ವಿಕಾಸ್ ದುಬೆ ಎನ್‍ ಕೌಂಟರ್: ಪೊಲೀಸ್ ಕ್ರಮಕ್ಕೆ ತನಿಖಾ ಆಯೋಗದಿಂದ ಕ್ಲೀನ್ ಚಿಟ್

Update: 2021-08-20 17:32 GMT

ಲಕ್ನೋ,ಆ.20: ಸರ್ವೋಚ್ಚ ನ್ಯಾಯಾಲಯದಿಂದ ನೇಮಕಗೊಂಡಿದ್ದ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಬಿ.ಎಸ್.ಚೌಹಾಣ ನೇತೃತ್ವದ ತ್ರಿಸದಸ್ಯ ನ್ಯಾಯಾಂಗ ಆಯೋಗವು ಜುಲೈ,2020ರಲ್ಲಿ ನಡೆದಿದ್ದ ಪಾತಕಿ ವಿಕಾಸ ದುಬೆ ಎನ್ಕೌಂಟರ್ ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರಿಗೆ ಕ್ಲೀನ್ ಚಿಟ್ ನೀಡಿದೆ.

ಗುರುವಾರ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಆಯೋಗದ ವರದಿಯನ್ನು ಮಂಡಿಸಲಾಗಿತ್ತು. ಆದರೆ ದುಬೆಗೆ ಕಾನ್ಪುರದ ಸ್ಥಳೀಯ ಪೊಲೀಸರು, ಕಂದಾಯ ಮತ್ತು ಆಡಳಿತಾತ್ಮಕ ಅಧಿಕಾರಿಗಳ ಅಭಯವಿತ್ತು ಎಂದು ಬೆಟ್ಟು ಮಾಡಿರುವ ವರದಿಯು,ಅವರ ವಿರುದ್ಧ ವಿಚಾರಣೆಗೆ ಶಿಫಾರಸು ಮಾಡಿದೆ.
 
2020,ಜುಲೈ 3ರಂದು ಕಾನ್ಪುರದ ಬಿಕ್ರು ಗ್ರಾಮದಲ್ಲಿ ಗುಂಡಿನ ದಾಳಿ ನಡೆಸಿ ಎಂಟು ಪೊಲೀಸ್ ಅಧಿಕಾರಿಗಳನ್ನು ಹತ್ಯೆಗೈದಿದ್ದ ಆರೋಪದಲ್ಲಿ ದುಬೆಯನ್ನು ಅದೇ ತಿಂಗಳ 9ರಂದು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬಂಧಿಸಲಾಗಿತ್ತು. ಜು.10ರಂದು ಆತ ತಮ್ಮ ವಶದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ಸಂದರ್ಭ ಪೊಲೀಸರು ಗುಂಡಿಕ್ಕಿ ಆತನನ್ನು ಕೊಂದಿದ್ದರು.

ಕಸ್ಟಡಿಯಲ್ಲಿದ್ದಾಗ ದುಬೆಯ ಹತ್ಯೆಗಾಗಿ ಪ್ರತಿಪಕ್ಷಗಳು ಉ.ಪ್ರದೇಶ ಸರಕಾರವನ್ನು ಟೀಕಿಸಿದ ಬಳಿಕ ಸರ್ವೋಚ್ಚ ನ್ಯಾಯಾಲಯವು ಘಟನೆಯ ವಿಚಾರಣೆಗಾಗಿ ಆಯೋಗವನ್ನು ನೇಮಕಗೊಳಿಸಿತ್ತು.

ದುಬೆಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದಾಗ ಜಾನುವಾರುಗಳ ಹಿಂಡಿಗೆ ಡಿಕ್ಕಿ ಹೊಡೆಯುವದನ್ನು ತಪ್ಪಿಸಲು ಚಾಲಕ ಪ್ರಯತ್ನಿಸಿದಾಗ ಕಾರು ಪಲ್ಟಿಯಾಗಿತ್ತು ಎಂದು ಉತ್ತರ ಪ್ರದೇಶ ಪೊಲೀಸ್ನ ವಿಶೇಷ ತನಿಖಾ ತಂಡವು ಹೇಳಿತ್ತು.
 
ಈ ಕುರಿತಂತೆ ಆಯೋಗದ ವರದಿಯು,ಅಪಘಾತದಿಂದಾಗಿ ಕಾರಿನಲ್ಲಿದ್ದ ಕೆಲವು ಪೊಲೀಸರು ಕೊಂಚ ಹೊತ್ತು ಪ್ರಜ್ಞೆಯನ್ನು ಕಳೆದುಕೊಂಡಿದ್ದರು ಎಂದು ಹೇಳಿದೆ. ಈ ಸಂದರ್ಭದ ಲಾಭ ಪಡೆದಿದ್ದ ದುಬೆ ಪೊಲೀಸ್ನೋರ್ವನ ರಿವಾಲ್ವರ್ನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದ ಎಂಬ ಪೊಲೀಸರು ಹೇಳಿಕೆಯನ್ನು ಆಯೋಗವು ಎತ್ತಿ ಹಿಡಿದಿದೆ.
 
ದುಬೆ ಪೊಲೀಸರತ್ತ ಗುಂಡುಗಳನ್ನು ಹಾರಿಸಿದ್ದು,ಇಬ್ಬರು ಪೊಲೀಸರು ಗಾಯಗೊಂಡಿದ್ದರು. ನಂತರ ಪೊಲೀಸರು ಆತ್ಮರಕ್ಷಣೆಗಾಗಿ ಆತನತ್ತ ಗುಂಡು ಹಾರಿಸಿದ್ದರು ಎಂದು ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News