ಧ್ವಜಸ್ತಂಭ ನಿಲ್ಲಿಸುವಾಗ ವಿದ್ಯುತ್ ತಗುಲಿ ಬಾಲಕ ಸಾವು: ಪರಿಹಾರ ನೀಡಲು ಹೈಕೋರ್ಟ್ ಸೂಚನೆ

Update: 2021-08-19 14:04 GMT

ಬೆಂಗಳೂರು, ಆ.19: ಸ್ವಾತಂತ್ರ್ಯೋತ್ಸವದ ದಿನಾಚರಣೆ ದಿನದಂದು ಧ್ವಜಸ್ತಂಭ ನಿಲ್ಲಿಸುವ ವೇಳೆ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಬಾಲಕನ ಕುಟುಂಬಕ್ಕೆ ಪರಿಹಾರ ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಗುರುವಾರ ಆದೇಶಿಸಿದೆ.

ತುಮಕೂರು ತಾಲೂಕಿನ ಕರೀಕೆರೆ ಗ್ರಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಧ್ವಜಾರೋಹಣಕ್ಕೆ ಕಂಬ ನಿಲ್ಲಿಸಲು ಸಾಗಿಸುವಾಗ ಲೋಹದ ಕಂಬವು ವಿದ್ಯುತ್ ತಂತಿಗೆ ತಗುಲಿ 16 ವರ್ಷದ ಬಾಲಕ ಚಂದನ್ ಮೃತಪಟ್ಟಿದ್ದ. ಆತನ ಜತೆಗೆ ಕಂಬ ಸಾಗಿಸುತ್ತಿದ್ದ ಪವನ್ ಮತ್ತು ಶಶಾಂಕ್ ಗಾಯಗೊಂಡಿದ್ದರು. ಅವರಿಬ್ಬರೂ ತುಮಕೂರಿನ ಶ್ರೀದೇವಿ ವೈದ್ಯಕೀಯ ವಿಜ್ಞಾನಗಳು ಮತ್ತು ಸಂಶೋಧನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ವಿಚಾರದ ಬಗ್ಗೆ ಗಮನ ಹರಿಸುವಂತೆ ತುಮಕೂರು ಜಿಲ್ಲಾಧಿಕಾರಿಗೆ ಸೂಚನೆ ನೀಡಬೇಕು ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠ ನಿರ್ದೇಶಿಸಿದೆ.

ಮೃತಪಟ್ಟ ಬಾಲಕನ ಪೋಷಕರಿಗೆ ಕೂಡಲೇ ಪರಿಹಾರ ಒದಗಿಸುವುದನ್ನು ಸರಕಾರ ಪರಿಗಣಿಸಬೇಕು. ಹಾಗೆಯೇ ಉಳಿದ ಇಬ್ಬರು ಗಾಯಾಳು ಬಾಲಕರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು. ಸರಕಾರವೇ ಅದರ ಖರ್ಚು ವೆಚ್ಚ ಭರಿಸಬೇಕು ಎಂದು ಆದೇಶಿಸಿದೆ.
ಗಾಯಗೊಂಡ ಬಾಲಕರ ಆರೋಗ್ಯ ಸ್ಥಿತಿಯ ಕುರಿತಾದ ವೈದ್ಯಕೀಯ ಪ್ರಮಾಣಪತ್ರದ ಜತೆಗೆ, ಬಾಲಕನ ಸಾವಿನ ಕಾರಣವನ್ನು ಉಲ್ಲೇಖಿಸಿ ಪ್ರಮಾಣಪತ್ರ ಹಾಗೂ ವಿವರವಾದ ವರದಿ ಸಲ್ಲಿಸಬೇಕು ಎಂದು ತುಮಕೂರು ಜಿಲ್ಲಾಧಿಕಾರಿಗೆ ನ್ಯಾಯಾಲಯ ಸೂಚನೆ ನೀಡಿದೆ. ಇಂದಿನಿಂದ ಎರಡು ವಾರಗಳ ಅವಧಿಯಲ್ಲಿ ಈ ಎಲ್ಲ ಸೂಚನೆಗಳೂ ಜಾರಿಯಾಗಬೇಕು ಎಂದು ಹೇಳಿದೆ. ಸೆ.6ಕ್ಕೆ ಮುಂದಿನ ವಿಚಾರಣೆ ನಿಗದಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News