'ಮಲಹೊರುವ ಅಮಾನವೀಯ ಪದ್ಧತಿಗೆ ತಿಲಾಂಜಲಿ': ಶಾಸಕ ಹರ್ಷವಧನ್ ಕಾರ್ಯಕ್ಕೆ ಸಿಎಂ ಬೊಮ್ಮಾಯಿ ಪ್ರಶಂಸೆ

Update: 2021-08-18 13:10 GMT

ಬೆಂಗಳೂರು, ಆ.18: ಮೈಸೂರಿನ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಮಲಹೊರುವ ಅಮಾನವೀಯ ಪದ್ದತಿಗೆ ಅಂತ್ಯ ಹಾಡಿದ ಕ್ಷೇತ್ರದ ಶಾಸಕ ಬಿ.ಹರ್ಷವರ್ಧನ್ ಅವರ ಮಾನವೀಯ ಕಾರ್ಯಕ್ಕೆ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಖುದ್ದು ಭೇಟಿ ಮಾಡಿದ ಶಾಸಕ ಹರ್ಷವರ್ಧನ್, ತಮ್ಮ ಕ್ಷೇತ್ರದ ಕೆ.ಆರ್.ಪುರದಲ್ಲಿ ಜನರು ಕೈಯಿಂದಲೇ ಚರಂಡಿ ಹೊಲಸನ್ನು ಹೊತ್ತು ಹಾಕುವ ಅಮಾನವೀಯ ಪದ್ಧತಿ ಕೊನೆಗೊಂಡಿರುವ ಕುರಿತು ವಿವರಣೆ ನೀಡಿ, ಈ ಕುರಿತು ಮಾಹಿತಿ ಫಲಕವೊಂದನ್ನು ನೀಡಿದರು.

ತಮ್ಮ ಅಜ್ಜ, ಅಂದಿನ ಸಚಿವರಾಗಿದ್ದ ಬಿ.ಬಸವಲಿಂಗಪ್ಪ ಅವರು 50 ವರ್ಷಗಳ ಹಿಂದೆ ಮಲಹೊರುವ ಅಮಾನವೀಯ ಪದ್ಧತಿ ಅಂತ್ಯಗೊಳಿಸುವ ಕುರಿತು ವಿಧಾನಸೌಧದಲ್ಲಿ ಘೋಷಣೆ ಮಾಡಿದ್ದರು. ಇದೀಗ ತಾವು ಶಾಸಕರಾದ ನಂತರ ಮೊದಲ ಆದ್ಯತೆಯಾಗಿ  ಕೆ.ಆರ್.ಪುರದಲ್ಲಿ ಇಂದಿಗೂ ನಡೆದುಕೊಂಡು ಬಂದಿದ್ದ ಚರಂಡಿ ಹೊಲಸು ಎತ್ತುವ ಅಮಾನವೀಯ ಪದ್ಧತಿಗೆ ತಿಲಾಂಜಲಿ ನೀಡಿರುವ ಕುರಿತು ಬಸವರಾಜ ಬೊಮ್ಮಾಯಿ ಅವರಿಗೆ ಮಾಹಿತಿ ನೀಡಿದರು.

ಸಮಸ್ಯೆಗಳನ್ನು ನಿವಾರಿಸಿ, ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಿಂದಾಗಿ ಗ್ರಾಮದ ಜನರು ಈಗ ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ. ಆರೋಗ್ಯ ಮತ್ತು ಸ್ವಚ್ಛತೆಗೆ ಗಮನ ನೀಡಲಾಗುತ್ತಿದೆ. ಇಡೀ ಗ್ರಾಮದ ಜನರಲ್ಲಿ ಸಂತಸ ಮೂಡಿದೆ ಎಂದೂ ಹರ್ಷವರ್ಧನ್ ವಿವರಿಸಿದರು. ಸಂಪೂರ್ಣ ಮಾಹಿತಿ ಪಡೆದ ಸಿಎಂ ಬೊಮ್ಮಾಯಿ, ಹರ್ಷವರ್ಧನ್ ಅವರ ಕಾರ್ಯಕ್ಕೆ ತೀವ್ರ ಪ್ರಶಂಸೆ ವ್ಯಕ್ತಪಡಿಸಿದರು. ಜೊತೆಗೆ, ಇಡೀ ಕ್ಷೇತ್ರದಲ್ಲಿ ಇಂತಹ ಮಾದರಿಯಾದ ಕೆಲಸಗಳನ್ನು ಮಾಡುವಂತೆ ಸಲಹೆ ನೀಡಿದರು ಎಂದು ಶಾಸಕ ಹರ್ಷವರ್ಧನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News