ಗೃಹ ಸಚಿವರ ಕಾರ್ಯಕ್ರಮದ ಮಧ್ಯೆ ಅಸ್ವಸ್ಥಗೊಂಡು ಕುಸಿದು ಬಿದ್ದ ಪೊಲೀಸ್ ಸಿಬ್ಬಂದಿ: ನೆರವಿಗೆ ಧಾವಿಸಿದ ಎಸ್ಪಿ

Update: 2021-08-31 12:58 GMT

ಚಿಕ್ಕಮಗಳೂರು, ಆ.31: ಜಿಲ್ಲೆಯ ಕಡೂರು ಪಟ್ಟಣದ ಪೊಲೀಸ್ ತರಬೇತಿ ಶಾಲಾ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಭಾಷಣ ಮಾಡುತ್ತಿದ್ದಾಗ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ತಲೆ ಸುತ್ತಿ ಕುಸಿದು ಬಿದ್ದಿದ್ದು, ಈ ವೇಳೆ ಎಸ್ಪಿ ಎಂ.ಎಚ್.ಅಕ್ಷಯ್ ಸಿಬ್ಬಂದಿಯನ್ನು ಎತ್ತಿ ಮಾನವೀಯತೆ ಮೆರೆದಿದ್ದಾರೆ.

ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಕಾರ್ಯಕ್ರಮದ ಅಂಗವಾಗಿ ಕಡೂರು ಪಟ್ಟಣಕ್ಕೆ ಆಗಮಿಸಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ತರಬೇತಿ ಪಡೆದ ಪೊಲೀಸರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ತರಬೇತಿ ಪೊಲೀಸರ ನಿರ್ಗಮನ ಪಥಸಂಚಲನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮೈಸೂರು ಅಶ್ವದಳದ ಮೈನುದ್ದೀನ್ನ ಎಂಬವರು ವೇದಿಕೆ ಬಳಿ ಬಸಿಲಿನಲ್ಲಿ ನಿಂತಿದ್ದರು. ಈ ವೇಳೆ ಅವರು ಬಿಸಿಲಿನ ತಾಪಕ್ಕೆ ತಲೆ ಸುತ್ತಿ ವೇದಿಕೆ ಮುಂಭಾಗದಲ್ಲೇ ದಿಢೀರ್ ಕುಸಿದು ಬಿದ್ದಿದ್ದಾರೆ. 

ಆಗ ವೇದಿಕೆಯಲ್ಲಿ ಕುಳಿತಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ಅವರು ವೇದಿಕೆಯಿಂದ ಎದ್ದವರೇ ನೆಲದಲ್ಲಿ ಕುಸಿದು ಬಿದ್ದಿದ್ದ ಮೈನುದ್ದೀನ್ ಅವರ ಭುಜ ಹಿಡಿದು ಎತ್ತಿಕೊಂಡಿದ್ದಾರೆ. ಬಳಿಕ ತಾವು ಕುಳಿತಿದ್ದ ವೇದಿಕೆಯ ಚೇರ್‍ನಲ್ಲಿ ಕೂರಿಸಿ ಆರೈಕೆ ಮಾಡಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಅಂಬುಲೆನ್ಸ್ ಸಿಬ್ಬಂದಿ, ಎಎಸ್ಪಿ ಶೃತಿ ಸೇರಿದಂತೆ ಪೊಲೀಸ್ ಇಲಾಖೆಯ ಇತರ ಅಧಿಕಾರಿಗಳು ಅಸ್ವಸ್ಥಗೊಂಡಿದ್ದ ಮೈನುದ್ದೀನ್ ಅವರನ್ನು ಸ್ಟ್ರೇಚರ್ ಮೇಲೆ ಮಲಗಿಸಿ ಆಂಬುಲೆನ್ಸ್‍ನಲ್ಲಿ ಆಸ್ಪತ್ರೆಗೆ ಸಾಗಿಸಿದರು.

ಚಿಕಿತ್ಸೆ ಬಳಿಕ ಪೊಲೀಸ್ ಇಲಾಖೆ ಸಿಬ್ಬಂದಿ ಮೈನುದ್ದೀನ್ ಚೇತರಿಸಿಕೊಂಡಿದ್ದಾರೆಂದು ತಿಳಿದು ಬಂದಿದ್ದು, ವೇದಿಕೆ ಕಾರ್ಯಕ್ರಮದ ಸಂದರ್ಭ ಎರಡೂ ಬದಿಯಲ್ಲಿ ನಿಂತಿದ್ದ ಪೊಲೀಸ್ ಸಿಬ್ಬಂದಿ ಪೈಕಿ ಮೈನುದ್ದೀನ್ ಅವರು ಬಿಸಿಲ ತಾಪದಿಂದಾಗಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆನ್ನಲಾಗಿದೆ. 

ಘಟನೆಯ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೈನುದ್ದೀನ್ ಅವರು ಕುಸಿದು ಬಿದ್ದ ಸಂದರ್ಭದಲ್ಲಿ ಇಲಾಖೆಯ ಇತರ ಸಿಬ್ಬಂದಿಗೂ ಮುನ್ನ ಸ್ಥಳಕ್ಕೆ ದೌಡಾಯಿಸಿ ಅಸ್ವಸ್ಥಗೊಂಡ ಸಿಬ್ಬಂದಿಯನ್ನು ಎತ್ತಿದ ಎಸ್ಪಿ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News