ರಾಷ್ಟ್ರೀಯ ಶಿಕ್ಷಣ ನೀತಿ ಪೂರ್ಣ ಅನುಷ್ಠಾನಕ್ಕೆ ಹತ್ತು ವರ್ಷ ಕಾಲಾವಕಾಶ ಅಗತ್ಯ: ಸಚಿವ ಡಾ.ಅಶ್ವತ್ಥ ನಾರಾಯಣ

Update: 2021-08-27 17:25 GMT

ಬೆಂಗಳೂರು, ಆ. 27: `ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‍ಇಪಿ) 2020ರ ಪೂರ್ಣ ಪ್ರಮಾಣದ ಅನುಷ್ಟಾನಕ್ಕೆ ಇನ್ನೂ ಹತ್ತು ವರ್ಷಗಳ ಕಾಲಾವಕಾಶ ಬೇಕಾಗುತ್ತದೆ' ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಹೇಳಿದ್ದಾರೆ.

ಶುಕ್ರವಾರ ಇಲ್ಲಿನ ಉನ್ನತ ಶಿಕ್ಷಣ ಪರಿಷತ್ ಸಭಾಂಗಣದಲ್ಲಿ ರಾಜ್ಯದ ದಿನಪತ್ರಿಕೆಗಳ ಸಂಪಾದಕರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, `ರಾಷ್ಟ್ರೀಯ ಶಿಕ್ಷಣ ನೀತಿ(ಎನ್‍ಇಪಿ) ಪೂರ್ಣ ಪ್ರಮಾಣದ ಜಾರಿಗೆ ಇನ್ನೂ ಹದಿನೈದು ವರ್ಷಗಳ ಕಾಲಾವಕಾಶವಿದೆ. ಆದರೆ, ರಾಜ್ಯ ಸರಕಾರ ಇನ್ನೂ 10 ವರ್ಷಗಳ ಒಳಗಾಗಿ ಆ ಗುರಿಯನ್ನು ಮುಟ್ಟಲಿದೆ' ಎಂದು ಭರವಸೆ ವ್ಯಕ್ತಪಡಿಸಿದರು.

`ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸಾಮಾನ್ಯ ಶಿಕ್ಷಣದಲ್ಲಿ ಎನ್‍ಇಪಿ ಅನುಷ್ಠಾನಗೊಳಿಸುತ್ತಿದ್ದು, ಪ್ರಾಥಮಿಕ ಹಂತದಿಂದಲೂ ಇದೇ ವರ್ಷದಿಂದ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಆ ನಿಟ್ಟಿನಲ್ಲಿ ಸಿದ್ಧತೆ ಆರಂಭವಾಗಿದೆ. ಮುಂದಿನ ವರ್ಷದಿಂದ ಸ್ನಾತಕೋತ್ತರದಲ್ಲಿ ಅನುಷ್ಠಾನಗೊಳಿಸಲಿದ್ದು, ವಿಶ್ವ ವಿದ್ಯಾಲಯ ಹಾಗೂ ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ, ಶಿಕ್ಷಕರನ್ನು ತರಬೇತಿಗೊಳಿಸಲು ಕ್ರಮ ವಹಿಸಲಾಗುತ್ತಿದೆ' ಎಂದು ಡಾ.ಅಶ್ವತ್ಥ ನಾರಾಯಣ ತಿಳಿಸಿದರು.

ಸದ್ದಿಲ್ಲದೆ ಕ್ರಾಂತಿ: `ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ರಾಜ್ಯ ಸರಕಾರ ಅಗತ್ಯ ಎಲ್ಲ ರೀತಿಯ ಪೂರ್ವ ಸಿದ್ಧತೆ ಮಾಡಿಕೊಂಡಿದ್ದು, ಅನುಷ್ಠಾನಕ್ಕೆ ಮುಂದಾಗಿದೆ. ಈ ಮಧ್ಯೆ ಕೆಲ ಸಮಸ್ಯೆಗಳು, ಕೆಲ ತೊಡಕುಗಳು ಬರುತ್ತಿದ್ದು, ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಯಾವುದೇ ರೀತಿಯಲ್ಲಿ ಎನ್‍ಇಪಿ ಅನುಷ್ಠಾನಕ್ಕೆ ಸರಕಾರ ತರಾತುರಿ ಕ್ರಮ ವಹಿಸಿಲ್ಲ' ಎಂದು ಡಾ.ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದರು.

`ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಶೈಕ್ಷಣಿಕ ಸಂಸ್ಥೆಗಳ ಸ್ವಾಯತ್ತತೆಯ ಜೊತೆಗೆ ಸಂಬಂಧಿಸಿದ ಆಡಳಿತಾತ್ಮಕ ವಿಕೇಂದ್ರಿಕರಣಕ್ಕೂ ಒತ್ತು ನೀಡುತ್ತದೆ. ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದೇ ಸ್ವಾಯತ್ತತೆ ಮತ್ತು ವಿಕೇಂದ್ರಿಕರಣದ ಆಶಯವಾಗಿದೆ. ನೂತನ ಶಿಕ್ಷಣ ಅನುಷ್ಠಾನದಿಂದ ದೇಶ ಮತ್ತು ರಾಜ್ಯದಲ್ಲಿ ಸದ್ದಿಲ್ಲದೆ ಕ್ರಾಂತಿಯಾಗುತ್ತಿದೆ ಎಂದು ಅವರು ತಿಳಿಸಿದರು.

`ಸುದೀರ್ಘ ಸಮಾಲೋಚನೆ ಹಾಗೂ ಸಾವಿರಾರು ಜನರ ಸಲಹೆಗಳನ್ನು ಕ್ರೋಡೀಕರಿಸಿ ಎನ್‍ಇಪಿ ಕರಡು ರೂಪಿಸಲಾಗಿದೆ. ಇದು ನಮ್ಮ ತನವನ್ನು ಉಳಿಸಿಕೊಂಡೇ ಜಾಗತಿಕ ಪೈಪೋಟಿಯಲ್ಲಿ ಯಶಸ್ವಿಯಾಗಬೇಕೆಂಬ ಆಶಯವನ್ನಿಟ್ಟುಕೊಂಡಿದೆ. ಪದವಿ ಹಂತದಲ್ಲಿ ಎರಡು ವರ್ಷಗಳ ಅವಧಿಗೆ ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡಿರುವುದರ ಜೊತೆಗೆ ಉನ್ನತ ಶಿಕ್ಷಣದ ಕೋರ್ಸ್‍ಗಳನ್ನು ಪ್ರಾದೇಶಿಕ ಭಾಷೆಯಲ್ಲೂ ಬಹುದಾಗಿದ್ದು, ಇದರಿಂದ ನಮ್ಮ ಭಾಷೆಯೂ ಬಲಗೊಳ್ಳಲಿದೆ ಎಂದು ಹೇಳಿದರು.

`ಸರಕಾರಿ ವ್ಯವಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ, ವಿದ್ಯಾರ್ಥಿಗಳಿಗೆ ಕಲಿಕೆಗೆ ಹೆಚ್ಚಿನ ಅವಕಾಶ ಹಾಗೂ ಬೋಧಕರಿಗೆ ತಮ್ಮ ಸಾಮಥ್ರ್ಯ ಹೆಚ್ಚಿಸಿಕೊಳ್ಳಲು ಅನುವು ನೀಡಲಿದೆ. ಕೇವಲ ಪಠ್ಯಕ್ಕೆ ಸೀಮಿತಗೊಳ್ಳದೆ ವಿದ್ಯಾರ್ಥಿಗಳ ಸೃಜನಶೀಲ ಬೆಳವಣಿಗೆಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ನೆರವಾಗಲಿದೆ. ಆ ನಿಟ್ಟಿನಲ್ಲಿ ಸರಕಾರ ಸರಿಕಾರಿ ಶಾಲೆಗಳ ಮೂಲ ಸೌಲಭ್ಯ ಹೆಚ್ಚಳಕ್ಕೆ, ಆಧುನಿಕ ತಾಂತ್ರಿಕತೆ ಅಳವಡಿಕೆಗೆ ಒತ್ತು ನೀಡಲಾಗಿದೆ ಎಂದರು.

`ಒಟ್ಟಾರೆ ಜಿಎಸ್‍ಡಿಪಿಯ ಶೇ.6ರಷ್ಟು ಸಂಪನ್ಮೂಲವನ್ನು ಶಿಕ್ಷಣಕ್ಕೆ ನೀಡಬೇಕೆಂಬ ಗುರಿ ಇದೆ. ಆದರೆ, ಪ್ರಸ್ತುತ ಶೇ.1.8ರಷ್ಟು ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ನೆರವು ಶಿಕ್ಷಣಕ್ಕೆ ಅಗತ್ಯವಿದೆ. ಆದರೆ, ಇದೇ ಸಂದರ್ಭದಲ್ಲಿ ಈಗಾಗಲೇ ಸೃಷ್ಟಿಸಿರುವ ಮೂಲಸೌಕರ್ಯಗಳ ಸದ್ಬಳಕೆ ಮಾಡಿಕೊಳ್ಳಲು ಈ ನೀತಿಯಲ್ಲಿ ಒತ್ತು ನೀಡಲಾಗಿದೆ. ಜೊತೆಗೆ ಕೈಗಾರಿಕೆಗಳೊಂದಿಗೆ ಹೊಂದಾಣಿಕೆ ಮೂಲಕ ಶಿಕ್ಷಣ ವ್ಯವಸ್ಥೆ ಸಬಲೀಕರಣಕ್ಕೆ ಆಸ್ಥೆ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸುಧಾರಣೆ ನಿರಂತರ ಪ್ರಕ್ರಿಯೆ: ಶಿಕ್ಷಣ ವ್ಯವಸ್ಥೆಯ ಸುಧಾರಣೆ ಒಂದು ನಿರಂತರ ಪ್ರಕ್ರಿಯೆ. ಆ ನಿಟ್ಟಿನಲ್ಲಿ ಎನ್‍ಇಪಿ ಜಾರಿ ಮೂಲಕ ಆರಂಭಿಸಲಾಗಿದೆ. ಇಲ್ಲವಾದರೆ ನಾವು ಸ್ಥಗಿತದ ಸ್ಥಿತಿಯಲ್ಲೇ ಇರಬೇಕಾಗುತ್ತದೆ. ಈ ಹಿಂದಿನ ಸರಕಾರಗಳು ಈ ನೀತಿಯನ್ನು ಒಪ್ಪಿಕೊಂಡಿದ್ದವು. ಅನುಷ್ಠಾನಕ್ಕೆ ನಮ್ಮ ಸರಕಾರ ಮುಂದಾಗಿದೆ. ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ನೀತಿ ಜಾರಿಗೆ ಕಾನೂನು ಬಲವು ಇದೆ ಎಂದು ಡಾ.ಅಶ್ವತ್ಥ ನಾರಾಯಣ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲ ಜೋಶಿ, ಹಿರಿಯ ಪತ್ರಕರ್ತರಾದ ಹುಣಸವಾಡಿ ರಾಜನ್, ರವಿ ಹೆಗಡೆ, ರವೀಂದ್ರ ಭಟ್, ವಿಶ್ವೇಶ್ವರ ಹೆಗಡೆ, ವಿಶ್ವೇಶ್ವರ ಭಟ್, ಹರಿಪ್ರಕಾಶ್ ಕೋಣೆಮನೆ, ಬಸವರಾಜ ಮೇಗಲಕೇರಿ, ಗಣೇಶ್ ಹಾಗೂ ಭಾಗ್ಯಶ್ರೀ ಸೇರಿದಂತೆ ವಿವಿಧ ಪತ್ರಿಕೆಗಳ ಸಂಪಾದಕರು ಸಂವಾದದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News