ಪ್ರಿಯಕರನ ಹತ್ಯೆ ಪ್ರಕರಣ: ಮನನೊಂದ ಅಪ್ರಾಪ್ತ ವಯಸ್ಸಿನ ಬಾಲಕಿ ಬಾಲಮಂದಿರದಲ್ಲಿ ಆತ್ಮಹತ್ಯೆ

Update: 2021-08-31 12:58 GMT
ಸಾಂದರ್ಭಿಕ ಚಿತ್ರ

ಮಂಡ್ಯ, ಆ.31: ಪ್ರಿಯಕರನ ಹತ್ಯೆಯಿಂದ ಮನನೊಂದ ಅಪ್ತಾಪ್ತ ಬಾಲಕಿ ನಗರದ ಬಾಲಕಿಯರ ಬಾಲಮಂದಿರದ ಶೌಚಾಲಯದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಮಂಗಳವಾರ ನಡದಿದೆ.

ನಗರದ ಕಲ್ಲಹಳ್ಳಿ ಬಡಾವಣೆಯ ನಿವಾಸಿ ನಗರಸಭೆ ಸದಸ್ಯ ಶಿವಲಿಂಗು ಪುತ್ರಿ ಮಾನ್ವಿತಾ ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತ ಬಾಲಕಿ. ಪ್ರಿಯಕರನ ಕೊಲೆ ಆರೋಪದಲ್ಲಿ ಈಕೆಯ ಪೋಷಕರು ಜೈಲು ಸೇರಿರುವ ಹಿನ್ನೆಲೆಯಲ್ಲಿ ಈಕೆಯನ್ನು ಬಾಲಮಂದಿರದಲ್ಲಿ ಇಡಲಾಗಿತ್ತು.

ಮಾನ್ವಿತಾ ಹಾಗೂ ಅದೇ ಬಡಾವಣೆಯ ನಿವಾಸಿ ಸತೀಶ್ ಎಂಬುವರ ಪುತ್ರ ದರ್ಶನ್(17) ಪ್ರೀತಿಸುತ್ತಿದ್ದು, ಇದನ್ನು ಸಹಿಸದ ಮಾನ್ವಿತಾ ಪೋಷಕರು ಕಳೆದ ಎಪ್ರಿಲ್ 15 ರಂದು ದರ್ಶನ್‌ನನ್ನು ಥಳಿಸಿ ಕೊಲೆಗೈದ ಆರೋಪ ಎದುರಿಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಮಾನ್ವಿತಾ ತಂದೆ ಶಿವಲಿಂಗು ಸೇರಿದಂತೆ ಕುಟುಂಬದ 14 ಮಂದಿ ವಿರುದ್ಧ ಪ್ರಕರಣ ದಾಖಲಾಗಿ ಜೈಲಿನಲ್ಲಿದ್ದುಕೊಂಡು ವಿಚಾರಣೆ ಎದುರಿಸುತ್ತಿದ್ದಾರೆ. ತನ್ನ ಪೋಷಕರು ಜೈಲಿಗೆ ಹೋದ ಬಳಿಕ ಮನೆಯಲ್ಲಿರಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮಾನ್ವಿತಾಳನ್ನು ನಗರದ ಬಾಲಕಿಯರ ಬಾಲಮಂದಿರದಲ್ಲಿ ಇಡಲಾಗಿತ್ತು. 

ಮಾನ್ವಿತಾ ತಂದೆ ತಾಯಿ, ಇತರರು ಕೊಲೆ ಪ್ರಕರಣದ ಆರೋಪದಲ್ಲಿ ಜೈಲಿನಲ್ಲಿದ್ದಾರೆ. ಅಂದಿನಿಂದ ಬಾಲಮಂದಿರದಲ್ಲಿರುವ ಮಾನ್ವಿತಾಳನ್ನು ನೋಡಲು ಒಂದು ಬಾರಿ ಹೊರತುಪಡಿಸಿ ಮತ್ತೆ ಅವಕಾಶ ನೀಡಿರಲಿಲ್ಲ ಎಂದು ಮಾನ್ವಿತಾಳ ಪೋಷಕರು ಆರೋಪಿಸಿದ್ದಾರೆ.

ಆತ್ಮಹತ್ಯೆ ಪ್ರಕರಣ ಸಂಬಂಧ ನಗರದ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News