜಾರಿಗೆ ತರಲು ಹೊರಟಿರುವ ಕೃಷಿ ಕಾಯ್ದೆಗಳ ವಿರುದ್ಧ ರೈತರು ಕಳೆದ ಒಂದು ವರ್ಷದಿಂದ ರಾಜಧಾನಿ ದಿಲ್ಲಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸೇರಿ ಶಾಂತಿಯುತ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಸರಕಾರ ಈ ಪ್ರಶ್ನೆಯಲ್ಲಿ ಒಂದಿಂಚೂ ಹಿಂದೆ ಸರಿಯಲು ತಯಾರಿಲ್ಲ. ಇಂತಹ ಸೂಕ್ಷ್ಮ ಪ್ರಶ್ನೆಯಲ್ಲಿ ಸರಕಾರ ಒಣ ಪ್ರತಿಷ್ಠೆಗೆ ಅಂಟಿಕೊಳ್ಳದೆ ರೈತರು ವಿರೋಧಿಸುತ್ತಿರುವ ಕಾಯ್ದೆಗಳನ್ನು ಬೇಷರತ್ ಆಗಿ ವಾಪಸ್ ಪಡೆದು ರೈತರೊಂದಿಗೆ ಸೌಹಾರ್ದಯುತ ಮಾತುಕತೆಗೆ ಮುಂದಾಗಬೇಕಾಗಿತ್ತು. ಸ್ವಾತಂತ್ರ್ಯ ದಿನದ ಭಾಷಣದಲ್ಲಿಯಾದರೂ ಪ್ರಧಾನಿ ಇಂತಹ ಉಪಯುಕ್ತ ಮಾತುಗಳನ್ನು ಆಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ.

ಪ್ರಧಾನ ಮಂತ್ರಿ ಈ ಹಿಂದೆ ನೀಡಿದ ಭರವಸೆಗಳು ಏನಾದವು? ಯಾಕೆ ಜಾರಿಗೆ ಬರಲಿಲ್ಲ? ಎಂಬ ಜನಸಾಮಾನ್ಯರ ಸಂದೇಹ ನಿವಾರಣೆಯಾಗಬೇಕಾಗಿದೆ. ಮೂಲ ಸೌಕರ್ಯ ವಲಯದಲ್ಲಿ ನೂರು ಲಕ್ಷ ಕೋಟಿ ರೂ. ಹೂಡಿಕೆಯ 2019ರ ಭಾಷಣದ ಭರವಸೆ ಇನ್ನೂ ಯಾಕೆ ಜಾರಿಗೆ ಬಂದಿಲ್ಲ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ.
2014ರಲ್ಲಿ ನರೇಂದ್ರ ಮೋದಿಯವರು ಅದ್ಭುತವಾದ ಕನಸಿನ ಗೋಪುರವನ್ನು ನಮ್ಮ ಮುಂದೆ ತಂದಿಟ್ಟರು. ಪ್ರತಿಯೊಬ್ಬ ಸಂಸದ ಒಂದೊಂದು ಹಳ್ಳಿಯನ್ನು ದತ್ತು ತೆಗೆದುಕೊಂಡು ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಸಿಕೊಂಡು ಆ ಹಳ್ಳಿಯನ್ನು ಮಾದರಿ ಹಳ್ಳಿಯನ್ನಾಗಿ ಮಾಡಲು ಯೋಜನೆ ರೂಪಿಸಿದರು. ಆದರೆ ಇದ್ಯಾವುದೂ ಕಾರ್ಯಗತವಾಗಲಿಲ್ಲ.ವಾಸ್ತವವಾಗಿ ಪ್ರಧಾನಮಂತ್ರಿಗಳು ಆಯ್ಕೆ ಮಾಡಿಕೊಂಡ ಹಳ್ಳಿಯೇ ಅಭಿವೃದ್ಧಿಯಲ್ಲಿ ಹೀನಾಯ ಸ್ಥಿತಿಯಲ್ಲಿದೆ ಎಂದು ತಿಳಿದು ಬಂದಿದೆ.ಆದ್ದರಿಂದ ಪ್ರಧಾನ ಮಂತ್ರಿ ಮೋದಿಯವರ ಈ ವರ್ಷದ ಸ್ವಾತಂತ್ರ್ಯ ದಿನದ ಭಾಷಣ ಒಣ ಶಬ್ದಾಡಂಬರದ ಕಸರತ್ತಲ್ಲದೆ ಬೇರೇನೂ ಅಲ್ಲ.

ಪ್ರಧಾನ ಮಂತ್ರಿಯವರ 2014ರ ಕೆಂಪು ಕೋಟೆಯ ಭಾಷಣದ ಆನಂತರ ಸ್ವಚ್ಛ ಭಾರತದ ಅಭಿಯಾನ ದೇಶ ವ್ಯಾಪಿ ಆರಂಭವಾಯಿತು. ನರೇಂದ್ರ ಮೋದಿಯವರು ಸ್ವತಃ ಪೊರಕೆ ಹಿಡಿದುಕೊಂಡು ದಿಲ್ಲಿಯ ತಿಲಕ ನಗರದಲ್ಲಿ ಕಸ ಗುಡಿಸಿದರು. ಅವರನ್ನು ಅನುಸರಿಸಿ ದೇಶದ ಮೂಲೆ ಮೂಲೆಗಳಲ್ಲಿ ಬಿಜೆಪಿ ಹಿರಿಯ, ಕಿರಿಯ ನಾಯಕರು, ಮಂತ್ರಿಗಳು ಕೈಯಲ್ಲಿ ಪೊರಕೆ ಹಿಡಿದು ಟಿವಿ ಕ್ಯಾಮರಾಗಳಿಗೆ ಪೋಸು ಕೊಟ್ಟರು. ಆದರೆ ದೇಶ ಎಷ್ಟು ಸ್ವಚ್ಛವಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಎಂಟು ವರ್ಷಗಳ ಕಾಲಾವಧಿಯಲ್ಲಿ ದೇಶದ ಪೌರ ಕಾರ್ಮಿಕರು ಪಡೆದ ಸಂಬಳಕ್ಕಿಂತ ಹೆಚ್ಚು ಹಣವನ್ನು ಈ ಅಭಿಯಾನಕ್ಕೆ ವ್ಯಯಿಸಲಾಗಿದೆ.

ಭಾರತದ ಆರ್ಥಿಕತೆ 2025ರ ವೇಳೆಗೆ ಐದು ಟ್ರಿಲಿಯನ್ ಡಾಲರ್ ಆಗುತ್ತದೆ ಎಂದು ಕೆಂಪುಕೋಟೆಯಿಂದ ಭರವಸೆ ನೀಡಿ ಹಲವು ವರ್ಷಗಳು ಗತಿಸಿದವು. ಈ ಕಾಲಾವಧಿಯಲ್ಲಿ ದೇಶದ ಆರ್ಥಿಕತೆ ಹಳ್ಳ ಹಿಡಿದು ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಯಿತು. ಇದಕ್ಕೆ ಪ್ರತಿಯಾಗಿ ಅಂಬಾನಿ, ಅದಾನಿಯವರಂತಹ ಕಾರ್ಪೊರೇಟ್ ಉದ್ಯಮಪತಿಗಳ ಸಂಪತ್ತು ಐದು ಟ್ರಿಲಿಯನ್ ದಾಟಿ ಮುಂದೆ ಹೋಯಿತು.

ಪ್ರತಿವರ್ಷ ಕೆಂಪುಕೋಟೆಯಿಂದ ಘೋಷಿಸುವ ಭರವಸೆಗಳಾದ ರೈತರ ಉನ್ನತಿ, ಹಸಿವಿನ ನಿವಾರಣೆ, ಹೊಸ ಉದ್ಯೋಗ ಸೃಷ್ಟಿ, ಸಾರ್ವಜನಿಕ ಆರೋಗ್ಯದ ಸುಧಾರಣೆ, ಶಿಕ್ಷಣ ರಂಗದ ಏಳಿಗೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಉತ್ಪಾದನೆ ಹೆಚ್ಚಳ-ಈ ಭರವಸೆಗಳಲ್ಲಿ ಒಂದಾದರೂ ಕಾರ್ಯಗತಗೊಂಡು ಸಾಕಾರಗೊಂಡಿದೆಯೇ ಎಂಬುದನ್ನು ಅಧಿಕಾರದಲ್ಲಿದ್ದವರು ಹೇಳಬೇಕು.
ಇನ್ನು ಮುಂದಾದರೂ ಜನರಲ್ಲಿ ಹುಸಿ ಕನಸಿನ ಭರವಸೆ ನೀಡುವ ಬದಲಾಗಿ ಕಾರ್ಯಗತಗೊಳಿಸಲು ಸಾಧ್ಯವಾಗುವಂತಹ ಯೋಜನೆಗಳನ್ನು ರೂಪಿಸಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News