ಝೈಡಸ್ ಕ್ಯಾಡಿಲಾದ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅನುಮತಿ: ಸರಕಾರಿ ಸಮಿತಿಯ ಶಿಫಾರಸು

Update: 2021-08-20 17:41 GMT
Photo: Ndtv.com

ಹೊಸದಿಲ್ಲಿ,ಆ.20: ಝೈಡಸ್ ಕ್ಯಾಡಿಲಾ ಅಭಿವೃದ್ಧಿಗೊಳಿಸಿರುವ 3-ಡೋಸ್ ಕೋವಿಡ್ ಲಸಿಕೆ ಝೈಕೋವ್-ಡಿ ತುರ್ತು ಬಳಕೆಗೆ ಅನುಮತಿ ನೀಡಲು ಕೇಂದ್ರ ಔಷಧಿಗಳ ಗುಣಮಟ್ಟ ನಿಯಂತ್ರಣ ಸಂಸ್ಥೆಯ ತಜ್ಞರ ಸಮಿತಿಯು ಶಿಫಾರಸು ಮಾಡಿದೆ.

ಝೈಡಸ್ ಕ್ಯಾಡಿಲಾ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ನಡೆದ ಸಭೆಯಲ್ಲಿ ಪರಿಶೀಲಿಸಿರುವ ಸಮಿತಿಯು ಅದರ ಮೂರು ಡೋಸ್ ಗಳ ಕೊರೋನ ವೈರಸ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ ಶಿಫಾರಸು ಮಾಡಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಸಮಿತಿಯ ಶಿಫಾರಸುಗಳನ್ನು ಅಂತಿಮ ಒಪ್ಪಿಗೆಗಾಗಿ ಭಾರತೀಯ ಮಹಾ ಔಷಧಿ ನಿಯಂತ್ರಕ(ಡಿಜಿಸಿಐ)ರ ಕಚೇರಿಗೆ ರವಾನಿಸಲಾಗಿದೆ.

ಅಹ್ಮದಾಬಾದ್ ಮೂಲದ ಝೈಡಸ್ ಕ್ಯಾಡಿಲಾ ತನ್ನ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಜು.1ರಂದು ಡಿಜಿಸಿಐಗೆ ಅರ್ಜಿಯನ್ನು ಸಲ್ಲಿಸಿತ್ತು. ತಾನು 50ಕ್ಕೂ ಅಧಿಕ ಕೇಂದ್ರಗಳಲ್ಲಿ ಈವರೆಗಿನ ಅತ್ಯಂತ ಬೃಹತ್ ಕ್ಲಿನಿಕಲ್ ಟ್ರಯಲ್ ನಡೆಸಿರುವುದಾಗಿ ಕಂಪನಿಯು ಹೇಳಿದೆ. ಅನುಮತಿ ಲಭಿಸಿದರೆ ಝೈಕೋವ್-ಡಿ ಭಾರತೀಯ ಕಂಪನಿಯು ಕೊರೋನವೈರಸ್ ವಿರುದ್ಧ ಅಭಿವೃದ್ಧಿಗೊಳಿಸಿರುವ ವಿಶ್ವದ ಮೊದಲ ಡಿಎನ್ಎ ಲಸಿಕೆಯಾಗಲಿದೆ ಮತ್ತು ದೇಶದಲ್ಲಿ ಬಳಕೆಗೆ ಅನುಮತಿ ಪಡೆದ ಆರನೇ ಲಸಿಕೆಯಾಗಲಿದೆ.

ದೇಶದಲ್ಲಿ ಈಗಾಗಲೇ ಸೀರಮ್ ಇನ್ಸ್ಟಿಟ್ಯೂಟ್ ನ ಕೋವಿಶೀಲ್ಡ್, ಭಾರತ್ ಬಯೊಟೆಕ್ ನ ಕೋವ್ಯಾಕ್ಸಿನ್, ರಷ್ಯದ ಸ್ಪುಟ್ನಿಕ್, ಅಮೆರಿಕದ ಮೊಡೆರ್ನಾ ಹಾಗೂ ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆಗಳು ಬಳಕೆಯಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News