ಪೂಜಾ ಕಾರ್ಯಕ್ಕೆ ಆನೆಗಳನ್ನು ಬಳಸಿಕೊಳ್ಳುವುದು ಕ್ರೌರ್ಯ: ಹೈಕೋರ್ಟ್

Update: 2021-08-20 11:26 GMT

ಬೆಂಗಳೂರು, ಆ.20: ಆನೆಗಳನ್ನು ಪೂಜಾ ಕಾರ್ಯಕ್ರಮಕ್ಕೆ ಬಳಸಿಕೊಳ್ಳುವುದು ಕ್ರೌರ್ಯವಾಗಿದ್ದು ಅವುಗಳು ಕಾಡಿನಲ್ಲಿರಬೇಕೇ ಹೊರತು ದೇವಸ್ಥಾನದಲ್ಲಿ ಅಲ್ಲ ಎಂದು ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.

ಪೂಜಾ ವಿಧಿ ವಿಧಾನಗಳನ್ನು ನಡೆಸಲು ತಂದ ಆನೆಯನ್ನು ದೇವಸ್ಥಾನದಲ್ಲಿಯೇ ಇರಿಸಬೇಕು ಎಂದು ಕೋರಿ ನಗರದ ತಿಂಡ್ಲುವಿನ ವಿದ್ಯಾರಣ್ಯಪುರದ ಶ್ರೀಕಾಳಿಕಾದುರ್ಗಾ ಪರಮೇಶ್ವರಿ ದೇವಸ್ಥಾನದ ಸಂಸ್ಥಾಪಕ ಟ್ರಸ್ಟಿ ರಾಧಮ್ಮ ಮತ್ತು ಮತ್ತೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯಿತು. 

ಈ ವೇಳೆ ಅರ್ಜಿದಾರ ಪರ ವಕೀಲರು ವಾದಿಸಿ, ಕಾಳಿಕಾದುರ್ಗ ಪರಮೇಶ್ವರಿ ದೇವಸ್ಥಾನದಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲು ಆನೆ ತಂದು ಪೋಷಿಸಲಾಗುತ್ತಿತ್ತು. ದೇವಸ್ಥಾನವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ಪಡೆದು, ಆನೆಯನ್ನೂ ವಶಕ್ಕೆ ಪಡೆದಿದೆ. ಹೀಗಾಗಿ ಆನೆಯನ್ನು ಸ್ಥಳಾಂತರಿಸದೇ ದೇವಸ್ಥಾನದಲ್ಲಿಯೇ ಇರಿಸಲು ಮುಜರಾಯಿ ಇಲಾಖೆಗೆ ನಿರ್ದೇಶಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು. 
ಅರ್ಜಿದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಆನೆಗಳು ಕಾಡಿನಲ್ಲಿರಬೇಕೇ ಹೊರತು ದೇವಸ್ಥಾನದಲ್ಲಿ ಅಲ್ಲ.

ಕಾಡಿನಲ್ಲಿರಬೇಕಾದ ಪ್ರಾಣಿಯನ್ನು ದೇವಸ್ಥಾನದಲ್ಲಿ ಇರಿಸುವುದು ತಪ್ಪು. ಪೂಜಾ ಕಾರ್ಯಕ್ರಮಗಳಿಗೆ ಆನೆಯನ್ನು ಬಳಕೆ ಮಾಡುತ್ತಿರುವುದು ಕ್ರೌರ್ಯ ಎನ್ನಿಸಿಕೊಳ್ಳುತ್ತದೆ. ಕಾಡಿನಲ್ಲಿ ಇತರೆ ಆನೆಗಳೊಂದಿಗೆ ಜೀವಿಸಲು ಅವಕಾಶ ನೀಡದೆ, ಆನೆಯನ್ನು ದೇವಸ್ಥಾನದಲ್ಲಿರಿಸಿ ಪೂಜಾ ಕಾರ್ಯಕ್ರಮಕ್ಕೆ ಬಳಸುವುದು ಸರಿಯಲ್ಲ ಎಂದು ತೀಕ್ಷಣವಾಗಿ ಹೇಳಿತು. 

ಅರ್ಜಿದಾರ ಪರ ವಕೀಲರು ವಾದಿಸಿ, ಆನೆಗಳನ್ನು ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮಗಳಿಗೆ ಆನೆ ಬಳಕೆ ಮಾಡುತ್ತಿರುವ ಪದ್ಧತಿ ಹಿಂದಿನಿಂದಲೂ ಜಾರಿಯಲ್ಲಿದೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ಹಿಂದೇ ಪದ್ಧತಿ ಇತ್ತು ಎಂಬ ಕಾರಣಕ್ಕೆ ಮುಂದುವರಿಸುತ್ತೀರಿ ಎನ್ನುವುದಾದರೆ ಒಪ್ಪಲಾಗದು ಎಂದು ಹೇಳಿತು. 

ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ 2 ವಾರ ಕಾಲಾವಕಾಶ ನೀಡಿ, ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News