ಸೆ.1ರಿಂದ 'ನೋ ವಾಕ್ಸಿನೇಶನ್ ನೋ ರೇಷನ್- ನೋ ಪೆನ್ಷನ್': ಚಾಮರಾಜನಗರ ಡಿಸಿ ರವಿ ಆದೇಶ

Update: 2021-08-31 11:01 GMT

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಲಸಿಕೆ ಪಡೆಯದೇ ಇರುವ ಕುಟುಂಬಗಳಿಗೆ ಪಡಿತರ ಹಾಗೂ ಪಿಂಚಣಿ ಪಾವತಿ ಮಾಡದಿರಲು ಸೂಚನೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಮಾಧ್ಯಮದವರೊಂದಿಗೆ ಮಾತನಾಡಿ, ಚಾಮರಾಜನಗರ ಜಿಲ್ಲೆಯು ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಪ್ರದೇಶವಾಗಿದ್ದು, ಜಿಲ್ಲೆಯಲ್ಲಿ ಕಡ್ಡಾಯ ಲಸಿಕೆ ಮಹಾ ಮೇಳವನ್ನು ಆಯೋಜಿಸಲಾಗಿದೆ. ಲಸಿಕೆ ಹಾಕಲು 238 ತಂಡಗಳಿದ್ದು, 20 ಮೊಬೈಲ್ ತಂಡ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ ಎಂದರು.

ಚಾಮರಾಜನಗರ ಜಿಲ್ಲೆಯಲ್ಲಿ ಶೇ.75ರಷ್ಟು ಲಸಿಕೆ ಪೂರೈಕೆಯಾಗಿದೆ. ಜನರ ಹಿತದೃಷ್ಟಿಯಿಂದ ಜೀವದ ರಕ್ಷಣೆ ಮಾಡುವ ಸಲುವಾಗಿ ಸಾರ್ವಜನಿಕರಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಲು ಉತ್ತೇಜನ ನೀಡುವ ಸಲುವಾಗಿ ಸೆ.1ರಿಂದ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಕೋವಿಡ್ ನಿಯಂತ್ರಣ ಲಸಿಕೆ ಹಾಕಿಸಿರಬೇಕು. 'ನೋ ವ್ಯಾಕ್ಸಿನೇಶನ್ ನೋ ರೇಷನ್' ಎಂಬ ಘೋಷಣೆಯೊಂದಿಗೆ ಅಭಿಯಾನ ನಡೆಯಲಿದೆ ಎಂದರು.

ಚಾಮರಾಜನಗರ ಜಿಲ್ಲೆಯಲ್ಲಿ 2 ಲಕ್ಷ 90 ಸಾವಿರ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ಗಳಿದ್ದು, ಅವರೆಲ್ಲರೂ ಕೋವಿಡ್ ನಿಯಂತ್ರಣ ಲಸಿಕೆ ಪಡೆಯಬೇಕು. ಇಲ್ಲದಿದ್ದರೆ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ಸಿಗುವುದಿಲ್ಲ ಎನ್ನುವ ಸೂಚನೆಯನ್ನು ನೀಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಸಾರ್ವಜನಿಕರಲ್ಲಿ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಉದಾಸೀನ ಇದ್ದು, ಸೋಂಕಿನ ನಿಯಂತ್ರಣಕ್ಕೆ ಲಸಿಕೆಯ ಗಂಭೀರತೆ ಹಾಗೂ ಮುಂಜಾಗ್ರತೆ ಇರಬೇಕಾಗಿದೆ ಎಂದರು.

ಜಿಲ್ಲೆಯಲ್ಲಿ 2.20 ಲಕ್ಷ ಮಂದಿ ಪ್ರತಿ ತಿಂಗಳು ಬ್ಯಾಂಕ್ ಮೂಲಕ ಪಿಂಚಣಿ ಪಡೆಯುತ್ತಾರೆ. ಪಿಂಚಣಿ ಪಡೆಯುವವರು ಲಸಿಕೆ ಪಡೆದಿಲ್ಲ ಎಂದರೆ ಪಿಂಚಣಿ ಹಣ ಪಾವತಿಸದಂತೆ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಡಳಿತದಿಂದ ಸೂಚಿಸಲಾಗಿದೆ ಎಂದು ಹೇಳಿದ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ, ಎಲ್ಲರೂ ವ್ಯಾಕ್ಸಿನೇಶನ್ ಕಡ್ಡಾಯವಾಗಿ ಪಡೆಯಲು ಈ ಕ್ರಮ ವಹಿಸಲಾಗಿದೆ ಎಂದರು.

ಅಂತರ್‌ರಾಜ್ಯ ಗಡಿ ಪ್ರದೇಶ ಗಡಿಯಲ್ಲಿ 9 ಪಿ.ಎಚ್.ಸಿ. ಬರಲಿದ್ದು, 170 ಗ್ರಾಮಗಳಿವೆ. 90ರಷ್ಟು ಜನರನ್ನು ಲಸಿಕೆಗೆ ಒಳಪಡಿಸಲಾಗಿದೆ. ಒಂದೆರಡು ದಿನಗಳಲ್ಲಿ ಶೇ.100ರಷ್ಟು ಲಸಿಕೆ ನೀಡುವ ವಿಶ್ವಾಸ ಇದೆ ಎಂದು ಹೇಳಿದ ಅವರು, ಸಾರ್ವಜನಿಕರು ಜಿಲ್ಲಾಡಳಿತದ ಅಭಿಯಾನಕ್ಕೆ ಸಹಕಾರ ನೀಡಬೇಕು. ಕೋವಿಡ್ ವಿರುದ್ಧದ ಅಭಿಯಾನಕ್ಕೆ ಸಹಕರಿಸಬೇಕೆಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News