'ಜಾತಿ ಗಣತಿ ವರದಿ' ಮತ ಕ್ರೋಡೀಕರಣದ ತಂತ್ರವಾಗಿತ್ತಲ್ಲವೇ?: ಸಿದ್ದರಾಮಯ್ಯರಿಗೆ ಬಿಜೆಪಿ ಪ್ರಶ್ನೆ

Update: 2021-08-28 13:29 GMT

ಬೆಂಗಳೂರು, ಆ. 28: `ಕೇಂದ್ರ ಸರಕಾರ ಒಬಿಸಿ ಕಾಯ್ದೆಗೆ ಸಂವಿಧಾನಿಕ ತಿದ್ದುಪಡಿ ತಂದಿದ್ದು ತರಾತುರಿಯಲ್ಲಲ್ಲ. ಹಿಂದುಳಿದ ವರ್ಗದ ಸರ್ವತೋಮುಖ ಏಳಿಗೆಗಾಗಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ತಿದ್ದುಪಡಿ ಮಸೂದೆ ಮಂಡನೆಯಾದಾಗ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದ ಕಾಂಗ್ರೆಸ್ಸಿಗರೂ ಕಲಾಪದಲ್ಲಿ ಭಾಗವಹಿಸಿದ್ದು ನೆನಪಿದೆಯೇ ಸಿದ್ದರಾಮಯ್ಯ? ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, `ಯಾವ ಕ್ಷೇತ್ರದಲ್ಲಿ ಯಾವ ಯಾವ ಜಾತಿಯ ಜನರು ಎಷ್ಟಿದ್ದರು ಎಂಬ ಜಾತಿ ಗಣತಿ ವರದಿಯ ಆಯ್ದ ಭಾಗಗಳನ್ನು 2018ರ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಮುತುವರ್ಜಿಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಬೀದಿ ಬೀದಿಯಲ್ಲಿ ಮಾರಾಟ ಮಾಡಿದರು. ಇದಕ್ಕಾಗಿಯೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ವರದಿ ಸಿದ್ಧಪಡಿಸಲಾಗಿತ್ತೇ?' ಎಂದು ಪ್ರಶ್ನಿಸಿದೆ.

`ತಮ್ಮ ಆಡಳಿತಾವಧಿಯ ಮಧ್ಯಭಾಗದಲ್ಲಿ ಸಿದ್ದರಾಮಯ್ಯ ಅವರು ಜಾತಿಗಣತಿಗೆ ಆದೇಶ ನೀಡಿದ್ದರು. ಇದರ ಉದ್ದೇಶ ತಳ ಸಮುದಾಯದ ಕಲ್ಯಾಣವಾಗಿರಲಿಲ್ಲ. ಬದಲಾಗಿ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಕ್ರೋಡೀಕರಣದ ತಂತ್ರವಾಗಿತ್ತಲ್ಲವೇ? ಆದರೂ, ಮಾಡಿದ ಕರ್ಮದಿಂದ ಸ್ವ ಕ್ಷೇತ್ರದಲ್ಲೂ ಸೋತು ಹೋದರು' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ.

`ಜಾತಿ ಗಣತಿ ವರದಿಯ ಆಯ್ದ ಭಾಗಗಳು 2017ರಲ್ಲಿ ಸೋರಿಕೆಯಾಗುವುದರ ಹಿಂದೆ ನಿಮ್ಮ ಪ್ರಗತಿಪರ ಪಟಾಲಂನ ಕೈವಾಡ ಇತ್ತಲ್ಲವೇ ಸಿದ್ದರಾಮಯ್ಯ? ಚುನಾವಣೆಯ ದೃಷ್ಟಿಯಿಂದ ಜಾತಿ ಸಮೀಕರಣ ಮಾಡುವುದಕ್ಕಾಗಿಯೇ ನೀವು ಈ ಅಸಹ್ಯದ ಕೆಲಸ ಮಾಡಿಸಿದ್ದನ್ನು ಒಪ್ಪಿಕೊಳ್ಳುವಿರಾ!? ಸಿದ್ದರಾಮಯ್ಯ ಅವರೇ, ನಿಮ್ಮ ಸರಕಾರ ನಡೆಸಿದ್ದ ಜಾತಿ ಗಣತಿ ಬಗ್ಗೆ ಮೊದಲು ಆಕ್ಷೇಪ ವ್ಯಕ್ತಪಡಿಸಿದ್ದೆ ಕಾಂಗ್ರೆಸ್ಸಿಗರು. ವರದಿ ಸಲ್ಲಿಕೆಯಾಗುವುದಕ್ಕೆ ಮುನ್ನವೇ ಆಯ್ದ ಭಾಗ ಸೋರಿಕೆಯಾದರೆ ಆ ವರದಿಯ ಪಾವೀತ್ರ್ಯತೆ ಬಗ್ಗೆ ಯಾವ ಭಾವನೆ ಬರಲು ಸಾಧ್ಯ?' ಎಂದು ಬಿಜೆಪಿ ಲೇವಡಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News