ಕೊಪ್ಪ: ರಾಷ್ಟ್ರಧ್ವಜಕ್ಕೆ ಅವಮಾನ ಪ್ರಕರಣ; ಪ.ಪಂ ಬಿಲ್‍ಕಲೆಕ್ಟರ್ ಬಂಧನ

Update: 2021-08-18 16:27 GMT

ಕೊಪ್ಪ, ಆ.18: ಇಲ್ಲಿನ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಮುಖ್ಯಾಧಿಕಾರಿ ಸುಬ್ಬಣ್ಣ ಎಂಬವರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೊಟೊ ಹರಿಯ ಬಿಟ್ಟಿದ್ದು, ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಕಚೇರಿಯ ಬಿಲ್ ಕಲೆಕ್ಟರ್ ಹರ್ಷ ಎಂಬಾತನನ್ನು ಬಂಧಿಸಿದ್ದಾರೆ. 

ಆ.15ರ ಸಂಜೆ ರಾಷ್ಟ್ರಧ್ವಜಾರೋಹಣಗೊಂಡ ನಂತರ ಒದ್ದೆಯಾಗಿರುವ ಧ್ವಜವನ್ನು ಟೇಬಲ್ ಮೇಲೆ ಒಣಗಿಸಿ ತೆಗೆದಿಡಲು ಪ.ಪಂ ಮುಖ್ಯಾಧಿಕಾರಿ ಧ್ವಜವನ್ನು ತಮ್ಮ ಟೇಬಲ್ ಮೇಲೆ ಒಣಗಲು ಹಾಕಿದ್ದರು. ಈ ಸಂದರ್ಭವನ್ನು ಉಪಯೋಗಿಸಿಕೊಂಡ ಕಚೇರಿಯ ಸಿಬ್ಬಂದಿಯೊಬ್ಬ ಅಧಿಕಾರಿ ವಿರುದ್ಧದ ಧ್ವೇಷದಿಂದ ಧ್ವಜದ ಮೇಲೆ ಮುಖ್ಯಾಧಿಕಾರಿ ನಾಮಫಲಕ, ಕಡತವನ್ನಿಟ್ಟು ಫೋಟೊ ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದ, ಅಲ್ಲದೇ ಪ.ಪಂ ಮುಖ್ಯಾಧಿಕಾರಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆಂದು ಗುಲ್ಲೆಬ್ಬಿಸಿದ್ದ. ಈ ಸಂಬಂಧ ಪ.ಪಂ ಮುಖ್ಯಾಧಿಕಾರಿ ಸುಬ್ಬಣ್ಣ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 

ಈ ಘಟನೆ ಸಂಬಂಧ ಎಚ್ಚೆತ್ತ ವೃತ್ತ ನಿರೀಕ್ಷಕ ಗುರಣ್ಣಾ ಹೆಬ್ಬಾಳ್ ಪ.ಪಂ ಸಿಬ್ಬಂದಿಯನ್ನು ವಿಚಾರಿಸಿ ಮಾಹಿತಿ ಕಲೆ ಹಾಕಿದ್ದಾರೆ. ನಂತರ ಸರಕಾರಿ ನೌಕರ ಬಿಲ್ ಕಲೆಕ್ಟರ್ ಹರ್ಷ ಎಂಬವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತನು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದ್ದು, ಆತನ ವಿರುದ್ಧ ಮಂಗಳವಾರ ರಾತ್ರಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬುಧವಾರ ಇಲ್ಲಿನ ಜೆ.ಎಂ.ಎಫ್.ಸಿ ನ್ಯಾಯಲಯವು ಆರೋಪಿಯನ್ನು ಸೆ.1ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿಯನ್ನು ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

ಘಟನೆ ಹಿಂದೆ ಲ್ಯಾಂಡ್ ಮಾಫಿಯಾ: ಪಟ್ಟಣ ಪಂಚಾಯಿತಿಯಲ್ಲಿ ರಾಷ್ಟಧ್ವಜಕ್ಕೆ ಅಪಮಾನ ನಡೆದ ಘಟನೆಯ ಹಿಂದೆ ಲ್ಯಾಂಡ್ ಮಾಫಿಯದ ಕೈವಾಡವಿದೆ ಎಂದು ಬಿಜೆಪಿ ಮುಖಂಡ ಎಚ್.ಎಂ.ರವಿಕಾಂತ್ ಆರೋಪಿಸಿದ್ದಾರೆ.

ಮುಖ್ಯಾಧಿಕಾರಿ ಸುಬ್ಬಣ್ಣ ಅವರು ಭೂ ಮಾಫಿಯಾ ನಡೆಸುವವರ ಮಾತಿಗೆ ಸೊಪ್ಪು ಹಾಕುವುದಿಲ್ಲ. ಇದರಿಂದ ವಿಚಲಿತರಾದ ಕೆಲವರು ಇಲ್ಲಿನ ಸಿಬ್ಬಂದಿಯನ್ನು ದುರ್ಬಳಕೆ ಮಾಡಿಕೊಂಡು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವಂತಹ ನೀಚ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ಪ್ರಕರಣದ ಕುರಿತು ಸಮಗ್ರ ತನಿಖೆಯಾಗ ಬೇಕು. ಇದರ ಹಿಂದೆ ಇರುವವರನ್ನು ಪತ್ತೆ ಹಚ್ಚಿ ಪೊಲೀಸ್ ಇಲಾಖೆ ಶಿಕ್ಷೆಗೆ ಗುರಿ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News