ಗೋಹತ್ಯೆ ನಿಷೇಧಕ್ಕೆ ಆರೆಸ್ಸೆಸ್‍ನಿಂದ ಯಾವುದೇ ಒತ್ತಡವಿರಲಿಲ್ಲ: ಸಚಿವ ಪ್ರಭು ಚವ್ಹಾಣ್

Update: 2021-08-31 14:09 GMT
ಸಚಿವ ಪ್ರಭು ಚವ್ಹಾಣ್ 

ಹೊಸಪೇಟೆ(ವಿಜಯನಗರ), ಆ.31: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವುದಕ್ಕೆ ಆರೆಸ್ಸೆಸ್‍ನಿಂದ ಯಾವುದೇ ಒತ್ತಡ ಇರಲಿಲ್ಲ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ. 

ಮಂಗಳವಾರ ಹೊಸಪೇಟೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಹತ್ಯೆ ನಿಷೇಧಿಸಬೇಕು ಎನ್ನುವುದು ಬಹುವರ್ಷಗಳ ಬೇಡಿಕೆಯಾಗಿತ್ತು. ಅದಕ್ಕೆ ನಮ್ಮ ಸರಕಾರ ಸ್ಪಂದಿಸಿ, ಕಠಿಣ ಕಾನೂನು ಜಾರಿಗೆ ತಂದಿದೆ ಎಂದರು. 

ಕಸಾಯಿಖಾನೆಗಳಿಗೆ ಗೋವು ಹೋಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ವಾರ್ ರೂಂ ಸ್ಥಾಪಿಸಲಾಗಿದ್ದು, ಪ್ರತಿ ತಿಂಗಳು ಹತ್ತು ಸಾವಿರ ಕರೆಗಳು ಬರುತ್ತಿವೆ. ಪೊಲೀಸರೊಂದಿಗೆ ಪಶು ಸಂಗೋಪನಾ ಇಲಾಖೆಯ ವೈದ್ಯರು ಕೂಡ ಕೆಲಸ ಮಾಡುತ್ತಿದ್ದಾರೆ. ಗೋಶಾಲೆ ಸ್ಥಾಪನೆಗೆ ಪ್ರತಿ ಜಿಲ್ಲೆಗೆ ತಲಾ 50 ಲಕ್ಷ ರೂ. ಮಂಜೂರಾಗಿದೆ ಎಂದು ತಿಳಿಸಿದರು. 

ಗೋಹತ್ಯೆ ನಿಷೇಧದ ನಂತರ ಪ್ರಾಣಿ ಸಂಗ್ರಹಾಲಯಗಳಲ್ಲಿ ಪ್ರಾಣಿಗಳಿಗೆ ಕೋಳಿ, ಕುರಿ ಮಾಂಸ ಕೊಡಲಾಗುತ್ತಿದ್ದು, ಅವುಗಳು ಅದಕ್ಕೆ ಹೊಂದಿಕೊಂಡಿಲ್ಲ ಎಂದು ಯಾವುದೇ ಜೂನಿಂದ ದೂರುಗಳು ಬಂದಿಲ್ಲ. ಆದರೆ, 13 ವರ್ಷ ಮೇಲಿನ ಕೋಣದ ಮಾಂಸ ಕೊಡಲು ಅವಕಾಶ ಇದೆ. ಅನ್ಯ ರಾಜ್ಯಗಳಿಂದ ಗೋಮಾಂಸ ರಫ್ತು ಮಾಡುತ್ತಿರುವುದರ ಬಗ್ಗೆ ನಾನೇನೂ ಪ್ರತಿಕ್ರಿಯಿಸಲಾರೆ. ನಾನು ನನ್ನ ರಾಜ್ಯದ ಬಗ್ಗೆ ಮಾತನಾಡುವೆ ಎಂದು ಚವ್ಹಾಣ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News