ಹಲವು ವರ್ಷಗಳಿಂದ ಒಂದೇ ಕಡೆ ಸೇವೆ ಸಲ್ಲಿಸುತ್ತಿದ್ದ ವಿಧಾನ ಪರಿಷತ್ತಿನ ಮೂವತ್ತಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆ

Update: 2021-08-20 13:17 GMT

ಬೆಂಗಳೂರು, ಆ. 20: ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಬೇರೂರಿದ್ದ ಕರ್ನಾಟಕ ವಿಧಾನ ಪರಿಷತ್ತಿನ ಮೂವತ್ತಕ್ಕೂ ಹೆಚ್ಚು ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸಚಿವಾಲಯದ ಆಡಳಿತಕ್ಕೆ ಸರ್ಜರಿ ಮಾಡುವ ಮೂಲಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮುಂದಾಗಿದ್ದಾರೆ.

ಆಯಕಟ್ಟಿನ ಸ್ಥಳಗಳಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತ ತಮ್ಮದೇ ಪ್ರಭುತ್ವ ಸಾಧಿಸಿದ್ದ ಹಲವರನ್ನು ಬೇರೆಡೆಗೆ ವರ್ಗಾಯಿಸಿ, ವಿಧಾನ ಪರಿಷತ್ತಿನ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಹಾಗೂ ದಕ್ಷತೆ ಮೂಡಿಸುವಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಯಶಸ್ವಿಯಾಗಿದ್ದು, ಈ ಕ್ರಮ ಸಚಿವಾಲಯದ ಆಡಳಿತ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.

ಈ ಕುರಿತು ನಿನ್ನೆಯಷ್ಟೇ ಅಧಿಸೂಚನೆ ಹೊರಡಿಸಿದ್ದು ಉಪಕಾರ್ಯದರ್ಶಿ, ಅಧೀನ ಕಾರ್ಯದರ್ಶಿ ಶಾಖಾಧಿಕಾರಿಗಳು, ಹಿರಿಯ ಸಹಾಯಕರು, ಸಹಾಯಕರು ಮತ್ತು ಕಿರಿಯ ಸಹಾಯಕರನ್ನೊಳಗೊಂಡ ಮೂವತ್ತು ಜನರನ್ನು ಬೇರೆ ಬೇರೆ ವಿಭಾಗಗಳಿಗೆ ವರ್ಗಾಯಿಸಲಾಗಿದೆ. ಪರಿಷತ್ ಸಚಿವಾಲಯದ ಕಾರ್ಯನಿರ್ವಹಣೆಯಲ್ಲಿ ವ್ಯಾಪಕ ಬದಲಾವಣೆ ಅವಶ್ಯಕತೆ ಇದೆ ಎನ್ನುವ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿತ್ತಾದರೂ ಈ ಕುರಿತು ಯಾರೂ ಈ ಪ್ರಮಾಣದಲ್ಲಿ ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿದೆ.

ಪ್ರಭಾವಿಗಳ ಕೃಪಾಶೀರ್ವಾದ, ಒತ್ತಡ ಮೊದಲಾದ ಕಾರಣಗಳಿಂದ ಹಲವು ಸಿಬ್ಬಂದಿ ಸಚಿವಾಲಯದ ಆಯಕಟ್ಟಿನ ಸ್ಥಳಗಳಲ್ಲಿ ಬಹಳ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಅಂತಹ ಕೆಲ ಸಿಬ್ಬಂದಿಗಳ ಬಗ್ಗೆ ಹಲವು ದೂರುಗಳು ಕೇಳಿ ಬಂದಿದ್ದವು. ಇವೆಲ್ಲವುಗಳನ್ನು ಪರಿಗಣಿಸಿ ಸಭಾಪತಿ ಬಸವರಾಜ ಹೊರಟ್ಟಿ ಮಿಂಚಿನ ಕಾರ್ಯಾಚರಣೆ ನಡೆಸಿ ದಿಢೀರನೆ ಮೂವತ್ತು ಮಂದಿ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದ್ದು ಸಚಿವಾಲಯದ ಕೆಲ ಸಿಬ್ಬಂದಿಗಳಲ್ಲಿ ಸಂತಸ ಮೂಡಿಸಿದ್ದರೆ ಕೆಲವರಲ್ಲಿ ಆತಂಕ ಉಂಟು ಮಾಡಿದೆ.

ಹಣ, ಅಧಿಕಾರ ದುರುಪಯೋಗ ಕುರಿತ ದೂರಿಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆಗೆ ಸರಕಾರದ ಹಿರಿಯ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಪರಿಷತ್ತಿನ ಗೌರವ, ಘನತೆ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ವಿಧಾನ ಪರಿಷತ್ ಸದಸ್ಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹಲವು ವಿನೂತನ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಚಿಂತಕರ ಚಾವಡಿ ಎನಿಸಿರುವ ಮೇಲ್ಮನೆಯ ಪ್ರಾಮುಖ್ಯತೆ ಹಾಗೂ ಅದರ ಘನತೆ ಹೆಚ್ಚಿಸಲು ಅಗತ್ಯ ಸುಧಾರಣೆಗಳನ್ನು ಕೈಗೊಂಡು ಆಡಳಿತ ಯಂತ್ರ ಚುರುಕುಗೊಳಿಸಲು ವಿನೂತನ ಪ್ರಯತ್ನ ನಡೆಸುತ್ತಿರುವ ಸಭಾಪತಿ ಬಸವರಾಜ ಹೊರಟ್ಟಿಯವರ ಕ್ರಮ ವ್ಯಾಪಕ ಶ್ಲಾಘನೆಗೆ ಕಾರಣವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News