ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಲ ಹೆಚ್ಚಳ: ಅರುಣ್ ಸಿಂಗ್

Update: 2021-08-31 06:25 GMT

ಮೈಸೂರು, ಆ.31: ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಹೆಚ್ಚು ಸದೃಢವಾಗುತ್ತಿದೆ. ಪಂಚಾಯತ್ ಚುನಾವಣೆಯಲ್ಲಿ ಹಾಸನ, ಮಂಡ್ಯ ಮತ್ತಿತರ ಕಡೆಗಳಲ್ಲಿ ಪಕ್ಷಕ್ಕೆ ಹೆಚ್ಚು ಲಾಭವಾಗಿದೆ. ಆರರಿಂದ 10 ಪಟ್ಟು ಹೆಚ್ಚು ಸೀಟುಗಳು ಲಭಿಸಿವೆ ಎಂದು ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಆಗಿರುವ ಅರುಣ್ ಸಿಂಗ್ ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪಕ್ಷ ಎಲ್ಲೆಡೆ ಬೆಳೆಯುತ್ತಿದೆ. ಕರ್ನಾಟಕದ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿ ಮತ್ತೆ ಅಧಿಕಾರಕ್ಕೆ ಬರುವಂತೆ ಗರಿಷ್ಠ ಪ್ರಯತ್ನ ಮುಂದುವರಿಯಲಿದೆ. ಮೈಸೂರಿನ ಸಂಸದರು ಮತ್ತು ಶಾಸಕರು ಉತ್ತಮವಾಗಿ ಕೆಲಸ ಮಾಡಿದ್ದು, ಅಭಿವೃದ್ಧಿ ಕಾಮಗಾರಿಗಳು ನಡೆದಿವೆ ಎಂದು ಮೆಚ್ಚುಗೆ ಸೂಚಿಸಿದರು.

ಮೈಸೂರು- ಬೆಂಗಳೂರು ನಡುವಿನ ಹೆದ್ದಾರಿಯನ್ನು ದಶಪಥ ರಸ್ತೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಶೀಘ್ರವೇ ಕಾಮಗಾರಿ ಪೂರ್ಣವಾಗಲಿದ್ದು, ಕೇವಲ 90 ನಿಮಿಷದಲ್ಲಿ ಬೆಂಗಳೂರು ತಲುಪಲು ಇದು ಪೂರಕ ಎಂದು ವಿವರಿಸಿದರು.

ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಎಲ್ಲ ಸಚಿವರು ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದಾರೆ. ಯುವಕರು, ಬಡವರು, ರೈತರು ಮತ್ತು ಮಹಿಳೆಯರು ಸೇರಿ ಸಮಾಜದ ಎಲ್ಲರ ಒಳಿತಿಗಾಗಿ ಸರಕಾರ ಕೆಲಸ ಮಾಡಲಿದೆ ಎಂದು ವಿವರಿಸಿದರು.

ಮೈಸೂರು ಸಂಸದ ಪ್ರತಾಪ್ ಸಿಂಹ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮೈಸೂರು ಜಿಲ್ಲಾಧ್ಯಕ್ಷ ಶ್ರೀವತ್ಸ, ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್, ಪಕ್ಷದ ಪದಾಧಿಕಾರಿಗಳು, ಮುಖಂಡರು ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News