ತಾಲಿಬಾನ್ ತನ್ನ ನೆಲಕ್ಕೆ ಘನತೆ, ಗೌರವ ತರಲಿ

Update: 2021-08-18 06:42 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘‘ತಾಲಿಬಾನ್‌ನ ಕೊನೆಯ ದಿನಗಳು’’

-ಹೀಗೆಂದು 20 ವರ್ಷಗಳ ಹಿಂದೆ (ಡಿಸೆಂಬರ್ 17, 2001) ಅಮೆರಿಕದ ಖ್ಯಾತ ‘ಟೈಮ್’ ಮ್ಯಾಗಝಿನ್, ತನ್ನ ಮುಖ ಪುಟದಲ್ಲಿ ಕಿರುಚಾಡಿತ್ತು. ಜೊತೆಗೆ ಒಬ್ಬ ನಿರಾಶ ಅಫ್ಘಾನ್ ಪ್ರಜೆಯ ಚಿತ್ರವೂ ಇತ್ತು. ಆದರೆ ಎರಡು ದಶಕಗಳ ಬಳಿಕ ಈಗ ಅಫ್ಘಾನಿಸ್ತಾನದತ್ತ ನೋಡಿದರೆ ಅಲ್ಲಿ ದರೋಡೆಗಾಗಿಯೇ ಬಂದಿದ್ದ ಸೂಪರ್ ಪವರ್ ಅಮೆರಿಕದ ದಿನಗಳು ಮತ್ತು ಅದರ ಕೃಪಾಪೋಷಿತ ಪಕ್ಷಗಳ ದಿನಗಳು ಈಗಾಗಲೇ ಮುಗಿದಿವೆ. ಅಲ್ಲೀಗ ತಾಲಿಬಾನ್‌ನ ದಿನಗಳು ಆರಂಭವಾಗಿವೆ. ಸೋವಿಯತ್ ಯೂನಿಯನ್ ಎಂಬ ಇನ್ನೊಂದು (ದಿವಂಗತ) ಸೂಪರ್ ಪವರ್ ಮತ್ತು ಅದರ ಪೋಷಿತ ಪಕ್ಷಗಳ ದಿನಗಳು ಅಲ್ಲಿ ಕೆಲವು ದಶಕಗಳ ಹಿಂದೆಯೇ (1988) ಮುಗಿದಿದ್ದವು. ಈ ರೀತಿ, ಸವಲತ್ತುಗಳ ದೃಷ್ಟಿಯಿಂದ ಇನ್ನೂ 18ನೇ ಶತಮಾನದಲ್ಲಿರುವ ಅಫ್ಘಾನಿಸ್ತಾನದ ‘ಹರಕು ಬಟ್ಟೆಯ ನಿರಕ್ಷರಿ ಬುಡಕಟ್ಟುಗಳ ಪಡ್ಡೆ ಪಡೆಗಳು’ ಜಗತ್ತಿನ ಎರಡು ದೊಡ್ಡ ಸೂಪರ್ ಪವರ್‌ಗಳನ್ನೂ ಮಣ್ಣುಮುಕ್ಕಿಸಿದವರೆಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಲ್ಲಿ ಅಮೆರಿಕ ತನ್ನ ಅಧಿಕಾರವನ್ನು ಮಾತ್ರವಲ್ಲ, ತನ್ನ ಸಾವಿರಾರು ಪರಿಣತ ಯೋಧರನ್ನು ಮತ್ತು ತಜ್ಞರ ಪ್ರಕಾರ ಸುಮಾರು ಒಂದು ಟ್ರಿಲಿಯನ್ (ಒಂದು ಲಕ್ಷ ಕೋಟಿ) ಡಾಲರ್‌ಗಳನ್ನೂ ಕಳೆದು ಕೊಂಡಿದೆ. ಅಸಾಮಾನ್ಯ ಖನಿಜ ಸಂಪತ್ತನ್ನು ತನ್ನ ಗರ್ಭದಲ್ಲಿಟ್ಟುಕೊಂಡಿರುವ ಅಫ್ಘಾನ್ ನೆಲದಿಂದ ಅವರು ದೋಚಿದ್ದೆಷ್ಟು ಎಂಬುದರ ಲೆಕ್ಕ ಲಭ್ಯವಿಲ್ಲವಾದ್ದರಿಂದ ಆರ್ಥಿಕ ಲಾಭ ನಷ್ಟಗಳನ್ನು ಕರಾರುವಾಕ್ಕಾಗಿ ಲೆಕ್ಕ ಹಾಕಲು ಸಾಧ್ಯವಿಲ್ಲ. ಹಾಗೆಯೇ, ಈ ಆಕ್ರಮಣ ಮತ್ತು ದರೋಡೆಯ ದೀರ್ಘ ಅಧ್ಯಾಯದಲ್ಲಿ ಎಷ್ಟು ಅಫ್ಘಾನ್ ಜೀವಗಳು ಸ್ಥಳೀಯ ‘ಭಯೋತ್ಪಾದಕರ’ ಕೈಯಲ್ಲಿ ಹತವಾಗಿವೆ ಎಂಬ ಕುರಿತು ಒಂದಷ್ಟು ಅಂದಾಜು ಇದೆಯಾದರೂ ಪಶ್ಚಿಮದ ಪಡೆಗಳು ಅಲ್ಲಿ ಎಷ್ಟು ಲಕ್ಷ ನಾಗರಿಕರ ಮಾರಣ ಹೋಮ ನಡೆಸಿವೆ ಎಂಬ ಕುರಿತು ಯಾವುದೇ ಅಧಿಕೃತ ಲೆಕ್ಕಾಚಾರ ಲಭ್ಯವಿಲ್ಲ. ವಸಾಹತು ಶಾಹಿ ಸಂಸ್ಕೃತಿಯಲ್ಲಿ, ಪಶ್ಚಿಮದ ಒಂದು ಸಾಕು ಬೆಕ್ಕಿನ ಜೀವಕ್ಕಿರುವ ಬೆಲೆ ಏಶ್ಯ ಅಥವಾ ಆಫ್ರಿಕಾದ ಸಾವಿರಾರು ಮಾನವ ಜೀವಗಳಿಗೂ ಇಲ್ಲವಾದ್ದರಿಂದ ಅದು ಅವರಿಗೆ ಮುಖ್ಯವೂ ಅಲ್ಲ.

 ಅಫ್ಘಾನಿಸ್ತಾನದ ವಿವಿಧ ಪ್ರಾಂತಗಳಲ್ಲಿದ್ದ ಸರಕಾರಿ ಪಡೆಗಳನ್ನು ಮತ್ತು ಇತರ ಹೋರಾಟ ನಿರತ ಸ್ಥಳೀಯ ಪಂಗಡಗಳನ್ನು ಒಂದೊಂದಾಗಿ ಸೋಲಿಸಿ ದೇಶದ ಹೆಚ್ಚಿನೆಲ್ಲ ಭಾಗಗಳನ್ನು ವಶಕ್ಕೆ ತೆಗೆದುಕೊಂಡ ತಾಲಿಬಾನ್ ಪಡೆಗಳು ಇದೀಗ ರಾಜಧಾನಿ ಕಾಬುಲ್‌ನಲ್ಲಿ ತಮ್ಮ ಸ್ವಾಮ್ಯ ಸ್ಥಾಪಿಸಿಕೊಂಡಿವೆ. ಈ ಮೂಲಕ ಅಫ್ಘಾನಿಸ್ತಾನವೆಂಬ ದೇಶ ತಾಲಿಬಾನ್‌ಗಳ ವಶವಾಗಿ ಬಿಟ್ಟಿದೆ. ಅಲ್ಲಿ ಸರಕಾರ ನಡೆಸುತ್ತಿದ್ದವರೆಲ್ಲಾ ಕೈಗೆ ಸಿಕ್ಕಷ್ಟು ಸಂಪತ್ತನ್ನು ಹೊತ್ತು ಪಲಾಯನ ಮಾಡಿದ್ದಾರೆ. ಎರಡು ದಶಕಗಳಿಂದ ಅಲ್ಲಿ ನೆಲೆಯೂರಿದ್ದ ಅಮೆರಿಕನ್ ಪಡೆಗಳು ವಾರಗಳ ಮುನ್ನವೇ ಮೌನವಾಗಿ ಅಲ್ಲಿಂದ ಕಾಲುಕಿತ್ತಿವೆ. ನೇಟೊ (NATO) ಪಡೆಗಳು 2014ರಲ್ಲೇ ಅಫ್ಘಾನ್ ನೆಲಕ್ಕೆ ಸಲಾಂ ಹೇಳಿ ಮನೆಗೆ ಮರಳಿದ್ದವು. ತಾಲಿಬಾನ್ ಎಂದರೆ ಬುದ್ಧಿಹೀನ ಭಯೋತ್ಪಾದನೆ, ರಕ್ತದೋಕುಳಿ ಮತ್ತು ಸರ್ವ ನಾಶ ಮಾತ್ರವಲ್ಲದೆ ಬೇರೇನೂ ಅಲ್ಲ ಎಂದು ಜಗತ್ತನ್ನು ನಂಬಿಸಿ ಬಿಟ್ಟಿದ್ದ ಮಾಧ್ಯಮಗಳು, ತಮ್ಮ ಎಲ್ಲ ಸಮಕಾಲೀನ ವಿಶ್ಲೇಷಣೆ ಹಾಗೂ ಭವಿಷ್ಯವಾಣಿಗಳನ್ನು ಸುಳ್ಳಾಗಿಸಿ, ಯಾವುದೇ ಹಿಂಸೆ, ರಕ್ತಪಾತ ಇಲ್ಲದೆ, ಮಿಂಚಿನ ವೇಗದಲ್ಲಿ ತಾಲಿಬಾನ್ ಯೋಧರು ನಡೆಸಿದ ಈ ಜಾಣ ಹಾಗೂ ದಕ್ಷ ಕಾರ್ಯಾಚರಣೆಯನ್ನು ನಂಬಲು ಹಿಂಜರಿಯುತ್ತಿವೆ. ಈಗ ಅವು ತಮಗಾಗಿರುವ ಆಘಾತ ಮತ್ತು ಮುಜುಗರವನ್ನು ಮುಚ್ಚಿಕೊಳ್ಳಲು ಶತಶ್ರಮ ನಡೆಸುತ್ತಿವೆ. ತಾಲಿಬಾನ್ ಅನ್ನು ದ್ವೇಷಿಸುವವರು ಕೂಡ ಅವರ ಕಾರ್ಯಾಚರಣೆ ರಕ್ತರಹಿತವಾಗಿತ್ತು ಎಂಬುದನ್ನು ಗುರುತಿಸಿ ಪ್ರಶಂಸಿಸಿದ್ದಾರೆ. ತಾಲಿಬಾನ್ ಅನ್ನು ಭಯೋತ್ಪಾದಕರ ಪಟ್ಟಿಯಲ್ಲಿಟ್ಟಿದ್ದ ರಶ್ಯ ದೇಶದ ಅಫ್ಘಾನ್ ರಾಯಭಾರಿ, ಕಳೆದ ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ ಕಾಬುಲ್‌ನಲ್ಲಿ ತಾನು ಕಂಡಿರುವ ಪ್ರಶಾಂತ ವಾತಾವರಣ ಹಿಂದಿನ ಸರಕಾರದ ಆಡಳಿತಾವಧಿಯ್ಲೆಂದೂ ಕಾಣಲು ಸಿಕ್ಕಿರಲಿಲ್ಲ ಎಂದಿದ್ದಾರೆ.

ಶಕ್ತಿಶಾಲಿ ಪ್ರಚಾರ ಮಾಧ್ಯಮಗಳು ಜಗತ್ತನ್ನು ನಂಬಿಸಿದ್ದ ಪ್ರಕಾರ, ತಾಲಿಬಾನ್ ನಿಜಕ್ಕೂ ಮಿದುಳು ಎಂಬೊಂದು ಅಂಗವೇ ಇಲ್ಲದ, ಕೇವಲ ಯುದ್ಧಕೋರ ಝೋಮ್ಬಿ (Zombie) ಗಳ ಪಡೆಯಾಗಿದ್ದಿದ್ದರೆ ಖಂಡಿತ ಹೀಗಾಗುತ್ತಿರಲಿಲ್ಲ. ಪಶ್ಚಿಮದ ಅತ್ಯಂತ ಶಕ್ತಿಶಾಲಿ ದೇಶಗಳ ಮಿಲಿಟರಿ ಪಡೆಗಳನ್ನು ಮಾತ್ರವಲ್ಲ ಅವರ ಭಾರೀ ಮುಂದುವರಿದ ಬೇಹುಗಾರಿಕೆ ಹಾಗೂ ಸಂವಹನ ಜಾಲವನ್ನು ಮತ್ತು ಸೂಕ್ಷ್ಮವಾದ ರಾಜಕೀಯ ಕುತಂತ್ರಗಳನ್ನು ನುಚ್ಚುನೂರು ಮಾಡಲು, ಹೆಚ್ಚೆಂದರೆ ಒಂದು ಲಕ್ಷದಷ್ಟು ಮಾತ್ರ ಪೂರ್ಣಾವಧಿ ಯೋಧರಿರುವ ತಾಲಿಬಾನ್‌ಗೆ ಖಂಡಿತ ಸಾಧ್ಯವಾಗುತ್ತಿರಲಿಲ್ಲ.

ಜಗತ್ತಿಗೆಲ್ಲಾ ತಿಳಿದಿದ್ದರೂ ಹೆಚ್ಚು ಚರ್ಚೆಗೆ ಬಂದಿಲ್ಲದ ಒಂದು ಸಂಗತಿಯೇನೆಂದರೆ ಅಮೆರಿಕ ತಾಲಿಬಾನ್ ಅನ್ನು ಜಗತ್ತಿನ ಮುಂದೆಲ್ಲ ಅಸ್ಪಶ್ಯ ಭಯೋತ್ಪಾದಕ ಪಡೆಯೆಂದು ಕರೆಯುತ್ತಿದ್ದ ದಿನಗಳಲ್ಲೇ ತಾಲಿಬಾನ್ ಜೊತೆ ವ್ಯವಹಾರ ಕುದುರಿಸಲು ಆರಂಭಿಸಿತ್ತು. ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿ, ಕೊನೆಗೆ ಕಳೆದ ವರ್ಷ ಫೆಬ್ರವರಿಯಲ್ಲಿ ಟ್ರಂಪ್ ಸರಕಾರವಿದ್ದಾಗಲೇ, ಶೀಘ್ರವೇ ತಾನು ತನ್ನ ಪಡೆಗಳನ್ನು ಹಿಂದೆಗೆದುಕೊಂಡು ಅಫ್ಘಾನಿಸ್ತಾನವನ್ನು ತಾಲಿಬಾನ್‌ಗೆ ಬಿಟ್ಟುಕೊಡುವ ಶರ್ತಬದ್ಧ ಬದ್ಧತೆಯನ್ನೂ ಅಮೆರಿಕ ಪ್ರಕಟಿಸಿತ್ತು. ಆದ್ದರಿಂದ ಹಲವರ ಹಲವು ಲೆಕ್ಕಾಚಾರಗಳು ತಲೆಕೆಳಗಾಗಿರುವುದು ನಿಜವಾದರೂ ಅಲ್ಲಿನ ಸದ್ಯದ ಬೆಳವಣಿಗೆಗಳೆಲ್ಲಾ ತೀರಾ ಅನಿರೀಕ್ಷಿತವೇನೂ ಅಲ್ಲ.

ದೇಶ ತನ್ನ ವಶವಾಗುವ ಮುನ್ನವೇ ತಾಲಿಬಾನ್ ಅಂತರ್‌ರಾಷ್ಟ್ರೀಯ ಸಂಬಂಧಗಳ ರಂಗದಲ್ಲಿ ಗಣನೀಯ ಮುನ್ನಡೆ ಸಾಧಿಸಿದೆ. ನೆರೆಯ ಪಾಕಿಸ್ತಾನ, ಚೀನಾ, ರಶ್ಯ, ಇರಾನ್, ಟರ್ಕಿ ಮತ್ತು ಖತರ್ ಜೊತೆ ಹಲವು ಹಂತಗಳ ಸಮಾಲೋಚನೆಗಳನ್ನು ನಡೆಸಿ ಅಷ್ಟು ದೇಶಗಳೊಂದಿಗೆ ಬಲಿಷ್ಠ ಸಂಬಂಧಗಳನ್ನು ಬೆಳೆಸಿಕೊಂಡಿದೆ. ಭವಿಷ್ಯದ ಹೊಸ ದೇಶವನ್ನು ಕಟ್ಟುವ ವಿಷಯದಲ್ಲಿ ಅವರ ಜೊತೆ ಒಡಂಬಡಿಕೆಗಳನ್ನು ಮಾಡಿಕೊಂಡಿದೆ. ಹಾಗೆಯೇ, ತಾಲಿಬಾನ್ ಮುಖ್ಯಸ್ಥ ಹಿಬಾತುಲ್ಲಾ ಅಖುನ್ಡ್ ಝಾದಾ ಭಾರತದ ಜೊತೆಗಿನ ಸಂಬಂಧಗಳ ವಿಷಯದಲ್ಲಿ ಆಶಾದಾಯಕ ಮಾತುಗಳನ್ನಾಡಿದ್ದು, ಅಲ್ಲಿ ಭಾರತವು ಹೂಡಿರುವ ಬಂಡವಾಳಕ್ಕೆ ಯಾವುದೇ ಅಪಾಯವಿಲ್ಲವೆಂಬ ಆಶ್ವಾಸನೆ ನೀಡಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಅಫ್ಘಾನ್ ಮರುನಿರ್ಮಾಣದ ಪ್ರಕ್ರಿಯೆಯಲ್ಲಿ ಭಾರತದ ಸಹಕಾರ ಕೋರಿದ್ದಾರೆ. ಈ ರಂಗದಲ್ಲಿ ತಾಲಿಬಾನ್ ತೋರಿರುವ ಪ್ರಬುದ್ಧತೆ, ಅವರ ಬಗ್ಗೆ ಮಾಹಿತಿಗಾಗಿ ಅವರ ಶತ್ರುಗಳನ್ನು ಅವಲಂಬಿಸಿದ್ದವರೆಲ್ಲ ಹುಬ್ಬೇರಿಸುವಂತೆ ಮಾಡಿದೆ. ಸದ್ಯ, ಮುಜುಗರ, ಆಘಾತವೆಲ್ಲಾ ಆಗಿರುವುದು ತಾಲಿಬಾನ್ ಸಾಮರ್ಥ್ಯವನ್ನು ಕ್ಷುಲ್ಲಕವಾಗಿ ಕಂಡಿದ್ದವರಿಗೆ ಮಾತ್ರವೇ ಹೊರತು ಅವರ ಜೊತೆ ವ್ಯವಹರಿಸಿದವರಿಗಲ್ಲ.

ಹೊರಗಿನವರನ್ನು ಓಡಿಸಿದ ಮಾತ್ರಕ್ಕೆ ಅಫ್ಘಾನ್ ಎಂಬ ಗುಡ್ಡಗಾಡುಗಳೇ ತುಂಬಿರುವ ಕಡು ದರಿದ್ರ ಸ್ಥಿತಿಯಲ್ಲಿರುವ ದೇಶದ ಸಮಸ್ಯೆಗಳೆಲ್ಲಾ ಬಗೆಹರಿದುಬಿಟ್ಟವು ಎಂದು ಖಂಡಿತ ಅರ್ಥವಲ್ಲ. ಸದ್ಯ, ಸುಮಾರು ನಾಲ್ಕು ದಶಕಗಳಿಂದ ಅಲ್ಲಿ ನಡೆಯುತ್ತಿದ್ದ ಪರೋಕ್ಷ ಹಾಗೂ ಪ್ರತ್ಯಕ್ಷ ವಿದೇಶಿ ಹಸ್ತಕ್ಷೇಪ ಕೊನೆಗೊಂಡಿದೆ ಎಂಬುದು ನಿಜ. ಆದರೆ ಅಫ್ಘಾನ್ ಜನತೆ ಮತ್ತು ಅವರನ್ನು ಆಳುವವರ ಮುಂದೆ ದೈತ್ಯ ಸವಾಲುಗಳ ಒಂದು ಹೊಸ ಹಾಗೂ ದೀರ್ಘ ಸರಮಾಲೆಯೇ ಇದೆ. ಎಲ್ಲಕ್ಕಿಂತ ಮೊದಲು, ಅವರು ಅಂತಃಕಲಹದ ಶಾಪದಿಂದ ಮುಕ್ತಿ ಪಡೆಯಬೇಕಾಗಿದೆ. ತಾಲಿಬಾನ್ ಗುಂಪು ಪಶ್ತೂನ್ ಜನಾಂಗಕ್ಕೆ ಸೇರಿದವರಾಗಿದ್ದು ಅವರದು ಆ ನಾಡಿನ ಅತಿದೊಡ್ಡ ಸಮುದಾಯ ಹೌದಾದರೂ ಅವರು ಅಲ್ಲಿನ ಬಹುಸಂಖ್ಯಾತರೇನಲ್ಲ. ಜನಸಂಖ್ಯೆಯಲ್ಲಿ ಅವರ ಪಾಲು ಶೇ. 38 ಮಾತ್ರ. ಉಳಿದಂತೆ ತಾಜಿಕ್ ಜನಾಂಗೀಯರು ಶೇ. 25ರಷ್ಟು ಮತ್ತು ಹಝಾರ ಜನಾಂಗೀಯರು ಶೇ. 19ರಷ್ಟಿದ್ದಾರೆ. ಐಮಕ್, ತುರ್ಕ್ಮಾನ್, ಬಲೂಚ್, ಉಜ್ಬೆಕ್ ಮುಂತಾದ ಸಣ್ಣ ಜನಾಂಗಗಳು ಕೆಲವು ಕಡೆ ಬಹಳ ಬಲಿಷ್ಠವಾಗಿವೆ. ತಾಲಿಬಾನ್‌ಗಳು ಮನೋವೈಶಾಲ್ಯ ತೋರಿ ಎಲ್ಲರ ವಿಶ್ವಾಸ ಗೆದ್ದು ಅಧಿಕಾರದಲ್ಲಿ ಮತ್ತು ನಿರ್ಧಾರಗಳ ಪ್ರಕ್ರಿಯೆಯಲ್ಲಿ ಎಲ್ಲರಿಗೆ ಅವರವರ ನ್ಯಾಯೋಚಿತ ಪಾಲು ನೀಡಿದರೆ ಮಾತ್ರ ಮುಂದಿನ ಹಾದಿ ಸುಗಮವಾದೀತು. ಇದು ಬಿಟ್ಟು ಒಂದುವೇಳೆ ತಾಲಿಬಾನ್‌ನವರು ಅಫ್ಘಾನ್ ಸರಕಾರದ ಬದಲು ಪಶ್ತೂನ್ ಸರಕಾರ ಸ್ಥಾಪಿಸಲು ಹೊರಟರೆ, ಕೊನೆಯಿಲ್ಲದ ಆಂತರಿಕ ಹಿಂಸೆ ಭುಗಿಲೆದ್ದು ಅಳಿದುಳಿದ ದೇಶವೂ ನಾಶವಾಗುವ ಸಾಧ್ಯತೆ ಇದೆ. ಈ ದೃಷ್ಟಿಯಿಂದ, ಕಾಬುಲ್ ಅನ್ನು ವಶಪಡಿಸಿಕೊಳ್ಳುವ ಮುನ್ನವೇ ತಾಲಿಬಾನ್ ನಾಯಕರು ಆಂತರಿಕ ಸಾಮರಸ್ಯಕ್ಕೆ ಒತ್ತುಕೊಟ್ಟು ದೇಶದೊಳಗಿನ ವಿವಿಧ ಬಣಗಳ ಜೊತೆ ವ್ಯಾಪಕ ಮಾತುಕತೆ ಆರಂಭಿಸಿರುವುದು ಒಂದು ಒಳ್ಳೆಯ ಲಕ್ಷಣವೆನಿಸುತ್ತದೆ.

ತಾಲಿಬಾನ್‌ಗೆ ತಾನೇ ಅಪ್ಪಎಂಬಂತೆ ನಡೆದುಕೊಳ್ಳುತ್ತಿರುವ ಪಾಕಿಸ್ತಾನವು ಮುಂದಿನ ದಿನಗಳಲ್ಲಿ ಅಫ್ಘಾನ್ ಪಾಲಿಗೆ ಅತಿದೊಡ್ಡ ತಲೆನೋವಾಗುವ ಸಾಧ್ಯತೆ ಇದೆ. ಆದ್ದರಿಂದ ಅಫ್ಘಾನ್ ನಾಯಕರು, ಪಾಕಿಸ್ತಾನಕ್ಕೆ, ತಾಲಿಬಾನ್ ಅಥವಾ ಅಫ್ಘಾನಿಸ್ತಾನ್‌ಗಿಂತ ಸ್ವತಃ ತನ್ನ ಹಿತಾಸಕ್ತಿಗಳೇ ಮುಖ್ಯ ಎಂಬುದನ್ನು ಅರಿತುಕೊಂಡು ತಮ್ಮ ಭವಿಷ್ಯದ ಲಗಾಮನ್ನು ಪಾಕ್ ಕೈಗೆ ಕೊಡದೆ ತಮ್ಮ ಕೈಯಲ್ಲೇ ಇಟ್ಟುಕೊಳ್ಳಬೇಕು. ತಮ್ಮ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪಿಸಲು ಹೊರಗಿನ ಯಾವುದೇ ಶಕ್ತಿಗೆ ಅವಕಾಶ ಒದಗಿಸಬಾರದು. ಈ ತನಕ ಕೊಲ್ಲಿ ಸಹಿತ ಹಲವು ದೇಶಗಳ ಭಿನ್ನಮತೀಯ ಹಾಗೂ ತೀವ್ರವಾದಿ ಗುಂಪುಗಳಿಗೆ ಆಶ್ರಯ ನೀಡುತ್ತಾ ಬಂದಿರುವ ಅಫ್ಘಾನ್ ಹೋರಾಟಗಾರರು ಆಂತರಿಕ ಸರ್ವಾನುಮತದೊಂದಿಗೆ ತಮ್ಮದೇ ಸರಕಾರ ರಚಿಸಿಕೊಂಡ ಮೇಲೆ ಹಳೆಯ ಪರಿಪಾಠಗಳಿಗೆಲ್ಲ ವಿದಾಯ ಹೇಳಿ, ತಮ್ಮೆಲ್ಲ ಬಲವನ್ನು, ಸಂಪೂರ್ಣ ಧ್ವಂಸವಾಗಿರುವ ತಮ್ಮ ನಾಡನ್ನು ಆಂತರಿಕವಾಗಿ ಸಂಪನ್ನ ಹಾಗೂ ಬಲಿಷ್ಠಗೊಳಿಸುವ ಕಾರ್ಯದಲ್ಲಿ ತೊಡಗಿಸಬೇಕು. ಎಲ್ಲಕ್ಕಿಂತ ಮೊದಲು, ಲಿಂಗ ಪಕ್ಷಪಾತದಂತಹ ಸಾಂಪ್ರದಾಯಿಕ ಪಿಡುಗುಗಳಿಂದ ಮುಕ್ತರಾಗಿ ದೇಶದ ಹೊಸಪೀಳಿಗೆಯ ಎಲ್ಲ ಹೆಣ್ಣು ಮತ್ತು ಗಂಡು ಸದಸ್ಯರಿಗೆ ಅತ್ಯುತ್ತಮ ಮಟ್ಟದ ಆಧುನಿಕ ಶಿಕ್ಷಣವನ್ನು ಒದಗಿಸಬೇಕು. ಕೈಗಾರಿಕೆ, ವೃತ್ತಿ, ಉದ್ಯಮ ಮತ್ತು ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಬೇಕು. ಸಂವಿಧಾನಬದ್ಧವಾದ ಕಾನೂನಿನ ಆಡಳಿತ ಸ್ಥಾಪಿಸಬೇಕು. ಯಾವುದೇ ಭೇದಭಾವವಿಲ್ಲದೆ ಎಲ್ಲ ನಾಗರಿಕರ ಮಾನವೀಯ ಹಾಗೂ ನಾಗರಿಕ ಹಕ್ಕುಗಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕು. ತಮ್ಮ ಸಮಾಜವನ್ನು ಭ್ರಷ್ಟಾಚಾರದಿಂದ ಮುಕ್ತವಾಗಿಟ್ಟು ಧಾರಾಳ ಪ್ರಮಾಣದಲ್ಲಿರುವ ನೈಸರ್ಗಿಕ ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆಯನ್ನು ಖಾತರಿ ಪಡಿಸಿಕೊಳ್ಳಬೇಕು. ಸಮೀಪ ಮತ್ತು ದೂರದ ಎಲ್ಲ ನೆರೆದೇಶಗಳ ಜೊತೆ ಮತ್ತು ಒಟ್ಟು ಅಂತರ್‌ರಾಷ್ಟ್ರೀಯ ಸಮುದಾಯದ ಜೊತೆ ಅವಲಂಬನೀಯ ಸ್ನೇಹ ಮತ್ತು ಸಹಕಾರದ ಸಂಬಂಧ ಸ್ಥಾಪಿಸಿಕೊಳ್ಳಬೇಕು.

ಒಂದು ದೇಶ ಮತ್ತು ಸಮಾಜವನ್ನು ಮುನ್ನಡೆಸುವುದಕ್ಕೆ ಕೇವಲ ಸಾಹಸ ಪರಾಕ್ರಮ ಹಾಗೂ ಯುದ್ಧಕೌಶಲ್ಯಗಳು ಸಾಕಾಗುವುದಿಲ್ಲ. ಅದಕ್ಕೆ ಮುತ್ಸದ್ದಿತನ, ದೂರ ದೃಷ್ಟಿ, ವಿಶಾಲ ನಿಲುವು, ದಕ್ಷತೆ ಮುಂತಾದ ಬೇರೆ ಹಲವು ಅರ್ಹತೆಗಳೂ ಅನಿವಾರ್ಯವಾಗಿವೆ. ಒಂದು ಆಶಾದಾಯಕ ಅಂಶವೇನೆಂದರೆ, ತಾಲಿಬಾನ್ ನೇರವಾಗಿ ಯುದ್ಧರಂಗದಿಂದ ಅರಮನೆಗೆ ಬಂದಿಲ್ಲ. ಅವರಿಗೆ ಅಧಿಕಾರ ಸಿಗುವುದು ಇದೇ ಮೊದಲ ಬಾರಿಯಲ್ಲ. ಎರಡು ದಶಕಗಳ ಹಿಂದೆ ಆ ದೇಶದಲ್ಲಿ ಅವರ ಸರಕಾರ ಸ್ಥಾಪಿತವಾಗಿತ್ತು. ಬುಡಕಟ್ಟು ಮಟ್ಟದ ಮತ್ತು ಸ್ಥಳೀಯ ಆಡಳಿತದಲ್ಲಿ ಮಾತ್ರ ಕೆಲವು ಶತಮಾನಗಳ ಅನುಭವವಿದ್ದ ತಾಲಿಬಾನ್, ಪ್ರಥಮ ಬಾರಿ ತಮಗೆ ಅಧಿಕಾರ ಸಿಕ್ಕಾಗ ಹಲವಾರು ಎಡವಟ್ಟುಗಳನ್ನು ಮಾಡಿತ್ತು. ಈ ಬಾರಿ ಅವರು ತಮಗೆ ಸಿಕ್ಕ ಅವಕಾಶವನ್ನು ಹುಚ್ಚು ಪ್ರಯೋಗಗಳಿಗಾಗಿ ಬಳಸಿಕೊಳ್ಳದೆ, ಹಿಂದಿನ ಪ್ರಮಾದಗಳಿಂದ ಪಾಠ ಕಲಿತು, ಹೊಣೆಗಾರಿಕೆಯ ಸಂಪೂರ್ಣ ಪ್ರಜ್ಞೆಯೊಂದಿಗೆ ತಮ್ಮ ಬಹು ಸಂತ್ರಸ್ತ ನಾಡು ಮತ್ತು ಜನತೆಗೆ ಸ್ವಾತಂತ್ರ್ಯ, ಸ್ವಾವಲಂಬನೆ, ಘನತೆ, ಭದ್ರತೆ ಹಾಗೂ ಸಂಪನ್ನತೆ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಳ್ಳುವರು ಎಂದು ಆಶಿಸೋಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News