ಕೌಟುಂಬಿಕ ದೌರ್ಜನ್ಯ: 23 ವಾರಗಳ ಗರ್ಭ ಪಾತಕ್ಕೆ ಹೈಕೋರ್ಟ್ ಅನುಮತಿ

Update: 2021-08-18 17:45 GMT

ಮುಂಬೈ, ಆ. 18: ಕೌಟುಂಬಿಕ ದೌರ್ಜನ್ಯ ಮಹಿಳೆಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಅದು ಆಕೆಯ ಗರ್ಭಪಾತ ಮಾಡಲು ಮೌಲ್ಯಯುತ ಕಾರಣವಾಗಬಹುದು ಎಂದು ಗಮನಿಸಿರುವ ಬಾಂಬೆ ಉಚ್ಚ ನ್ಯಾಯಾಲಯ ಮಹಿಳೆಯೋರ್ವರಿಗೆ 23 ವಾರಗಳ ಆರೋಗ್ಯಯುತ ಭ್ರೂಣದ ಗರ್ಭಪಾತಕ್ಕೆ ಅವಕಾಶ ನೀಡಿದೆ.

ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಹಾಗೂ ಮಾಧವ್ ಜಾಮ್ದಾರ್ ಅವರನ್ನೊಳಗೊಂಡ ನ್ಯಾಯಪೀಠ ಆಗಸ್ಟ್ 3ರಂದು ಈ ತೀರ್ಪು ನೀಡಿದೆ. ಇದರ ಪ್ರತಿ ಮಂಗಳವಾರ ಲಭ್ಯವಾಯಿತು. ವಿಶ್ವ ಆರೋಗ್ಯ ಸಂಸ್ಥೆಯ ಮಹಿಳೆಯ ಪ್ರತ್ಯುತ್ಪಾದನಾ ಹಕ್ಕಿನ ಪ್ರತಿಪಾದನೆಯನ್ನು ಉಚ್ಚ ನ್ಯಾಯಾಲಯದ ಆದೇಶ ಉಲ್ಲೇಖಿಸಿದೆ.

ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ 22 ಹರೆಯದ ಮಹಿಳೆಯನ್ನು ರಾಜ್ಯ ಸ್ವಾಮಿತ್ವದ ಮುಂಬೈಯ ಜೆ.ಜೆ. ಆಸ್ಪತ್ರೆಯಲ್ಲಿ ತಜ್ಞರು ಪರಿಶೀಲನೆ ನಡೆಸಿದ್ದರು. ಮಹಿಳೆಯ ಭ್ರೂಣ ಆರೋಗ್ಯಯುತವಾಗಿದೆ. ಯಾವುದೇ ಅಸಹಜತೆ ಇಲ್ಲ. ಆದರೆ, ಮಹಿಳೆ ಮಾನಸಿಕ ಆಘಾತಕ್ಕೆ ಒಳಗಾಗಿದ್ಧಾಳೆ. ಗರ್ಭದ ಮುಂದುವರಿಕೆ ಆಕೆಯ ಮಾನಸಿಕ ಅನಾರೋಗ್ಯವನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ತಜ್ಞರು ಹೇಳಿದ್ದರು.

ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ ಮಹಿಳೆ, ತಾನು ಗಂಡನಿಂದ ವಿಚ್ಛೇದನ ಪಡೆದಕೊಂಡಿದ್ದೇನೆ. ಆದುದರಿಂದ ಗರ್ಭವನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ಹೇಳಿದ್ದಳು.

ಪ್ರಸಕ್ತ ವೈದ್ಯಕೀಯ ಗರ್ಭಪಾತ (ಎಂಟಿಪಿ) ಕಾಯ್ದೆ ಪ್ರಕಾರ ತಾಯಿ ಹಾಗೂ ಭ್ರೂಣಕ್ಕೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇಲ್ಲದೇ ಇದ್ದರೆ, 20 ವಾರಕ್ಕಿಂತ ಮೇಲಿನ ಭ್ರೂಣದ ಗರ್ಭಪಾತ ಮಾಡಲು ಅವಕಾಶ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News