ಆತಂಕದ ನಡುವೆಯೇ ಉತ್ಸಾಹದಿಂದ ಶಾಲೆ-ಕಾಲೇಜುಗಳಿಗೆ ಆಗಮಿಸಿದ ವಿದ್ಯಾರ್ಥಿಗಳು

Update: 2021-08-23 13:38 GMT

ಬೆಂಗಳೂರು, ಆ. 23: ಕೋವಿಡ್ ಮೂರನೆ ಅಲೆಯ ಆತಂಕದ ನಡುವೆಯೇ ಸೋಂಕಿನ ದೃಢ ಪ್ರಮಾಣ ಶೇ.2ಕ್ಕಿಂತ ಹೆಚ್ಚಿರುವ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಉಡುಪಿ, ಹಾಸನ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಭೌತಿಕ ತರಗತಿಗಳನ್ನು ಆರಂಭಿಸಲಾಗಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅತ್ಯಂತ ಉತ್ಸಾಹದಲ್ಲೆ ಶಾಲಾ-ಕಾಲೇಜುಗಳಿಗೆ ಆಗಮಿಸಿದರು.

ರಾಜ್ಯಾದ್ಯಂತ 9, 10ನೆ ತರಗತಿ, ಪ್ರಥಮ ಹಾಗೂ ದ್ವಿತೀಯ ಪಿಯುಸಿ ಭೌತಿಕ ತರಗತಿಗಳನ್ನು ಪ್ರಾರಂಭಿಸಲಾಯಿತು. ಒಂದೂವರೆ ವರ್ಷದಿಂದ ಶಾಲೆಗಳು ಪ್ರಾರಂಭವಾಗಿದ್ದರೂ ಕೇವಲ ಆನ್‍ಲೈನ್ ತರಗತಿಗಳಷ್ಟೇ ನಡೆದಿದ್ದವು. ಆದರೆ, ಇಂದಿನಿಂದ ಶಾಲಾ-ಕಾಲೇಜುಗಳ ಭೌತಿಕ ತರಗತಿಗಳು ಪ್ರಾರಂಭವಾದ ಹಿನ್ನೆಲೆಯಲ್ಲಿ ಮಕ್ಕಳು ಸಂತಸದಿಂದ ಶಾಲೆಗಳಿಗೆ ಆಗಮಿಸಿದರೆ, ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಮಾಸ್ಕ್, ಗುಲಾಬಿ ಹೂವು, ಬಿಸ್ಕಟ್ ನೀಡಿ ಸ್ವಾಗತಿಸಿದರು.

ರಾಜ್ಯದ ಹಲವು ಶಾಲೆಗಳನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳನ್ನು ಸಂಪೂರ್ಣ ಸ್ಯಾನಿಟೈಜ್ ಮಾಡಿ, ಪ್ರತಿ ಕೊಠಡಿಗೆ ಕನಿಷ್ಠ 20 ವಿದ್ಯಾರ್ಥಿಗಳು, ಒಂದು ಡೆಸ್ಕ್‍ಗೆ ಒಬ್ಬ ವಿದ್ಯಾರ್ಥಿ ಅಥವಾ ಇಬ್ಬರು ವಿದ್ಯಾರ್ಥಿಗಳನ್ನು ಕೂರಿಸುವ ವ್ಯವಸ್ಥೆ ಮಾಡಲಾಗಿತ್ತು. ಪಾಠ ಮಾಡುವುದರ ಜತೆಗೆ ವಿದ್ಯಾರ್ಥಿಗಳ ನಡುವೆ ಅಂತರ ಕಾಪಾಡಿಕೊಳ್ಳುವುದು, ಆಗಾಗ ಕೈ ತೊಳೆಯುವ ಬಗ್ಗೆ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದರು.

ಶಾಲಾ-ಕಾಲೇಜು ವಿದ್ಯಾರ್ಥಿಗಳ ಪ್ರವೇಶ ದ್ವಾರದಲ್ಲೇ ಮಾಸ್ಕ್, ಸ್ಯಾನಿಟೈಜರ್ ಬಳಕೆ ಬಗ್ಗೆ ಸೂಚನೆಗಳನ್ನು ನೀಡಲಾಗುತ್ತಿತ್ತು. ಈಗಾಗಲೇ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳ ಪಾಲನೆ ಬಗ್ಗೆ ಸಲಹೆ ನೀಡುತ್ತಿದ್ದರು. ಮನೆಯಿಂದಲೇ ಊಟದ ಡಬ್ಬಿ ಹಾಗೂ ಕಾಯಿಸಿ ಆರಿಸಿದ ಕುಡಿಯುವ ನೀರನ್ನು ತರುವುದು, ಬಿಸಿಯಾದ ಆಹಾರ ಪದಾರ್ಥ ಸೇವಿಸಬೇಕು, ಯಾವುದೇ ಪೆನ್, ನೋಟ್‍ಬುಕ್, ನೀರಿನ ಬಾಟಲ್ ಹಂಚಿಕೊಳ್ಳಬಾರದು ಎಂಬುದು ಸೇರಿದಂತೆ ಇನ್ನಿತರ ಸಲಹೆಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಶಾಲಾ-ಕಾಲೇಜುಗಳಿಗೆ ಬರಮಾಡಿಕೊಳ್ಳುತ್ತಿದ್ದರು.

ಒಂದೂವರೆ ವರ್ಷದಿಂದ ಮೊಬೈಲ್, ಲ್ಯಾಪ್‍ಟಾಪ್, ಐಪಾಡ್, ಇಂಟರ್‍ನೆಟ್ ಮೂಲಕ ತರಗತಿಗಳನ್ನು ನೋಡಿ ಜಡ್ಡುಗಟ್ಟಿದ್ದ ವಿದ್ಯಾರ್ಥಿಗಳು ಶಾಲೆಯ ಆವರಣವನ್ನು ಕಂಡು ಅಕ್ಷರಶಃ ಪುಳಕಿತರಾದರು. ತಮ್ಮ ಸಹಪಾಠಿಗಳೊಂದಿಗೆ ಮಾತನಾಡುತ್ತ ಸಂತಸ ಹಂಚಿಕೊಂಡರು. `ಪೋಷಕರು ಯಾವುದೇ ಕಾರಣಕ್ಕೂ ಆತಂಕ ಪಡುವುದು ಬೇಡ. ಕೋವಿಡ್ ಸೋಂಕಿನಿಂದ ಮಕ್ಕಳ ರಕ್ಷಣೆಗೆ ಸರಕಾರ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ, ಮಕ್ಕಳನ್ನು ಶಾಲೆಗೆ ಕಳುಹಿಸಿ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್ ಅವರು ಮೊದಲೇ ಅಭಯ ನೀಡಿದ್ದರು.

ಹೀಗಾಗಿ ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದುದು ಕಂಡುಬಂತು. ಕೊರೋನ ಸೋಂಕಿನ ಮೊದಲನೆ ಮತ್ತು ಎರಡನೆ ಅಲೆಯಲ್ಲಿ ಸಂಭವಿಸಿದ ಅಪಾರ ಸಾವು-ನೋವಿನ ಹಿನ್ನೆಲೆಯಲ್ಲಿ ಶಾಲಾ ಸಿಬ್ಬಂದಿ ಮಕ್ಕಳ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು. ಎಲ್ಲ ಶಾಲಾ-ಕಾಲೇಜುಗಳ ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಜರ್ ಮುಂತಾದ ಕ್ರಮಗಳನ್ನು ಪಾಲಿಸಲಾಗುತ್ತಿತ್ತು. ಶಾಲಾ ಆವರಣದಲ್ಲಿ ಅಂತರ ಕಾಪಾಡಿಕೊಳ್ಳಲು ಬಾರಿಕೇಡ್‍ಗಳನ್ನು ನಿರ್ಮಾಣ ಮಾಡಲಾಗಿತ್ತು.

ಕೆಲವು ಕಾಲೇಜುಗಳಲ್ಲಿ ಆರೋಗ್ಯ ತಪಾಸಣಾ ಕೌಂಟರ್‍ಗಳನ್ನು ಸ್ಥಾಪನೆ ಮಾಡಲಾಗಿತ್ತು. ಆಕಸ್ಮಿಕವಾಗಿ ಯಾವುದೇ ವಿದ್ಯಾರ್ಥಿಗಳಲ್ಲಿ ಅನಾರೋಗ್ಯದ ಪರಿಸ್ಥಿತಿ ಕಂಡುಬಂದರೆ ಕೂಡಲೇ ಅವರ ಆರೋಗ್ಯ ತಪಾಸಣೆ ನಡೆಸಲು ಆರೋಗ್ಯ ಕೌಂಟರ್‍ಗಳನ್ನು ತೆರೆಯಲಾಗಿತ್ತು. ಶಾಲೆಗಳಿಗೆ ಬರಲು ಹಿಂಜರಿಯುವವರಿಗೆ ಆನ್‍ಲೈನ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಶಿಕ್ಷಣ ಇಲಾಖೆ ಆಯುಕ್ತರು, ಅಧಿಕಾರಿಗಳು, ಕೋವಿಡ್ ಮಾರ್ಗಸೂಚಿ ಪಾಲನೆ ಬಗ್ಗೆ ಹಲವು ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News