ಕೃಷಿ ಕಾಯ್ದೆ ತಿದ್ದುಪಡಿ ಆಗ್ರಹಿಸಿ ಆರೆಸ್ಸೆಸ್ ಸಂಯೋಜಿತ ಭಾರತೀಯ ಕಿಸಾನ್ ಯೂನಿಯನ್‍ನಿಂದ ದೇಶವ್ಯಾಪಿ ಧರಣಿ

Update: 2021-08-20 13:19 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸಲು ಕೇಂದ್ರ ಸರಕಾರ ಕಾನೂನು ಜಾರಿಗೆ ತರಬೇಕು ಅಥವಾ ಅದಕ್ಕಾಗಿ ಕಳೆದ ವರ್ಷ ಜಾರಿಗೆ ತಂದಿರುವ ಕೃಷಿ ಕಾಯಿದೆಗಳಿಗೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿ ಆರೆಸ್ಸೆಸ್ ಸಂಯೋಜಿತ  ರೈತರ ಸಂಘಟನೆ- ಭಾರತೀಯ ಕಿಸಾನ್ ಸಂಘ್  ಸೆಪ್ಟೆಂಬರ್ 8ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲಿದೆ.

ಕಳೆದ ಹಲವಾರು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾದ ಬೇಡಿಕೆಯೂ ಇದೇ ಆಗಿದೆ.

"ಕನಿಷ್ಠ  ಬೆಂಬಲ ಬೆಲೆಯು ರೈತರಿಗೆ ಮಂಡಿಗಳಲ್ಲಿ ದೊರೆಯುತ್ತಿಲ್ಲದೇ ಇದ್ದರೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿ ಪ್ರಯೋಜನವಿಲ್ಲ" ಎಂದು ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಬದ್ರಿ ನಾರಾಯಣ್ ಚೌಧುರಿ ಹೇಳಿದ್ದಾರೆ.

"ನಮ್ಮ ಬೇಡಿಕೆಗಳಿಗೆ ಸ್ಪಂದಿಸಲು ಸರಕಾರಕ್ಕೆ ಈ ತಿಂಗಳಾಂತ್ಯದ ತನಕ ಸಮಯ ನೀಡುತ್ತೇವೆ. ಆದರೆ ಸರಕಾರ ಸಕಾರಾತ್ಮಕವಾಗಿ ಪ್ರತಿಕ್ರಿಯಿಸದೇ ಇದ್ದರೆ ನಾವು ಸೆಪ್ಟೆಂಬರ್ 8ರಂದು ರಾಷ್ಟ್ರವ್ಯಾಪಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ" ಎಂದು ಅವರು ಹೇಳಿದರು.

ಸರಕಾರವೇ ಕನಿಷ್ಠ ಬೆಂಬಲ ಬೆಲೆ ತೆತ್ತು ಕೃಷಿ ಉತ್ಪನ್ನಗಳನ್ನು ಖರೀದಿಸಬೇಕೆಂದು ನಾವು ಹೇಳುವುದಿಲ್ಲ ಆದರೆ ಉತ್ಪನ್ನಗಳನ್ನು ಖರೀದಿಸುವವರು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆ ನೀಡದಂತೆ ಸರಕಾರ ನೋಡಿಕೊಳ್ಳಬೇಕೆಂದು ಸಂಘ ಬಯಸುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News