ಜನಾಶೀರ್ವಾದ ಯಾತ್ರೆ ನೆಪದಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ಎಚ್.ಡಿ. ಕುಮಾರಸ್ವಾಮಿ ಆರೋಪ

Update: 2021-08-23 11:33 GMT

ಹುಬ್ಬಳ್ಳಿ, ಆ. 23: `ಗಾಳಿಯಲ್ಲಿ ಗುಂಡು ಹಾರಿಸಿ, ಹಾರ-ತುರಾಯಿ ಹಾಕಿಕೊಂಡು ಮಾಡುತ್ತಿರುವ `ಬಿಜೆಪಿ ಜನಾಶೀರ್ವಾದ ಯಾತ್ರೆ'ಯಿಂದ ರಾಜ್ಯದ ಜನರಿಗೆ ಯಾವುದೇ ಸಂದೇಶ ದೊರೆಯುತ್ತಿಲ್ಲ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಕೊರೊನ ಮಾರ್ಗಸೂಚಿಯನ್ನು ವ್ಯಾಪಕವಾಗಿ ಉಲ್ಲಂಘಿಸಲಾಗುತ್ತಿದೆ. ಕಾಂಗ್ರೆಸ್ ನಾಯಕರಿಂದಲೂ ಸಭೆ-ಸಮಾರಂಭಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆಯಾಗಿದೆ. ರಾಜಕೀಯ ನಾಯಕರಾದ ನಾವೇ ನಿಯಮ ಉಲ್ಲಂಘಿಸುತ್ತಿದ್ದೇವೆ' ಎಂದು ದೂರಿದರು.

ಯೋಜನೆಗಳ ಜಾರಿಗೆ ಹೋರಾಟ: `ಕೃಷ್ಣಾ ಮೇಲ್ದಂಡೆ ಯೋಜನೆಗೆ ಆಗ್ರಹಿಸಿ ಆಲಮಟ್ಟಿಯಿಂದ, ಮಹದಾಯಿ ಯೋಜನೆಗಾಗಿ ಬೆಳಗಾವಿಯಿಂದ ಪಾದಯಾತ್ರೆ ಮಾಡುತ್ತೇವೆ. ಎತ್ತಿನಹೊಳೆ ಅಣೆಕಟ್ಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಮಾಡಲಾಗುವುದು' ಎಂದು ಎಂದು ಕುಮಾರಸ್ವಾಮಿ ತಿಳಿಸಿದರು.

ಬಿಜೆಪಿ ಹಾಗೂ ಕಾಂಗ್ರೆಸ್ ಸೇರಿ ಎರಡೂ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ನ್ಯಾಯ ಸಿಗುತ್ತಿಲ್ಲ. ಪ್ರಾದೇಶಿಕ ಪಕ್ಷದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ. ಕೇಂದ್ರ ಸರಕಾರದ ಕಣ್ಣು ತೆರೆಸಲು ಪಾದಯಾತ್ರೆ ಮೂಲಕ ಹೋರಾಟ ಮಾಡುತ್ತೇವೆ. ಕೊರೋನ ಸೋಂಕು ಕಡಿಮೆಯಾದರೆ ಇದೇ ವಿಜಯದಶಮಿಯಿಂದ ನಮ್ಮ ಹೋರಾಟ ಆರಂಭವಾಗಲಿದೆ' ಎಂದು ಕುಮಾರಸ್ವಾಮಿ ಹೇಳಿದರು.

`14 ತಿಂಗಳ ನನ್ನ ಆಡಳಿತದಲ್ಲಿ ಉತ್ತರ ಕರ್ನಾಟಕಕ್ಕೆ ನಾನೇನು ಮಾಡಿದೆ. ಈ ಭಾಗದ ನಾಯಕರು ಏನು ಮಾಡಿದ್ದಾರೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಲಿ. ಜೆಡಿಎಸ್ ಗೆಲ್ಲುವ ಸಾಧ್ಯತೆ ಇರುವ ಕ್ಷೇತ್ರಗಳಲ್ಲಿ ಕಾರ್ಯಾಗಾರ ಮಾಡುತ್ತೇವೆ. ಹಳ್ಳಿಹಳ್ಳಿಗೂ ಹೋಗಿ ಪಕ್ಷಕ್ಕೆ ಶಕ್ತಿ ತುಂಬುತ್ತೇವೆ' ಎಂದು ಕುಮಾರಸ್ವಾಮಿ ಹೇಳಿದರು.

ಸಿದ್ದರಾಮಯ್ಯನವರಿಗೆ ಜೆಡಿಎಸ್ ಮುಗಿಸುವುದೇ ಕೆಲಸ. ಅವರು ಯಾವತ್ತೂ ಜನತಾ ಪರಿವಾರ ಅಂತ ಹೇಳಲೇ ಇಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರಲ್ಲಿ ಇನ್ನೂ ಸ್ವಲ್ಪ ಆ ಭಾವನೆ ಇದೆ. ಕಾಂಗ್ರೆಸ್ ಪರವಾಗಿ ನನ್ನ ನಿಲುವಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ 65-70 ವಾರ್ಡ್‍ಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕುತ್ತೇವೆ. ಹಲವಾರು ವಿದ್ಯಾವಂತರಿಗೆ ಟಿಕೆಟ್ ನೀಡಿದ್ದೇವೆ. ಕಲಬುರಗಿಯಲ್ಲಿ ಎಲ್ಲ ವಾರ್ಡ್‍ಗಳಿಗೂ ಅಭ್ಯರ್ಥಿಗಳನ್ನು ಹಾಕುತ್ತೇವೆ. ಆದರೆ, ಬೆಳಗಾವಿಯಲ್ಲಿ ನಮಗೆ ಸ್ವಲ್ಪ ಹಿನ್ನಡೆಯಿದೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಈ ವೇಳೆ ಮಾಜಿ ಶಾಸಕ ಕೋನರೆಡ್ಡಿ, ಗುರುರಾಜ ಹುಣಸಿಮರದ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News