ಬಿಜೆಪಿಯ ಜನ ಆಶೀರ್ವಾದ ಯಾತ್ರೆ ಕೋವಿಡ್ 3ನೇ ಅಲೆಗೆ ಆಹ್ವಾನ ನೀಡುತ್ತಿದೆ: ಶಿವಸೇನೆ ಸಂಸದ ರಾವತ್

Update: 2021-08-18 12:24 GMT

ಮುಂಬೈ: ವಿವಿಧ ರಾಜ್ಯಗಳಲ್ಲಿ ಹಲವಾರು ಕಡೆ ಬಿಜೆಪಿಯ ಕೇಂದ್ರ ಸಚಿವರು ನಡೆಸುತ್ತಿರುವ ಜನ ಆಶೀರ್ವಾದ ಯಾತ್ರೆಯು ಕೋವಿಡ್-19 ಮೂರನೇ ಅಲೆಗೆ ಆಹ್ವಾನ ನೀಡುತ್ತಿದೆ. ಬಿಜೆಪಿ ಇದನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದೆ ಎಂದು ಕೇಂದ್ರ ಸರಕಾರದ ಧೋರಣೆ ವಿರುದ್ಧ ಶಿವಸೇನೆ ಸಂಸದ ಸಂಜಯ್ ರಾವತ್ ಬುಧವಾರ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ಅಧಿಕಾರದಲ್ಲಿರುವ ಪಕ್ಷ ತಾಳ್ಮೆಯಿಂದ ವರ್ತಿಸಬೇಕು. ಅಲ್ಲದೇ ಜನರ ಆರೋಗ್ಯದ ಬಗ್ಗೆಯೂ ಕಾಳಜಿವಹಿಸಬೇಕು. ಇದು ನಾನು ಬಿಜೆಪಿಗೆ ಹೇಳುತ್ತಿರುವ ಕಿವಿಮಾತು ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಹೊಸದಾಗಿ ಸಂಪುಟಕ್ಕೆ ಸೇರಿರುವ ಕೇಂದ್ರ ಸಚಿವರಾದ ಭಾರತಿ ಪವಾರ್, ಕಪಿಲ್ ಪಾಟೀಲ್ ಹಾಗೂ ಭಗವತ್ ಕರಡ್ ಅವರು ಈ ವಾರದ ಆರಂಭದಲ್ಲಿ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಜನರನ್ನು ತಲುಪಲು ಜನ ಆಶೀರ್ವಾದ ಯಾತ್ರೆ ಕೈಗೊಂಡಿದ್ದರು.

ಕೋವಿಡ್ 2ನೇ ಅಲೆಯ ಹೊತ್ತಿಗೆ ಪಂಚ ರಾಜ್ಯಗಳ ಚುನಾವಣೆಯಿಂದಾಗಿ ಕೊರೋನ ವ್ಯಾಪಕವಾಗಿ ಹರಡಿ ಇಡೀ ಜಗತ್ತೇ  ಭಾರತದ ಕಡೆಗೆ ನೋಡುವಂತೆ ಮಾಡಿ, ದೇಶದ ಕೆಟ್ಟ ಆರೋಗ್ಯ ವ್ಯವಸ್ಥೆ ಬಟಾಬಯಲಾಗಲು ಕಾರಣವಾಯಿತು. ಈಗ ಮತ್ತೆ 3ನೇ ಅಲೆಯ ಭೀತಿ ನಡುವೆ ಬಿಜೆಪಿ ಕೆಟ್ಟ ಕೆಲಸಕ್ಕೆ ಕೈಹಾಕಿದೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News