ಖಾತೆ ಹಂಚಿಕೆ ಅಸಮಾಧಾನ: ದೆಹಲಿಗೆ ತೆರಳಿದ ಸಚಿವ ಆನಂದ್ ಸಿಂಗ್

Update: 2021-08-18 11:52 GMT
ಸಚಿವ ಆನಂದ್ ಸಿಂಗ್

ಬೆಂಗಳೂರು, ಆ. 18: ಖಾತೆ ಬದಲಾವಣೆಗೆ ಪಟ್ಟು ಹಿಡಿದಿರುವ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ನಿನ್ನೆ ರಾತ್ರಿ ದಿಢೀರ್ ಆಗಿ ಹೊಸದಿಲ್ಲಿಗೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿಜಯನಗರ ಜಿಲ್ಲೆಯಲ್ಲೇ ಉಳಿದಿದ್ದ ಆನಂದ್ ಅವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪ್ರವಾಸದಲ್ಲಿದ್ದರು. ಆದರೆ, ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಅವರ ಬುಲಾವ್ ಹಿನ್ನೆಲೆಯಲ್ಲಿ ಆನಂದ್ ಸಿಂಗ್, ಗೋವಾ ಮೂಲಕ ನಿನ್ನೆ ರಾತ್ರಿ ದಿಲ್ಲಿಗೆ ತೆರಳಿದ್ದಾರೆ. ಮೂಲಗಳ ಪ್ರಕಾರ ಅವರು ಅರುಣ್ ಸಿಂಗ್ ಅವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆಂದು ಹೇಳಲಾಗಿದೆ.

ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಆ.4ರಂದು ಸಂಪುಟ ರಚನೆ ಮಾಡಿದ್ದರು. ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ ಮತ್ತು ಪರಿಸರ ಖಾತೆಯನ್ನು ಹಂಚಿಕೆ ಮಾಡಲಾಗಿತ್ತು. ಇದರಿಂದ ಅವರು ಮುನಿಸಿಕೊಂಡು ತಮ್ಮ ಖಾತೆಯನ್ನು ಬದಲಾವಣೆ ಮಾಡಬೇಕೆಂದು ಪಟ್ಟು ಹಿಡಿದಿದ್ದರು. ಒಂದು ಹಂತದಲ್ಲಿ ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಲು ಮುಂದಾಗಿದ್ದರು.

ಕೊನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕಂದಾಯ ಸಚಿವ ಆರ್.ಅಶೋಕ್, ಶಾಸಕ ರಾಜುಗೌಡ ನಾಯಕ್ ಸೇರಿದಂತೆ ಮತ್ತಿತರರು ಮನವೊಲಿಸಿದ್ದರು. ಆದರೆ ಆನಂದ್ ಸಿಂಗ್ ಅಧಿಕಾರ ಸ್ವೀಕರಿಸದೆ ತಮ್ಮ ರಾಜಕೀಯ ನಡೆ ಏನೆಂಬುದನ್ನು ನಿಗೂಢವಾಗಿಯೇ ಇಟ್ಟಿದ್ದರು. ಇದೀಗ ಏಕಾಏಕಿ ದಿಲ್ಲಿಗೆ ತೆರಳಿರುವುದು ಬಿಜೆಪಿ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
 
ದಿಲ್ಲಿ ನಾಯಕರನ್ನು ಭೇಟಿಯಾದ ಬಳಿಕ ಆನಂದ್ ಸಿಂಗ್ ಖಾತೆ ಬದಲಾವಣೆಯಾಗಲಿದೆಯೇ? ಎಂಬ ಪ್ರಶ್ನೆ ಉದ್ಬವಿಸಿದೆ. ಹಾಗೊಂದು ವೇಳೆ ಆನಂದ್ ಸಿಂಗ್ ಅವರ ಒತ್ತಡಕ್ಕೆ ಮಣಿದು ಖಾತೆ ಬದಲಾವಣೆಯಾದರೆ ಇದೇ ಹಾದಿಯನ್ನು ಅನೇಕ ಸಚಿವರು ತುಳಿಯುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News