ಮಧ್ಯಪ್ರದೇಶ: ಕಳ್ಳನೆಂಬ ಶಂಕೆಯಲ್ಲಿ ವ್ಯಕ್ತಿಯನ್ನು ಥಳಿಸಿ ಟ್ರಕ್ ನಲ್ಲಿ ಕಟ್ಟಿ ಎಳೆದೊಯ್ದು ಕೊಲೆಗೈದ ದುಷ್ಕರ್ಮಿಗಳು

Update: 2021-08-28 16:34 GMT
photo: twitter

ಭೋಪಾಲ್: ಕಳ್ಳನೆಂಬ ಶಂಕೆಯ ಮೇರೆಗೆ  45 ವರ್ಷದ ಆದಿವಾಸಿ ವ್ಯಕ್ತಿಯೊಬ್ಬನನ್ನು ಮನಬಂದಂತೆ ಥಳಿಸಿದ ದುಷ್ಕರ್ಮಿಗಳ ಗುಂಪೊಂದು ಬಳಿಕ ಆ ವ್ಯಕ್ತಿಯ ಕಾಲುಗಳಿಗೆ ಹಗ್ಗವನ್ನು ಕಟ್ಟಿ ಪಿಕ್ ಅಪ್ ಟ್ರಕ್ ನಿಂದ ಎಳೆದೊಯ್ದು ಸಾಯಿಸಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ನೀಮುಚ್ ನಲ್ಲಿ ನಡೆದಿದೆ.

ತಮ್ಮೊಂದಿಗೆ ಒಬ್ಬ ಕಳ್ಳ ಸಿಕ್ಕಿಬಿದ್ದಿದ್ದಾನೆ ಎಂದು ಹೇಳುತ್ತಾ ವ್ಯಕ್ತಿಯೊಬ್ಬ ಪೋಲಿಸ್ ಸಹಾಯವಾಣಿ ಸಂಖ್ಯೆಗೆ ಡಯಲ್ ಮಾಡಿದ್ದ. ಸ್ಥಳಕ್ಕಾಗಮಿಸಿದ ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆತನನ್ನು ನೀಮುಚ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲು ಸೂಚಿಸಲಾಯಿತು. ಅಲ್ಲಿ ಅವರು ಬರುವಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ಜೆತಿಯಾ ಗ್ರಾಮದಲ್ಲಿ ಗುರುವಾರ ನಡೆದ ದುರಂತದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಚಪ್ಪಲಿ ಧರಿಸಿದ್ದ ವ್ಯಕ್ತಿಯೊಬ್ಬ ಆದಿವಾಸಿ ವ್ಯಕ್ತಿಯ  ಮುಖದ ಮೇಲೆ ಥಳಿಸುತ್ತಿರುವುದು ವೀಡಿಯೊದಲ್ಲಿ ಕಾಣುತ್ತಿದೆ. ಆ ವ್ಯಕ್ತಿಯು  ತನ್ನನ್ನು  ಹೋಗಲು ಬಿಡಿ ಎಂದು ಮನವಿ ಮಾಡಿದರೂ ದುಷ್ಕರ್ಮಿಗಳ ಗುಂಪು ಚೆನ್ನಾಗಿ ಥಳಿಸಿದೆ.

ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾದ ವ್ಯಕ್ತಿಯನ್ನು  ಕನ್ಹಾ, ಅಲಿಯಾಸ್ ಕನ್ಹಿಯಾ ಭೀಲ್ ಎಂದು ಗುರುತಿಸಲಾಗಿದ್ದು, ಇವರು ಬನದಾ ಹಳ್ಳಿಯ ನಿವಾಸಿಯಾಗಿದ್ದಾರೆ.

"ಈ ಪ್ರಕರಣದಲ್ಲಿ ಎಂಟು ಜನರನ್ನು ಗುರುತಿಸಲಾಗಿದೆ. ಅವರಲ್ಲಿ ಐವರನ್ನು ಬಂಧಿಸಲಾಗಿದೆ, ಉಳಿದವರನ್ನು ಶೀಘ್ರವೇ ಬಂಧಿಸಲಾಗುವುದು. ವೈರಲ್ ವೀಡಿಯೊವು ಅಪರಾಧಿಗಳನ್ನು ಗುರುತಿಸಲು ಸಹಾಯ ಮಾಡಿತು" ಎಂದು ನೀಮುಚ್ ಪೊಲೀಸ್ ವರಿಷ್ಠಾಧಿಕಾರಿ ಸೂರಜ್ ವರ್ಮಾ ಹೇಳಿದರು.

ಆರೋಪಿಗಳ ವಿರುದ್ಧ ಕೊಲೆ, ಪರಿಶಿಷ್ಟ ಜಾತಿ ಹಾಗೂ  ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷನ್ ಗಳ ವಿರುದ್ಧ ಆರೋಪ ಹೊರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News