ಹಿಂದೂ ಹುಲಿಗಳು ಬಾಯಿ ಬಿಡುತ್ತಿಲ್ಲ: ಪ್ರಮೋದ್ ಮುತಾಲಿಕ್

Update: 2021-08-18 16:42 GMT

ಬೆಳಗಾವಿ, ಆ.18: ರಾಜ್ಯ ಸರಕಾರ ಗಣೇಶೋತ್ಸವಕ್ಕೆ ನಿರ್ಬಂಧ ಹೇರಿರುವ ಸೇರಿದಂತೆ ಇನ್ನಿತರೆ ಗಂಭೀರ ವಿಷಯಗಳ ಕುರಿತು ಹಿಂದೂ ಹುಲಿಗಳೆಂದು ಕರೆಸಿಕೊಳ್ಳುವ ಬಿಜೆಪಿ ನಾಯಕರು ಬಾಯಿ ಬಿಡುತ್ತಿಲ್ಲ ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಟೀಕಿಸಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಮೂರನೆ ಅಲೆ ಹೆಸರಿನಲ್ಲಿ ಗಣೇಶೋತ್ಸವಕ್ಕೆ ನಿರ್ಬಂಧ ಹೇರಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ, ಆ.21ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.

ಅಲ್ಲದೆ, ಹಿಂದೂ ಧರ್ಮದ ಬಗ್ಗೆ ಬಿಜೆಪಿ ನಾಯಕರು ಗಂಟೆಗಟ್ಟಲೆ ಮಾತನಾಡುತ್ತಾರೆ. ಜತೆಗೆ, ಹಿಂದೂತ್ವದ ಹೆಸರಿನಲ್ಲಿ ಹಲವರು ಮಂತ್ರಿಗಳಾಗಿದ್ದಾರೆ. ಈಗ ನಮ್ಮವರೇ ನಮ್ಮ ಸಂಪ್ರದಾಯಕ್ಕೆ ಭಂಗ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.

'ಇದುವರೆಗೂ ಒಬ್ಬ ಹಿಂದೂ ಸಚಿವರು, ಶಾಸಕರು ಈ ಸರಕಾರದ ನಿರ್ಧಾರ ಖಂಡಿಸಿಲ್ಲ ಎಂದ ಅವರು, ಹಿಂದೂ ದೇವಸ್ಥಾನ, ಜಾತ್ರೆಗಳಿಗೆ ಮಾತ್ರ ನಿರ್ಬಂಧ ಹಾಕುತ್ತಿರುವುದೇಕೆ. ಅಲ್ಲದೆ, ಬಸ್, ಮಾರುಕಟ್ಟೆ, ರೆಸ್ಟೋರೆಂಟ್ ಎಲ್ಲವೂ ತೆರೆದಿದೆ' ಎಂದು ಪ್ರಶ್ನಿಸಿದರು.

ಬಿಜೆಪಿ ನಾಯಕರು ಘೋರ ಅಪರಾಧ ಮಾಡುತ್ತಿದ್ದಾರೆ. ಲಕ್ಷಾಂತರ ಜನರ ಭಾವನೆ, ಪರಂಪರೆ, ಭಕ್ತಿ ಇದೆ. ಕೋವಿಡ್ ನೆಪ ಹೇಳಿ ಗಣೇಶೋತ್ಸವಕ್ಕೆ ನಿರ್ಬಂಧ ಹಾಕಿರುವುದನ್ನು ನಾವು ಸಹಿಸಲ್ಲ. ಕೆಲವು ಅಧಿಕಾರಿಗಳು ಸರಕಾರವನ್ನು ದಾರಿ ತಪ್ಪಿಸುತ್ತಿದ್ದಾರೆ. ಅದಕ್ಕಾಗಿ ಗಣೇಶೋತ್ಸವಕ್ಕೆ ನಿರ್ಬಂಧ ಹೇರಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News