ಅಸಹನೆಯ ಹಲವು ರೂಪಗಳು

Update: 2021-08-27 19:30 GMT

 ‘ರಿಲಿಜನ್ ಇನ್ ಇಂಡಿಯಾ: ಟಾಲರೆನ್ಸ್ ಆ್ಯಂಡ್ ಸೆಗ್ರಿಗೇಷನ್’ ಎಂಬ ಶೀರ್ಷಿಕೆಯ ದಿ ಪ್ಯೂ ರಿಸರ್ಚ್ ಸೆಂಟರ್‌ನ ವರದಿ (ಜೂನ್ 2021) ಹಲವಾರು ವಿಮರ್ಶಾತ್ಮಕ ಲೇಖನಗಳ ಬರವಣಿಗೆಗೆ ಕಾರಣವಾಗಿದೆ. ಬಹುತೇಕ ಲೇಖನಗಳು ಪ್ಯೂ ಸಮೀಕ್ಷೆಯನ್ನು ಹಿಂದೂ-ಮುಸ್ಲಿಮ್ ಸಂಬಂಧಗಳ ಕುರಿತಾದ ಸಮೀಕ್ಷೆ ಎಂದೇ ಗ್ರಹಿಸಿ ಮುಂದುವರಿಯುತ್ತವೆ. ಆದರೆ ಆ ಸಮೀಕ್ಷೆಯು ಇತರ ನಾಲ್ಕು ಪ್ರಮುಖ ಧರ್ಮಗಳಾದ ಕ್ರಿಶ್ಚಿಯನ್, ಸಿಖ್, ಜೈನ ಹಾಗೂ ಬೌದ್ಧ ಧರ್ಮಗಳಿಗೆ ಸಂಬಂಧಿಸಿದ ದತ್ತಾಂಶಗಳನ್ನೂ ನೀಡುತ್ತದೆ. ಒಟ್ಟಿನಲ್ಲಿ ಆ ಲೇಖನಗಳು ಭಾರತದ ಸಾಮಾಜಿಕ ವ್ಯವಸ್ಥೆಯ ಮೇಲೆ ಹಿಂದುತ್ವ ರಾಜಕಾರಣದ ಹೆಚ್ಚುತ್ತಿರುವ ಪ್ರಭಾವವನ್ನು ದೃಢಪಡಿಸುತ್ತವೆ. ಅದೇನಿದ್ದರೂ ಪ್ಯೂ ವರದಿಗೆ ಆಧಾರವಾಗಿರುವ ಪರಿಕಲ್ಪನೆಗಳನ್ನು ವಿಶ್ಲೇಷಿಸಿದರೆ ಭಾರತದಲ್ಲಿ ಸಹನೆಯ ಪರಿಕಲ್ಪನೆಗೆ ಇರುವ ಇನ್ನೊಂದು ಭಿನ್ನವಾದ ಮುಖ ಗೋಚರಿಸುತ್ತದೆ.

ಉದಾಹರಣೆಗೆ ಸಹನೆ ಎಂಬುದನ್ನು ಪ್ರಾಥಮಿಕವಾಗಿ ಅಂತರ್ ಧಾರ್ಮಿಕ ಪ್ರಶ್ನೆಗಳಿಗೆ ಸಂಬಂಧಿಸಿ ಬಳಸಿರುವುದು ಕಂಡುಬರುತ್ತದೆ. ಭಾರತದಲ್ಲಿ ನಡೆಯುವ ಚರ್ಚೆಯಲ್ಲಿ 2015ರಲ್ಲಿ ಮುಹಮ್ಮದ್ ಅಖ್ಲಾಕ್‌ರನ್ನು ಗುಂಪು ಥಳಿತಕ್ಕೆ ಗುರಿ ಮಾಡಿದ ಬಳಿಕ ಸಹನೆಯ ಪರಿಕಲ್ಪನೆ ಬಹಳಷ್ಟು ಮುನ್ನೆಲೆಗೆ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಹಿಂದೂಗಳ ಹಾಗೂ ಮುಸ್ಲಿಮರ ನಡುವಿನ ಪೂರ್ವಾಗ್ರಹ ಅಥವಾ ಹಿಂಸೆಯ ಕುರಿತಾದ ಚರ್ಚೆಗಳಲ್ಲಿ ‘ಕೋಮುವಾದಿ’ ಅಥವಾ ‘ಕೋಮು’ ಎಂಬ ಶಬ್ದದ ಜಾಗದಲ್ಲಿ ‘ಸಹನೆ’ ಎಂಬ ಶಬ್ದ ಹೆಚ್ಚು ಹೆಚ್ಚಾಗಿ ಬಳಸಿಕೊಂಡಿರುವುದು ಕಂಡುಬರುತ್ತದೆ. ಈ ಎರಡು ಶಬ್ದಗಳ ಸಾಂದರ್ಭಿಕ ಅರ್ಥಗಳಲ್ಲಿ ತೋರಿಕೆಗೆ ಬಹಳ ವ್ಯತ್ಯಾಸ ಕಾಣಿಸುವುದಿಲ್ಲವಾದರೂ ಇವೆರಡೂ ಸಮಾನಾರ್ಥಕ ಶಬ್ದಗಳಲ್ಲ. ಬಲಪಂಥೀಯ ಹಿಂದೂ (ದಿ ಹಿಂದೂ ರೈಟ್) ಪರಿಕಲ್ಪನೆಯ ಸುತ್ತ ನಡೆಯುವ ದೊಡ್ಡ ಸ್ವರದ ರಾಜಕೀಯ ಚರ್ಚೆಯಲ್ಲಿ ಈ ಹಿಂದಿನ ಕೋಮುವಾದಿಗಳು (ಕಮ್ಯುನಲಿಸ್ಟ್) ನವ ರಾಷ್ಟ್ರೀಯವಾದಿಗಳು (ನ್ಯಾಶನಲಿಸ್ಟ್) ಆಗಿದ್ದಾರೆ. ವಿಶೇಷವಾಗಿ ಹಿಂದೂ ರಾಷ್ಟ್ರವಾದಿಗಳಾಗಿದ್ದಾರೆ. 1920ರ ದಶಕದ ಲಾಗಾಯ್ತು ದಿ ಹಿಂದೂ ರೈಟ್ ನಡೆಸಿಕೊಂಡು ಬಂದಿರುವ ವ್ಯವಸ್ಥಿತವಾದ ಪ್ರಚಾರ ಯಂತ್ರದಿಂದಾಗಿ ಇದು ಸಾಧ್ಯವಾಗಿದೆ. ಆಶ್ಚರ್ಯದ ಸಂಗತಿಯೆಂದರೆ ಹಲವು ಬಣ್ಣಗಳ/ರೀತಿಯ ಸೆಕ್ಯುಲರ್ ವಾದಿಗಳು ಈ ಬೋನಿಗೆ ಬಿದ್ದಿದ್ದಾರೆ. ಅವರು ಕೂಡ ‘ಸಹನೆ’ ಎಂಬ ಶಬ್ದದ ಬಳಕೆಯನ್ನು ಸಂಪೂರ್ಣವಾಗಿ ಸಹಜ, ನಾರ್ಮಲ್ ಎಂದು ಸ್ವೀಕರಿಸಿದ್ದಾರೆ.

ಭಾರತ ಸೈದ್ಧಾಂತಿಕವಾಗಿ ಒಂದು ಸಹನಶೀಲ ದೇಶವಾಗಿದೆ. ಅದು ಈಗ ನಿರ್ದಿಷ್ಟವಾಗಿ 2014ರ ಬಳಿಕ ಹೆಚ್ಚು ಹೆಚ್ಚು ಅಸಹನಾಶೀಲವಾಗುತ್ತಿದೆ ಎಂದೂ ವಾದಿಸಲಾಗಿದೆ. ಈ ಹಿಂದೆ ಭಾರತೀಯರು ಸಹನಶೀಲರಾಗಿದ್ದುದರಿಂದ, ಅವರು ಈಗಲೂ ಮತ್ತು ಮುಂದೆ ಭವಿಷ್ಯದಲ್ಲಿಯೂ ಸಹನಶೀಲರಾಗಿರಬೇಕು. ಉದಾರವಾದಿಗಳ ಪ್ರಕಾರ ಸಹನೆಯ ಮಹತ್ವದ ಬಗ್ಗೆ ಭಾರತೀಯರಿಗೆ ಮನವರಿಕೆ ಮಾಡಿಸಲು ಈ ರೀತಿಯ ವಾದ ಅತ್ಯಂತ ಸೂಕ್ತವಾಗಿದೆ. ಪ್ಯೂ ಸಮೀಕ್ಷೆ ಕೂಡ ಈ ರೀತಿಯ ಚಿಂತನಾ ವಿಧಾನವನ್ನು ಎತ್ತಿ ಹಿಡಿಯುತ್ತದೆ.

ಆದರೆ ಭಾರತ ಐತಿಹಾಸಿಕವಾಗಿ ನಿಜವಾಗಿಯೂ ಒಂದು ಸಹನಾಶೀಲ ದೇಶವಾಗಿತ್ತೆ?. ಭಾರತದಲ್ಲಿ ಶತಶತಮಾನಗಳಿಂದ ಅಸ್ಪೃಶ್ಯತೆಯನ್ನು ಆಚರಿಸಿಕೊಂಡು ಬರಲಾಗಿದೆ ಮತ್ತು ಅದು ಈಗ ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರಲ್ಲೂ ಆಚರಣೆಯಲ್ಲಿದೆ. ಅಸ್ಪಶ್ಯತೆ ಮತ್ತು ಸಹನೆಗೆ ಏನು ಸಂಬಂಧವಿದೆ ಎಂದು ನಾವು ಕೇಳಬಹುದು. ಹೇಗೆ ನೋಡಿದರೂ ಅಸ್ಪೃಶ್ಯತೆಯೆಂಬುದು ತೀವ್ರವಾದ ಅಸಹನೆ ಅಲ್ಲದೆ ಬೇರೇನೂ ಅಲ್ಲ. ಹೀಗಿರುವಾಗ ಭಾರತ ಐತಿಹಾಸಿಕವಾಗಿ ಒಂದು ಸಹನಶೀಲ ದೇಶ ವಾಗಿತ್ತೆಂದು ವಾದಿಸುವುದು ಹೇಗೆ ಸಾಧ್ಯ? ವಿಚಿತ್ರವೆಂದರೆ ಸಹನೆಯನ್ನು ಜಾತಿಯೊಂದಿಗೆ ನಾವು ಸಮೀಕರಿಸುವುದಿಲ್ಲ. ಜಾತಿವ್ಯವಸ್ಥೆಯನ್ನು ಒಂದು ಅಂತರ್ ಧಾರ್ಮಿಕ ಸಮುದಾಯಗಳ ಪ್ರಶ್ನೆ ಎಂದೇ ಪರಿಗಣಿಸಲಾಗುತ್ತಿದೆ. ಆದರೆ ಜಾತಿ ಮತ್ತು ಅಸಹನೆಯ ಪರಿಕಲ್ಪನೆ, ವಿಚಾರ ಪರಸ್ಪರ ಗಟ್ಟಿಯಾಗಿ ತಳಕುಹಾಕಿಕೊಂಡಿವೆ-ಐತಿಹಾಸಿಕವಾಗಿ ಭೌತಿಕವಾಗಿ ಹಾಗೂ ವೈಚಾರಿಕವಾಗಿ ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರ ಬಗ್ಗೆ ಅಸಹನೆ ತೋರುವ ಭಾರತೀಯ ಹಿಂದೂ ಸಮಾಜದ ಪ್ರಬಲ ಗುಂಪುಗಳು ದಲಿತರ ವಿರುದ್ಧ ಕೂಡ ಅದೇ ಅಸಹನೆಯನ್ನು ಸಂಘಟಿತ ರೀತಿಯಲ್ಲಿ ಒಂದು ಪದ್ಧತಿಯಾಗಿ ಆಚರಿಸುತ್ತಾ ಬಂದಿವೆ. ಇದನ್ನು ದಲಿತರು ಐತಿಹಾಸಿಕವಾಗಿ ಕೀಳು(ಇಂಪೀರಿಯರ್), ಆದರೆ ಮುಸ್ಲಿಮರು ಐತಿಹಾಸಿಕವಾಗಿ ದಮನಕಾರಿಗಳು, ಹಿಂಸಾವಾದಿಗಳು ಮತ್ತು ನಿಷ್ಠೆ ಇಲ್ಲದವರು ಎಂಬ ನೆಲೆಯಲ್ಲಿ ಸಮರ್ಥಿಸಲಾಗುತ್ತದೆ. ಸತ್ಯ ಸಂಗತಿಯೆಂದರೆ ಭಾರತದಲ್ಲಿ ಜಾತಿವ್ಯವಸ್ಥೆ ಅಸಹನೆಯ ಹಾಗೂ ವಿಭಜನೆಯ, ಪ್ರತ್ಯೇಕತೆಯ ದೀರ್ಘಕಾಲಿಕ ಮೂಲ ಮತ್ತು ಇತರ ಎಲ್ಲವೂ ಅದರಿಂದಲೇ ಬಂದಿದೆ. ಎಲ್ಲಿಯವರೆಗೆ ಜಾತಿ ಮತ್ತು ಅಸಹನೆಗೆ ಇರುವ ಈ ಸಂಬಂಧವನ್ನು, ಕೊಂಡಿಯನ್ನು ನಾವು ಗುರುತಿಸುವುದಿಲ್ಲವೋ ಅಲ್ಲಿಯವರೆಗೆ ಭಾರತದಲ್ಲಿ ದಿನೇದಿನೆ ಹೆಚ್ಚುತ್ತಿರುವ ಅಸಹನೆಯನ್ನು ಅರ್ಥ ಮಾಡಿಕೊಳ್ಳುವ ಯಾವುದೇ ಪ್ರಯತ್ನ ಮೇಲುಮೇಲಿನ ಹಾಗೂ ತಪ್ಪುಹಾದಿಗೆಳೆಯುವ ಪ್ರಯತ್ನವಾಗಿರುತ್ತದೆ. ಪ್ಯೂ ಸಮೀಕ್ಷೆ ಈ ಭಾರೀ ದೊಡ್ಡ ತಪ್ಪನ್ನು ಮಾಡಿದಂತೆ ಕಾಣುತ್ತದೆ. ಜಾತಿಗೆ ಈ ಸಮೀಕ್ಷೆಯು ನೀಡಿರುವ ಸೀಮಿತ ಜಾಗದಲ್ಲಿ ಅದು ಈ ಕೊಂಡಿಯನ್ನು ಗುರುತಿಸುವುದೂ ಇಲ್ಲ. ಅದು ಯಾವ ಸೈದ್ಧಾಂತಿಕ ಚೌಕಟ್ಟನ್ನು ಆಧರಿಸಿ ತನ್ನ ಗಂಭೀರವಾದ ತೀರ್ಮಾನಗಳನ್ನು, ಅಭಿಪ್ರಾಯಗಳನ್ನು ನೀಡುತ್ತದೋ ಆ ಸೈದ್ಧಾಂತಿಕ ಚೌಕಟ್ಟಿಗೆ ಈ ಕೊಂಡಿಯನ್ನು ಪರಿಚಯಿಸುವುದೂ ಇಲ್ಲ, ಪರಿಗಣಿಸುವುದೂ ಇಲ್ಲ ಮತ್ತು ವಿಚಿತ್ರವೆಂದರೆ ಅದು ಬಹುಸಂಖ್ಯಾತ ಭಾರತೀಯರು ವ್ಯಾಪಕವಾದ ಜಾತಿ ತಾರತಮ್ಯಕ್ಕೆ ಗುರಿಯಾಗುವುದಿಲ್ಲ ಅವರಿಗೆ ಇಂತಹ ತಾರತಮ್ಯದ ಅನುಭವ ಆಗುವುದಿಲ್ಲ ಎಂದು ಹೇಳುತ್ತದೆ.

(ಲೇಖಕರು ಜಾಮಿಯಾ ಕೇಂದ್ರ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರು)
ಕೃಪೆ: TheHindu

Writer - ಶೇಖ್ ಮುಜೀಬುರ್ರಹ್ಮಾನ್,

contributor

Editor - ಶೇಖ್ ಮುಜೀಬುರ್ರಹ್ಮಾನ್,

contributor

Similar News