ವಿದ್ಯುತ್ ಪೂರೈಕೆ: ತಾರತಮ್ಯ ಬೇಡ

Update: 2021-08-19 04:55 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಈ ವರ್ಷ ಕೆಲ ತಾಲೂಕುಗಳನ್ನು ಹೊರತು ಪಡಿಸಿದರೆ ರಾಜ್ಯದ ಬಹುತೇಕ ಕಡೆ ಚೆನ್ನಾಗಿ ಮಳೆಯಾಗುತ್ತಿದೆ. ಎಲ್ಲ ಅಣೆಕಟ್ಟುಗಳು ಭರ್ತಿಯಾಗುವ ಹಂತವನ್ನು ತಲುಪಿವೆ. ಜಲ ವಿದ್ಯುತ್ ಘಟಕಗಳಲ್ಲಿ ಸಾಕಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಜೊತೆಗೆ ಸೌರ ಶಕ್ತಿ ಹಾಗೂ ಪವನ ವಿದ್ಯುತ್ ಉತ್ಪಾದನೆಯಲ್ಲೂ ಸಾಕಷ್ಟು ಹೆಚ್ವಳವಾಗಿದೆ. ಆದರೆ ಈ ದೇಶದ ಆರ್ಥಿಕತೆಯ ಬೆನ್ನೆಲುಬಾದ ಕೃಷಿ ಕ್ಷೇತ್ರಕ್ಕೆ ಗುಣಮಟ್ಟದ ವಿದ್ಯುತ್ ಪೂರೈಕೆ ಯಾಗುತ್ತಿಲ್ಲ ಎಂಬ ಆಕ್ಷೇಪ ಮತ್ತು ದೂರುಗಳು ರೈತಾಪಿ ವರ್ಗದಿಂದ ಬರುತ್ತಲೇ ಇವೆ.ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗುತ್ತಿರುವಾಗಲೂ ರೈತರಿಗೆ ಗುಣಮಟ್ಟದ ವಿದ್ಯುತ್ ನೀಡದಿರುವುದು ಅನ್ಯಾಯದ ಪರಮಾವಧಿಯಾಗಿದೆ. ನಗರ ಪ್ರದೇಶದ ಉದ್ಯಮಗಳಿಗೆ ಕೇಳಿದಷ್ಟು ವಿದ್ಯುತ್ ಒದಗಿಸಲಾಗುತ್ತದೆ. ಆದರೆ ನಾಡಿಗೆ ಅನ್ನ ಹಾಕುವ ಹಳ್ಳಿಗಾಡಿನ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಒದಗಿಸುವಲ್ಲಿ ಇಂಧನ ಇಲಾಖೆ ವಿಫಲಗೊಂಡಿದೆಯೆಂದರೆ ಅತಿಶಯೋಕ್ತಿಯಲ್ಲ. ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಒದಗಿಸುವುದಿಲ್ಲವೆಂದಲ್ಲ. ಆದರೆ ಒದಗಿಸುವ ವಿದ್ಯುತ್ ಹಗಲು ಹೊತ್ತಿನಲ್ಲಿ ಪಂಪ್‌ಸೆಟ್‌ಗೆ ಉಪಯೋಗವಾಗುತ್ತಿಲ್ಲ. ಹಗಲು ಹೊತ್ತಿನಲ್ಲಿ ತ್ರಿಫೇಸ್ ವಿದ್ಯುತ್ ಪೂರೈಸಬೇಕೆಂದು ರೈತರ ಬೇಡಿಕೆಯಾಗಿದೆ. ಆದರೆ ನಡು ರಾತ್ರಿಯ ನಂತರ ರೈತರ ಪಂಪ್‌ಸೆಟ್‌ಗೆ ತ್ರಿಫೇಸ್ ವಿದ್ಯುತ್ ಒದಗಿಸಲಾಗುತ್ತಿದೆ. ಹೀಗಾಗಿ ರೈತರು ನಿದ್ದೆಗೆಟ್ಟು ಕಾಯಬೇಕಾಗಿ ಬಂದಿದೆ. ವಿದ್ಯುತ್ ಬಂದ ನಂತರ ರಾತ್ರಿಯಲ್ಲಿ ಪಂಪ್‌ಸೆಟ್ ಚಾಲನೆ ಮಾಡಲು ಹೋದ ಅನೇಕ ರೈತರಿಗೆ ಹಾವು, ಚೇಳು, ಮುಂತಾದ ವಿಷಜಂತುಗಳು ಕಡಿದು ಸಾವು ನೋವು ಸಂಭವಿಸಿದೆ.

ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಏಕರೂಪದ ನೀತಿಯನ್ನು ಯಾಕೆ ಅನುಸರಿಸುತ್ತಿಲ್ಲವೋ ಅರ್ಥವಾಗುತ್ತಿಲ್ಲ. ಎಲ್ಲ ಜಿಲ್ಲೆಗಳ ಔದ್ಯಮಿಕ ಚಟುವಟಿಕೆಗಳಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲ ಜನ ಜೀವನದ ಎಲ್ಲ ರಂಗಗಳಿಗೂ ವಿದ್ಯುತ್ ಬೇಕು. ಆದರೆ ಈಗ ಕೆಲವು ಆಯ್ದ ಜಿಲ್ಲೆಗಳಲ್ಲಿ ಸಾಕಷ್ಟು ಸಮಯ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುತ್ತಿದೆ. ಇನ್ನು ಕೆಲವು ನಿರ್ಲಕ್ಷಿತ ಜಿಲ್ಲೆಗಳಲ್ಲಿ ಪೂರೈಕೆಯಾಗುತ್ತಿರುವ ವಿದ್ಯುತ್ತಿನಿಂದ ದೀಪವನ್ನು ಉರಿಸಲೂ ಆಗುವುದಿಲ್ಲ. ವಿದ್ಯುತ್ ಉತ್ಪಾದನೆಯಲ್ಲಿ ಗಮನಾರ್ಹ ಹೆಚ್ಚಳವೇನೋ ಆಗಿದೆ. ಆದರೆ ಸಮರ್ಪಕವಾದ ವಿದ್ಯುತ್ ಪೂರೈಕೆ ಹಾಗೂ ವಿತರಣೆ ಸಾಧ್ಯವಾಗದೆ ಗ್ರಾಮೀಣ ಪ್ರದೇಶದ ಜನ ಪರದಾಡುವಂತಾಗಿದೆ.

ಈಗ ಹದಿನೈದು ಜಿಲ್ಲೆಗಳಲ್ಲಿ ಮಾತ್ರ ಏಳು ತಾಸುಗಳ ಕಾಲ ತ್ರಿಫೇಸ್ ವಿದ್ಯುತ್ ಪೂರೈಕೆಯಾಗುತ್ತಿದೆ. ಉಳಿದ ಜನ ಮಲತಾಯಿ ಮಕ್ಕಳಂತಾಗಿದ್ದಾರೆ. ಆ ಜಿಲ್ಲೆಗಳಲ್ಲಿ ಐದು ತಾಸು ಕಾಲವೂ ನಿರಾತಂಕವಾದ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಒಪ್ಪಿಕೊಂಡಿದ್ದಾರೆ.
ಕೆಲವು ಜಿಲ್ಲೆಗಳಲ್ಲಿ ಮಳೆಯ ಕೊರತೆಯಿಂದಾಗಿ ಬರಗಾಲದ ಕಾರ್ಮೋಡ ಕವಿದಿದೆ. ಇಂತಹ ಜಿಲ್ಲೆಗಳಿಗೆ ಸರಕಾರ ಆದ್ಯತೆಯ ಮೇಲೆ ವಿದ್ಯುತ್ ಒದಗಿಸಬೇಕು. ಹೆಚ್ಚು ಮಳೆ ಬೀಳುತ್ತಿರುವ ಜಿಲ್ಲೆಗಳನ್ನು ಹೊರತು ಪಡಿಸಿ ಕೃಷಿ ಚಟುವಟಿಕೆಗಳಿಗಾಗಿ ಪಂಪ್‌ಸೆಟ್‌ನ್ನು ಅವಲಂಬಿಸಿದ ಜಿಲ್ಲೆಗಳಿಗೆ ಪ್ರತಿದಿನ ಹೆಚ್ಚು ಕಾಲ ತ್ರಿಫೇಸ್ ವಿದ್ಯುತ್ ಒದಗಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಇಂಧನ ಇಲಾಖೆಗೆ ಸೂಚನೆಯನ್ನು ನೀಡಿದ್ದಾರೆ. ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ಬಳಸಲ್ಪಡುವ ವಿದ್ಯುತ್‌ಗೆ ರೈತರು ಬಿಲ್ ಪಾವತಿ ಮಾಡುವುದಿಲ್ಲ ಎಂದು ನೆಪವನ್ನು ಮುಂದೆ ಮಾಡಿ ವಿದ್ಯುತ್ ಪೂರೈಕೆ ಮಾಡದಿರುವುದು ಸರಿಯಲ್ಲ. ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಿದರೆ ಕೃಷಿ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ಕೃಷಿ ಕ್ಷೇತ್ರ ಚೇತರಿಸಿದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸುತ್ತದೆ.

ವಿದ್ಯುತ್ ಪೂರೈಕೆ ತಾರತಮ್ಯರಹಿತವಾಗಿರಬೇಕು. ಸಾಕಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿರುವಾಗಲೂ ರೈತರು ತಮ್ಮ ಹೊಲ, ತೋಟಗಳಿಗೆ ನೀರು ಹಾಯಿಸಲು ನಡು ರಾತ್ರಿಯವರೆಗೆ ನಿದ್ದೆಗೆಟ್ಟು ಕಾಯುವ ಯಾತನೆಯ ಪರಿಸ್ಥಿತಿ ಬರಬಾರದು. ಇಂಧನ ಇಲಾಖೆ ಬರೀ ಉದ್ಯಮ ಸ್ನೇಹಿ ಆದರೆ ಸಾಲದು ರೈತ ಸ್ನೇಹಿಯಾಗಬೇಕು.

ದೇಶದಲ್ಲಿ ಆರ್ಥಿಕ ಉದಾರೀಕರಣದ ಶಕೆ ಆರಂಭವಾದ ನಂತರ ಕೃಷಿ ಕ್ಷೇತ್ರ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅಧಿಕಾರದಲ್ಲಿರುವ ಮಂತ್ರಿ, ಶಾಸಕರಿಗೆ ಚುನಾವಣೆಯಲ್ಲಿ ರೈತರ ನೆನಪಾಗುತ್ತದೆ. ಆಗ ಮನೆ ಬಾಗಿಲಿಗೆ ಬಂದು ಬೆಣ್ಣೆ ಹಚ್ಚುತ್ತಾರೆ. ಆದರೆ ಒಮ್ಮೆ ಗೆದ್ದು ಹೋದ ನಂತರ ತಮ್ಮನ್ನು ಚುನಾಯಿಸಿದ ಮತದಾರರನ್ನು ಕಡೆಗಣಿಸಿ ಕಾರ್ಪೊರೇಟ್ ಉದ್ಯಮಪತಿಗಳ ಸೇವೆಗೆ ಅರ್ಪಿಸಿಕೊಳ್ಳುತ್ತಾರೆ. ಕೈಗಾರಿಕೆಗಳಿಗೆ ನೀಡುವ ಆದ್ಯತೆಯನ್ನು ಕೃಷಿ ಕ್ಷೇತ್ರಕ್ಕೆ ನೀಡುವುದಿಲ್ಲ. ಭಾರೀ ಬಂಡವಾಳಗಾರರ ಕೋಟ್ಯಂತರ ರೂಪಾಯಿ ಸಾಲವನ್ನು ಮನ್ನಾ ಮಾಡುವ ಸರಕಾರ ರೈತರ ಸಣ್ಣಪುಟ್ಟ ಸಾಲಗಳ ವಸೂಲಿಗಾಗಿ ಅವರ ಮನೆಗಳ ಜಪ್ತ್ತಿಗೆ ಬ್ಯಾಂಕುಗಳಿಗೆ ಅವಕಾಶ ನೀಡುತ್ತದೆ. ಇದು ಅನ್ಯಾಯದ ಪರಮಾವಧಿಯಲ್ಲದೆ ಬೇರೇನೂ ಅಲ್ಲ. ವಿದ್ಯುತ್ ಪೂರೈಕೆಯಲ್ಲೂ ಇಂತಹದ್ದೆೇ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತದೆ. ಬಾಕಿ ಪಾವತಿಸಿಲ್ಲ ಎಂದು ರೈತರ ಪಂಪಸೆಟ್‌ಗೆ ವಿದ್ಯುತ್ ಪೂರೈಕೆ ನಿಲ್ಲಿಸಲಾಗುತ್ತದೆ. ಆದರೆ ಭಾರೀ ಉದ್ಯಮಪತಿಗಳು ಕೋಟ್ಯಂತರ ರೂಪಾಯಿ ವಿದ್ಯುತ್ ಬಾಕಿ ಉಳಿಸಿಕೊಂಡರೂ ಅವರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವುದಿಲ್ಲ. ಇನ್ನು ಮುಂದಾದರೂ ಇಂತಹ ತಾರತಮ್ಯದ ನೀತಿಯನ್ನು ಕೈ ಬಿಡಬೇಕು. ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವಲ್ಲಿ ವಿಳಂಬ ಮಾಡಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News