ಸುಲ್ತಾನ್‍ಪುರ್ ಅನ್ನು ಕುಶ್ ಭವನ್‍ಪುರ್ ಎಂದು ಮರುನಾಮಕರಣಗೊಳಿಸಲಿರುವ ಉತ್ತರ ಪ್ರದೇಶ ಸರಕಾರ

Update: 2021-08-28 14:22 GMT

ಸುಲ್ತಾನಪುರ್: ಉತ್ತರಪ್ರದೇಶ ಸರಕಾರವು ಸುಲ್ತಾನ್‍ಪುರ ಜಿಲ್ಲೆಯ ಹೆಸರನ್ನು ಶ್ರೀ ರಾಮನ ಪುತ್ರ ಕುಶ ನ ನೆನಪಿಗಾಗಿ ಕುಶ್ ಭವನ್‍ಪುರ್ ಎಂದು ಮರುನಾಮಕರಣಗೊಳಿಸಲು ಸಿದ್ಧತೆ ನಡೆಸುತ್ತಿದೆ, ಎಂದು ಸುಲ್ತಾನ್‍ಪುರ್ ಮುನಿಸಿಪಲ್ ಕೌನ್ಸಿಲ್ ಅಧ್ಯಕ್ಷೆ ಬಬಿತಾ ಜೈಸ್ವಾಲ್ ಹೇಳಿದ್ದಾರೆ.

ಈ ಕುರಿತಾದ ಪ್ರಸ್ತಾವನೆಯನ್ನು ಮುನಿಸಿಪಲ್ ಕೌನ್ಸಿಲ್‍ನ ಜನವರಿ 6, 2018ರ ಸಭೆಯಲ್ಲಿ ಅಂಗೀಕರಿಸಿ ಸರಕಾರಕ್ಕೆ ಕಳುಹಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿಲ್ಲೆಗೆ ಮೂರು ತಿಂಗಳ ಹಿಂದೆ ಭೇಟಿ ನೀಡಿದ್ದ ಸಂದರ್ಭ, ಜಿಲ್ಲೆಯ ಹೆಸರನ್ನು ಬದಲಾಯಿಸಬೇಕೆಂದು ಕೋರಿ ಅವರಿಗೆ ಮನವಿಯನ್ನೂ ಸಲ್ಲಿಸಲಾಗಿತ್ತು ಎಂದು ಅವರು ಹೇಳಿಕೊಂಡರು.

ಸುಲ್ತಾನ್‍ಪುರ್‍ನ ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರ  ಮಾಧ್ಯಮ ಉಸ್ತುವಾರಿ ವಿಜಯ್ ಸಿಂಗ್ ರಘುವಂಶಿ ಪ್ರತಿಕ್ರಿಯಿಸಿ, "ಈ ಕುರಿತಂತೆ ಸ್ಥಳೀಯರು  ಸಂಸದೆಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆಕೆ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದರು. ಹೆಸರು ಬದಲಾವಣೆಗೆ ಕಂದಾಯ ಮಂಡಳಿಯೂ ಹಸಿರು ನಿಶಾನೆ ನೀಡಿದೆ" ಎಂದಿದ್ದಾರೆ.

ಅಯ್ಯೋಧ್ಯೆಗೆ ಹತ್ತಿರದಲ್ಲಿಯೇ ಇರುವ ಸುಲ್ತಾನ್‍ಪುರ್ ಜಿಲ್ಲೆ ರಾಮಾಯಣ ಕಾಲದಲ್ಲಿ ದಕ್ಷಿಣ್ ಕೋಸಲ ಇದರ ರಾಜಧಾನಿಯಾಗಿತ್ತು ಎಂದು ಹೇಳಲಾಗಿದೆ. ಪುರಾಣದ ಪ್ರಕಾರ ಶ್ರೀ ರಾಮ ತನ್ನ ಹಿರಿಯ ಪುತ್ರ ಕುಶನಿಗೆ  ದಕ್ಷಿಣ ಕೋಸಲ ನೀಡಿದ ನಂತರ ಆತ  ಗೋಮತಿ ನದಿ ತೀರದಲ್ಲಿ ಹೊಸ ರಾಜಧಾನಿ ನಿರ್ಮಿಸಿದ್ದು ಅದನ್ನು ಕುಶ್ ಭವನ್‍ಪುರ್ ಎಂದು ಹೆಸರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News